Site icon Vistara News

Edible Oil Rate | ಗಣೇಶ ಚತುರ್ಥಿಗೂ ಮೊದಲೇ ಅಡುಗೆ ಎಣ್ಣೆ ದರ ಇಳಿಕೆ, ತಿನಿಸು ಮಾಡಲು ಬೇಕಿಲ್ಲ ದುಡ್ಡಿನ ಎಣಿಕೆ

Edible Oil

-ಹೂವಪ್ಪ ಎಚ್. ಇಂಗಳಗೊಂದಿ

ಬೆಂಗಳೂರು: ಗಣೇಶ ಚತುರ್ಥಿ ಬರುತ್ತಿದೆ. ಮೋದಕ ಪ್ರಿಯನ ಹಬ್ಬಕ್ಕೆ ನಾಲ್ಕಾರು ಬಗೆಯ ತಿಂಡಿ ಮಾಡಿ, ಮನೆ ಮಂದಿಯೆಲ್ಲ ಹಬ್ಬ ಆಚರಿಸಲು ದೇಶವೇ ಸಿದ್ಧವಾಗಿದೆ. ಆದರೆ, ಬಡ, ಮಧ್ಯಮ ವರ್ಗದವರಿಗೆ ಬೆಲೆಯೇರಿಕೆಯ ಬಿಸಿಯಿಂದಾಗಿ ಅದ್ಧೂರಿಯಾಗಿ ಹಬ್ಬ ಆಚರಿಸಬೇಕಾ ಎಂಬ ಚಿಂತೆ ಕಾಡುತ್ತಿದೆ. ಆದರೆ, ಹಬ್ಬಕ್ಕೂ ಮುನ್ನವೇ ಅಡುಗೆ ಎಣ್ಣೆಗಳ (Edible Oil Rate) ಬೆಲೆಯು ಗಣನೀಯವಾಗಿ ಇಳಿಕೆಯಾದ ಕಾರಣ ಜನ ಆತಂಕ ಪಡಬೇಕಿಲ್ಲ. ಅದ್ಧೂರಿಯಾಗಿ ಹಬ್ಬ ಆಚರಿಸಲು ಹಿಂದೆ ಮುಂದೆ ನೋಡಬೇಕಿಲ್ಲ.

ಯಾವ ಎಣ್ಣೆಯ ಬೆಲೆ ಎಷ್ಟು ಇಳಿಕೆ?

ಬಡ, ಮಧ್ಯಮ ವರ್ಗದವರು ಹೆಚ್ಚು ಬಳಸುವ ಪಾಮ್ ಆಯಿಲ್ (ತಾಳೆ ಎಣ್ಣೆ) ಕಳೆದ ಜನವರಿ ತಿಂಗಳಿಗೆ ಹೋಲಿಸಿದರೆ ಸಗಟು ಬೆಲೆಯಲ್ಲಿ ಲೀಟರ್‌ಗೆ ಸುಮಾರು 47-48 ರೂ. ಇಳಿಕೆಯಾಗಿದೆ. ಅಂದರೆ 10 ಲೀಟರ್ ತುಂಬಿದ ಪಾಮ್ ಆಯಿಲ್‌ನ ಒಂದು ಬಾಕ್ಸ್‌ಗೆ (ಸಗಟು) 1‌,600 ರೂ. ಇತ್ತು. ಈಗ ಅದರ ಬೆಲೆ 1,120 ರೂ.ಗೆ ಇಳಿದಿದೆ.

ಸಾಮಾನ್ಯವಾಗಿ ಎಲ್ಲರೂ ಬಳಸುವ ಸೂರ್ಯಕಾಂತಿ ಎಣ್ಣೆ ಕೂಡ ಇಳಿಕೆಯಾಗಿದೆ. ಕಳೆದ ಜನವರಿಯಲ್ಲಿ ಸೂರ್ಯಕಾಂತಿ ಎಣ್ಣೆಯ 10 ಲೀಟರ್‌ ಪ್ಯಾಕೆಟ್‌ನ ಒಂದು ಬಾಕ್ಸ್‌ಗೆ ಸಗಟು ದರ ೧,೯೫೦ರಿಂದ ೨,೦೫೦ ರೂ. ಇತ್ತು. ಈಗ ಅದರ ಬೆಲೆ 1,550-1,650 ರೂ. ಆಗಿದೆ. ಒಂದು ಲೀಟರ್‌ಗೆ ೩೯-೪೦ ರೂ. ಇಳಿಕೆಯಾಗಿದೆ. ಇನ್ನು ಚಿಲ್ಲರೆ ಮಾರಾಟದಲ್ಲಿ ಲೀಟರ್‌ಗೆ 190-200 ರೂ. ಇದ್ದ ಸೂರ್ಯಕಾಂತಿ ಎಣ್ಣೆ 160-165 ರೂ.ಗೆ ಇಳಿದಿದೆ. ಪಾಮ್ ಆಯಿಲ್ 160-165 ರೂ.ನಿಂದ 117-120 ರೂ.ಗೆ ಕುಸಿದಿದೆ. 15 ಲೀಟರ್ ಸೂರ್ಯಕಾಂತಿ ಎಣ್ಣೆಯ ಬೆಲೆ 2,980-3,000 ರೂ.ನಿಂದ 2,550-2,650 ರೂ.ಗೆ ಇಳಿದಿದೆ.

