ಕೊಪ್ಪಳ: ಕಾಂಗ್ರೆಸ್‌ನಲ್ಲಿ ಬಿ.ಕೆ. ಹರಿಪ್ರಸಾದ್ (BK Hariprasad) ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಚಾರ ಈಗ ಸಮುದಾಯದ ಅಸ್ಮಿತೆಯ (Indentity of community) ಸ್ವರೂಪವನ್ನು ಪಡೆದುಕೊಂಡಿದೆ. ಈಡಿಗ/ಬಿಲ್ಲವ ಸಮಾಜವನ್ನು (Ediga/Billava community) ರಾಜಕೀಯವಾಗಿ ವ್ಯವಸ್ಥಿತವಾಗಿ ಮುಗಿಸಲು (Finish in Congress party) ಕಾಂಗ್ರೆಸ್ ಮುಂದಾಗಿದೆ ಎಂಬ ಗಂಭೀರ ಆರೋಪ ಎದುರಾಗಿದೆ. ಇದರ ವಿರುದ್ಧ ರಾಜ್ಯಾದ್ಯಂತ ಹೋರಾಟದ ರೂಪುರೇಷೆ ಸಿದ್ಧವಾಗಿದೆ.
ಈಡಿಗ ಸಮಾಜದ ಗುರುಗಳಾದ ಶ್ರೀ ಪ್ರಣವಾನಂದ ಸ್ವಾಮೀಜಿ (Pravananda swameeji) ಅವರು ಶುಕ್ರವಾರ ಗಂಗಾವತಿಯಲ್ಲಿ ಈ ವಿಚಾರವನ್ನು ನೇರ ಮಾತುಗಳಲ್ಲಿ ಹೇಳಿದರು. ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರಿಂದ ಹರಿಪ್ರಸಾದ್ ಅವರಿದಾಗ ಅನ್ಯಾಯ, ಅಪಮಾನ ಮತ್ತು ಸರ್ಕಾರ ಸಮುದಾಯಕ್ಕೆ ಮಾಡುತ್ತಿರುವ ನಿರ್ಲಕ್ಷ್ಯವನ್ನು ಅವರು ತೆರೆದಿಟ್ಟರು. ಈ ಹಿಂದೆ ಜನಾರ್ದನ ಪೂಜಾರಿ, ಬಂಗಾರಪ್ಪ, ಆರ್.ಎಲ್. ಜಾಲಪ್ಪ ಅವರನ್ನು ರಾಜಕೀಯವಾಗಿ ಮುಗಿಸಿದಂತೆ ಈಗ ಹರಿಪ್ರಸಾದ್ ಅವರನ್ನು ಮುಗಿಸಲು ಸಂಚು ನಡೆಸಲಾಗಿದೆ ಎಂದರು.
ಕಾಂಗ್ರೆಸ್‌ನ ಗೆಲುವು ಇಬ್ಬರ ಪ್ರಯತ್ನದ ಫಲವಲ್ಲ, ತ್ರಿಮೂರ್ತಿಗಳದ್ದು
ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ಬರಲು ಕೇವಲ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಕಾರಣರಲ್ಲ, ಬಿ.ಕೆ. ಹರಿಪ್ರಸಾದ್ ಸೇರಿದಂತೆ ತ್ರಿಮೂರ್ತಿಗಳ ಪ್ರಯತ್ನದ ಫಲ ಇದು. ಆದರೆ, ಮೂರನೇ ಶಕ್ತಿಯಾದ ಹರಿಪ್ರಸಾದ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಅನ್ಯಾಯ ಮಾಡಲಾಗಿದೆ ಎಂದು ಪ್ರಣವಾನಂದ ಶ್ರೀಗಳು ಹೇಳಿದರು. ಸಮುದಾಯಕ್ಕೆ ಮಾಡುತ್ತಿರುವ ದ್ರೋಹದ ವಿರುದ್ಧ ಅತಿ ಹಿಂದುಳಿದ ವರ್ಗಗಳನ್ನು ಸೇರಿಸಿಕೊಂಡು ಹೋರಾಟ ನಡೆಸುವುದಾಗಿ ಅವರು ಪ್ರಕಟಿಸಿದರು. ಜಿಲ್ಲಾ ಮಟ್ಟದಲ್ಲಿ ಹೋರಾಟಗಳನ್ನು ಸಂಘಟಿಸಿ, ಸೆಪ್ಟೆಂಬರ್ 9ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಪ್ರಕಟಿಸಿದರು.
