Site icon Vistara News

ED Case | ಇಂದು ಇಡಿ ವಿಶೇಷ ನ್ಯಾಯಾಲಯದಲ್ಲಿ ಡಿಕೆಶಿ ವಿಚಾರಣೆ

ಡಿ.ಕೆ.ಶಿವಕುಮಾರ್‌

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದ ಹಿನ್ನೆಲೆಯಲ್ಲಿ ಶನಿವಾರ (ಜು.೩೦) ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ನವ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ED Case) ವಿಶೇಷ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲಿದ್ದಾರೆ.

ಈ ಪ್ರಕರಣ ಸಂಬಂಧ ಇದೇ ತಿಂಗಳು ಜುಲೈ 1 ರಂದು ವಿಚಾರಣೆಗೆ ಡಿ.ಕೆ.ಶಿವಕುಮಾರ್‌ ಹಾಜರಾಗಿದ್ದರು. ಈ ವೇಳೆ ಜಾಮೀನಿಗೆ ಆಕ್ಷೇಪ ಸಲ್ಲಿಸಲು ಸಮಯಾವಕಾಶ ಕೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಜುಲೈ 30 ರಂದು ವಿಚಾರಣೆ ಮುಂದೂಡಲಾಗಿತ್ತು. ಹೀಗಾಗಿ ಶನಿವಾರ ಡಿ.ಕೆ.ಶಿವಕುಮಾರ್‌ ಅವರು ಮತ್ತೆ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

ಜಾಮೀನು ಅರ್ಜಿ ವಿಚಾರಣೆ

ಕಳೆದ ಬಾರಿ ವಿಚಾರಣೆ ವೇಳೆ ಡಿಕೆಶಿ ಪರ ವಕೀಲರು ಜಾಮೀನಿಗಾಗಿ ವಾದ ಮಂಡಿಸಿದ್ದರು. ನವ ದೆಹಲಿ ಕೋರ್ಟ್ ಈಗಾಗಲೇ ಈ ಪ್ರಕರಣದಲ್ಲಿ ಶಿವಕುಮಾರ್‌ ಅವರಿಗೆ ಜಾಮೀನು ನೀಡಿದೆ. ಇಡಿ ವಿಶೇಷ ನ್ಯಾಯಾಲಯ ಸಹ ಜಾಮೀನು ನೀಡಬೇಕು ಎಂದು ಕೋರಿದ್ದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಇಡಿ ಪರ ವಕೀಲರು, ಕೋರ್ಟ್ ಜಾಮೀನು ನೀಡಬಾರದು ಎಂದು ಕೋರಿದ್ದರು.

ಈ ವೇಳೆ ಪ್ರತಿವಾದ ಮಂಡಿಸಿದ್ದ ಡಿಕೆಶಿ ಪರ ವಕೀಲರು, ಈಗಾಗಲೇ ಕಾರ್ತಿಕ್ ಚಿದಂಬರಂಗೆ ಜಾಮೀನು ನೀಡಲಾಗಿದೆ. ಹೀಗಾಗಿ ಡಿ.ಕೆ. ಶಿವಕುಮಾರ್‌ ಅವರಿಗೂ ಜಾಮೀನು ನೀಡಬಹುದು ಎಂದು ವಾದ ಮಂಡಿಸಿದ್ದರು. ವಾದ-ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿಗಳು ಜುಲೈ 30ಕ್ಕೆ ವಿಚಾರಣೆ ಮುಂದೂಡಿದ್ದರು. ಈ ಹಿನ್ನೆಲೆಯಲ್ಲಿ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಇಡಿಗೆ ಸಹ ಸಮಯಾವಕಾಶ ಸಿಕ್ಕಿತ್ತು. ಆದ್ದರಿಂದ ಇಂದು ಡಿಕೆಶಿ ಜಾಮೀನು ವಿಚಾರವಾಗಿ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ | ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್‌; ಡಿಕೆಶಿ ಜತೆಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದ ಸಿ.ಟಿ. ರವಿ

ಏನಿದು ಪ್ರಕರಣ?

ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಜಾರಿ ನಿರ್ದೇಶನಾಲಯ ಡಿ.ಕೆ.ಶಿವಕುಮಾರ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ನವ ದೆಹಲಿಯಲ್ಲಿ ಬಂಧಿಸಿ ತಿಹಾರ್‌ ಜೈಲಿಗೆ ಕಳಿಸಿತ್ತು. ತನಿಖೆ ಪೂರ್ಣಗೊಳಿಸಿರುವ ಇ.ಡಿ ಜೂನ್‌ ಕೊನೆಯ ವಾರದಲ್ಲಿ ದೋಷಾರೋಪ ಪಟ್ಟಿಯನ್ನು ದೆಹಲಿಯಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ದೆಹಲಿಯ ಸಫ್ಧರ್‌ಜಂಗ್ ಅಪಾರ್ಟ್‌ಮೆಂಟ್‌ನಲಿ ಸಿಕ್ಕ 6.61 ಕೋಟಿ ರೂ. ಡಿ.ಕೆ.ಶಿವಕುಮಾರ್ ಅವರದ್ದೇ ಎಂದು ವಿಚಾರಣೆ ವೇಳೆ ಆರೋಪಿ ಆಂಜನೇಯ ಬಾಯಿ ಬಿಟ್ಟಿದ್ದರು. ಡಿ.ಕೆ. ಶಿವಕುಮಾರ್‌ ಅವರ ಅಕ್ರಮ ಹಣದ ವ್ಯವಹಾರವನ್ನು ರಾಜೇಂದ್ರ ಹಾಗೂ ಆಂಜನೇಯ ನೋಡಿಕೊಳ್ಳುತ್ತಿದ್ದರು. ಸುರೇಶ್ ಶರ್ಮಾ ಅವರ ಫ್ಲಾಟ್‌ ಅನ್ನು ಡಿ.ಕೆ.ಶಿವಕುಮಾರ್ ಹಾಗೂ ಸುನಿಲ್ ಶರ್ಮಾ ಹಾಗೂ ಡಿಕೆಶಿ ಅಕ್ರಮ ಹಣ ಸಂಗ್ರಹಣೆ ಬಳಸುತ್ತಿದ್ದರು. ಡಿಕೆಶಿ ಸೂಚನೆ ಮೇರೆಗೆ 1 ಕೋಟಿ ರೂ., 2 ಕೋಟಿ ರೂ., 1.5 ಕೋಟಿ ರೂ. ಹೀಗೆ ಹಲವು ಬಾರಿ ಸಾಗಾಟ ಮಾಡಲಾಗಿದೆ. ಏನೇ ಸಮಸ್ಯೆ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಆಂಜನೇಯಗೆ ಹೇಳಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ಜಾಗ ಕೊಡುವ ಭರವಸೆ ನೀಡಿದ್ದಾರೆ ಎಂಬ ಮಹತ್ವದ ಅಂಶಗಳು ಇ.ಡಿ. ಚಾರ್ಜ್‌ಶೀಟ್‌ನಲ್ಲಿವೆ. (ಚಾರ್ಜ್‌ಶೀಟ್‌ನ ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ)

ಆರೋಪ ಪಟ್ಟಿ ಸಲ್ಲಿಕೆ ನಂತರ ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್‌ ನೀಡಿತ್ತು. ಕೆಪಿಸಿಸಿ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ರಾಜ್ಯ ವಿಧಾನಸಭೆ ಚುನಾವಣೆ ಕುರಿತು ಚರ್ಚೆ ನಡೆಸಲು ಮೂರು ದಿನದಿಂದ ನವ ದೆಹಲಿಯಲ್ಲಿ ಉಳಿದುಕೊಂಡಿದ್ದ ಡಿ.ಕೆ. ಶಿವಕುಮಾರ್‌ ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಜುಲೈ ೩೦ಕ್ಕೆ ವಿಚಾರಣೆಯನ್ನು ಮುಂದೂಡಲಾಗಿತ್ತು.

ಮುಂದಿನ ದಿನಗಳಲ್ಲಿ ಪ್ರಕರಣದ ವಿಚಾರಣೆ ಬಿರುಸು ಪಡೆಯಬಹುದು ಎನ್ನಲಾಗಿದೆ. ಆದರೆ ವಿಧಾನಸಭೆ ಚುನಾವಣೆ ಹತ್ತಿರವಾದಂತೆ ಡಿ.ಕೆ. ಶಿವಕುಮಾರ್‌ ಅವರಿಗೆ ಇ.ಡಿ. ಪ್ರಕರಣದಿಂದ ರಾಜಕೀಯವಾಗಿ ಸಂಕಷ್ಟಗಳು ಎದುರಾಗುವ ಅಪಾಯಗಳಿವೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ | ಭ್ರಷ್ಟಾಚಾರದ ಚರ್ಚೆಗೆ ಟೈಮ್‌ ಕೊಡ್ತೇನೆ, ಹಿಂದೆ ಸರಿಯಲಾರೆ ಎಂದ ಡಿಕೆಶಿ

Exit mobile version