ಆಮದು ಏರಿಕೆ, ಬೆಲೆ ಇಳಿಕೆ

ಸಂಸ್ಕರಿಸಿದ ತಾಳೆ ಎಣ್ಣೆಯ ಪ್ರಮಾಣ 11.೪೪ ಲಕ್ಷ ಟನ್‌, ಕಚ್ಚಾ ಪಾಮ್ ಎಣ್ಣೆ 36.59 ಲಕ್ಷ ಟನ್‌, ಕಚ್ಚಾ ಸೋಯಾಬೀನ್ ಎಣ್ಣೆ 33.30 ಲಕ್ಷ ಟನ್‌ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ 15.03 ಲಕ್ಷ ಟನ್‌ ಆಮದಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ. ಖಾದ್ಯ ತೈಲಗಳ ಒಟ್ಟು ದಾಸ್ತಾನು ಜುಲೈ 1 ಕ್ಕಿಂತ ಈಗ 48 ಸಾವಿರ ಟನ್‌ ಹೆಚ್ಚಾಗಿದೆ.

ಬೆಲೆ ಇಳಿಯಲು ಏನು ಕಾರಣ?

ಇಂಡೋನೇಷ್ಯಾವು ಖಾದ್ಯ ತೈಲದ ರಫ್ತು ಮೇಲಿನ ನಿಷೇಧ ಹಿಂಪಡೆದಿರುವುದು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿರುವುದೇ ಇದಕ್ಕೆ ಕಾರಣವಾಗಿದೆ. ಕಳೆದ ಎರಡು ತಿಂಗಳಲ್ಲಿ ಖಾದ್ಯ ತೈಲಗಳ ಅಂತಾರಾಷ್ಟ್ರೀಯ ಬೆಲೆಗಳು ತೀವ್ರವಾಗಿ ಕುಸಿದಿವೆ. ಪಾಮ್ ಆಯಿಲ್ ದರವು ಪ್ರತಿ ಟನ್‌ಗೆ 625 ಡಾಲರ್‌, ಸೋಯಾಬೀನ್‌ ತೈಲ ಬೆಲೆ ೩೭೦ ಡಾಲರ್‌ ಹಾಗೂ ಸೂರ್ಯಕಾಂತಿ ಎಣ್ಣೆ ಪ್ರತಿ ಟನ್‌ಗೆ ೪೫೦ ಡಾಲರ್‌ ಕಡಿಮೆಯಾಗಿದೆ.

ನಾಗರಿಕರು, ಉದ್ಯಮಿಗಳು ಹೇಳುವುದೇನು?

“ಮಲೇಷ್ಯಾ ಹಾಗೂ ಇಂಡೋನೇಷ್ಯಾದಲ್ಲಿ ಪಾಮ್ ಆಯಿಲ್ ದಾಸ್ತಾನು ಅಧಿಕವಾಗಿದೆ. ಹೀಗಾಗಿ ಆಮದು ಜಾಸ್ತಿಯಾಗುವ ಜತೆಗೆ ಆಮದು ಸುಂಕವೂ ಕಡಿಮೆಯಾಗಿದೆ. ಖಾದ್ಯ ತೈಲ ಬೆಲೆ ಕುಸಿಯಲು ಇದು ಪ್ರಮುಖ ಕಾರಣವಾಗಿದೆ.”
ರಾಧಾಕೃಷ್ಣ ಮತ್ತು ಡಿ.ಎಸ್. ಗೋವಿಂದರಾಜ್, ಆಯಿಲ್ ಮಿಲ್ ಮಾಲೀಕರು, ಬೆಂಗಳೂರು.

“ಅಕ್ಕಿ, ಬೇಳೆ, ಬೆಲ್ಲ, ಅಡುಗೆ ಅನಿಲ ಸೇರಿ ಹಲವು ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೆರಿವೆ. ಹಬ್ಬಗಳ ಆಚರಣೆ ಇರಲಿ ದಿನನಿತ್ಯ ಜೀವನ ಸಾಗಿಸುವುದು ದುಸ್ತರವಾಗಿದೆ. ಈಗ ಅಡುಗೆ ಎಣ್ಣೆ ಬೆಲೆ ಇಳಿಕೆಯಾಗಿರುವುದು ಸ್ವಲ್ಪ ಸಮಾಧಾನ ತಂದಿದೆ.”
-ಆರ್.ಶಿಲ್ಪಾ, ಗಾರ್ಮೆಂಟ್ಸ್‌ ಉದ್ಯೋಗಿ, ಬೆಂಗಳೂರು

ಇದನ್ನೂ ಓದಿ | Ganesha wonder| ನಿಮ್ಮೆಸ್ರು ಗಣೇಶನಾ? ಹಾಗಿದ್ದರೆ ಆ. 31ರಂದು ವಂಡರ್‌ ಲಾ ಪಾರ್ಕ್‌ಗೆ ಉಚಿತ ಪ್ರವೇಶ!

Exit mobile version