ಪ್ರಣವಾನಂದ ಸ್ವಾಮೀಜಿ ಆಕ್ರೋಶದ ಮಾತುಗಳು
ಬಿಲ್ಲವ/ಈಡಿಗ ನಾಯಕರನ್ನು ರಾಜಕೀಯವಾಗಿ ಮುಗಿಸಿದರು
- ಒಂದು ಕಾಲದಲ್ಲಿ ಬಿಲ್ಲವ/ಈಡಿಗರು ರಾಜಕೀಯವಾಗಿ ಪ್ರಬಲರಾಗಿದ್ದೆವು. ಆದರೆ, ನಮ್ಮ ಮೂಲ ಕಸುಬಾದ ಮೂರ್ತೆದಾರಿಕೆಯನ್ನು ನಿಲ್ಲಿಸಲಾಯಿತು. ಶೇಂದಿ, ಸಾರಾಯಿ ಬಂದ್ ಮಾಡುವ ಮೂಲಕ ನಮ್ಮ ಅಸ್ತಿತ್ವವನ್ನೇ ನಾಶ ಮಾಡಲಾಯಿತು.
- ನಮ್ಮ ಸಮುದಾಯದ ನಾಯಕರು ಬೆಳೆಯುವುದನ್ನು ಸಹಿಸದ ಶಕ್ತಿಗಳು ಹಂತ ಹಂತವಾಗಿ ಅವರನ್ನು ರಾಜಕೀಯವಾಗಿ ಮುಗಿಸಿದರು.\
- ನಮ್ಮ ನಿರಂತರ ಹೋರಾಟದ ಫಲವಾಗಿ ನಾರಾಯಣಗುರು ನಿಗಮ ಸ್ಥಾಪನೆಯಾಗಿದೆ. ಆದರೆ, ಈ ಬಾರಿಯ ಕಾಂಗ್ರೆಸ್ ಸರ್ಕಾರ ನಮ್ಮ ನಿಗಮಕ್ಕೆ ಹಣವನ್ನೇ ಕೊಟ್ಟಿಲ್ಲ. ಗೊತ್ತಿರಲಿ ವಿಶ್ವಕರ್ಮ, ಕುರುಬರು ಸೇರಿದಂತೆ ಏಳು ನಿಗಮಗಳಿಗೆ ಹಣ ಕೊಟ್ಟಿದೆ. ಆದರೆ, ನಾರಾಯಣಗುರು ನಿಗಮಕ್ಕೆ ಮಾತ್ರ ಕೊಟ್ಟಿಲ್ಲ. ಚುನಾವಣೆಯ ಸಂದರ್ಭದಲ್ಲಿ ನಾರಾಯಣಗುರು ನಿಗಮಕ್ಕೆ 250 ಕೋಟಿ ರೂ. ನೀಡುವ ಭರವಸೆ ನೀಡಲಾಗಿತ್ತು. ಈಗ ಭರವಸೆ ಹುಸಿಯಾಗಿದೆ.
- ಯಾವ ರೀತಿ ಜನಾರ್ದನ ಪೂಜಾರಿ ಅವರನ್ನು ರಾಜಕೀಯವಾಗಿ ಮುಗಿಸಿದರೋ, ಯಾವ ರೀತಿ ಬಂಗಾರಪ್ಪ ಅವರನ್ನು, ಯಾವ ರೀತಿ ಆರ್.ಎಲ್. ಜಾಲಪ್ಪ ಅವರನ್ನು ಮುಗಿಸಲಾಯಿತೋ ಅದೇ ರೀತಿ ಈಗ ಬಿ.ಕೆ. ಹರಿಪ್ರಸಾದ್ ಅವರನ್ನು ಮುಗಿಸಲು ಕಾಂಗ್ರೆಸ್ ಸಂಚು ರೂಪಿಸಿದೆ.
ದಿಲ್ಲಿ ಪಟ್ಟಿಯಲ್ಲಿದ್ದ ಹೆಸರು ಕರ್ನಾಟಕಕ್ಕೆ ಬಂದಾಗ ಮಾಯ ಆಗಿದ್ದು ಹೇಗೆ?
- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಪ್ರಯತ್ನ ಎಷ್ಟಿದೆಯೋ ಅಷ್ಟೇ ಶ್ರಮ ಹರಿಪ್ರಸಾದ್ ಅವರದ್ದೂ ಇದೆ. ಈ ಮೂವರು ತ್ರಿಮೂರ್ತಿಗಳಂತೆ ಗೆಲುವಿಗಾಗಿ ದುಡಿದಿದ್ದಾರೆ.
- ಬಿ.ಕೆ. ಹರಿಪ್ರಸಾದ್ ಅವರು ಮೊದಲ ಹಂತದ ಸಂಪುಟದಲ್ಲೇ ಮಂತ್ರಿಯಾಗಬೇಕಾಗಿತ್ತು. ಆಗ ಅನ್ಯಾಯ ಮಾಡಲಾಯಿತು. ಎರಡನೇ ವಿಸ್ತರಣೆಯಲ್ಲೂ ಅವಕಾಶ ಕೊಡದೆ ವಂಚಿಸಲಾಯಿತು.
- ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಅತ್ಯಾಪ್ತರು ಹರಿಪ್ರಸಾದ್. 19 ವರ್ಷಗಳ ಕಾಲ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿದವರು. ಅವರನ್ನು ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ಹರಿಪ್ರಸಾದ್ ಎಂದು ಕರೆಯುವುದಿಲ್ಲ. ಹರಿ ಎನ್ನುತ್ತಾರೆ. ಹಾಗಂತ ಹರಿಪ್ರಸಾದ್ ಯಾವತ್ತೂ ಅಧಿಕಾರದ ಹಿಂದೆ ಹೋದವರಲ್ಲ.
- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ʻಹರಿʼ ಅವರಿಗೆ ಒಂದು ಅವಕಾಶ ಮಾಡಿಕೊಡಿ ಎಂದು ಹೇಳಿದ್ದರು. ಅವರ ಈ ಪತ್ರ ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಬಂದಿತ್ತು.
- ಮಲ್ಲಿಕಾರ್ಜುನ ಖರ್ಗೆ ಅವರ ಮನೆಗೆ ಬಂದ ಪತ್ರ ಬೆಂಗಳೂರಿಗೆ ಬಂದಾಗ ಬದಲಾಗಿ ಹೋಗಿತ್ತು. ಹರಿಪ್ರಸಾದ್ ಅವರಿಗೆ ಅವಕಾಶ ಕೊನೆಗೂ ಸಿಗಲೇ ಇಲ್ಲ.
- ಹರಿಪ್ರಸಾದ್ ಅವರನ್ನು ಮಂತ್ರಿ ಮಾಡಲಿಲ್ಲ ಎನ್ನುವುದು ನಮ್ಮ ಬೇಸರವಲ್ಲ, ಅದಕ್ಕಾಗಿ ಹೋರಾಟವೂ ಅಲ್ಲ. ಆದರೆ, ಅವರನ್ನು ಕಡೆಗಣಿಸಿದ ರೀತಿ ಬೇಸರ ಉಂಟು ಮಾಡಿದೆ.
- ಅವರ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ, ಅವರು ಬೇರೆ ಪಕ್ಷದಿಂದ ವಲಸೆ ಬಂದವರೂ ಅಲ್ಲ. ಬಿಜೆಪಿಯನ್ನು ಅವರಷ್ಟು ಕಟುವಾಗಿ, ನಿಷ್ಠುರವಾಗಿ ಎದುರಿಸಿದ ಇನ್ನೊಬ್ಬ ನಾಯಕ ಕಾಂಗ್ರೆಸ್‌ನಲ್ಲಿ ಇಲ್ಲ.
- ಸದನದಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವುದಕ್ಕಾಗಿಯಾದರೂ ಬಿ.ಕೆ. ಹರಿಪ್ರಸಾದ್ ಅವರಿಗೆ ಮಂತ್ರಿ ಸ್ಥಾನ ಕೊಡಬೇಕಿತ್ತು. ಸಮುದಾಯದ ಇನ್ನೊಬ್ಬರಿಗೆ ಅವಕಾಶ ಕೊಟ್ಟಿದ್ದಾರೆ. ನಾವು ಅದನ್ನು ಸ್ವಾಗತಿಸುತ್ತೇವೆ. ಆದರೆ, ಹಿರಿತನಕ್ಕೆ ಗೌರವ ಕೊಡಬೇಕಾಗಿತ್ತು.
ಇದನ್ನೂ ಓದಿ BK Hariprasad : ಡಿ.ಕೆ. ಶಿವಕುಮಾರ್ ಕೈಕೆಳಗೆ ಕೆಲಸ ಮಾಡಲ್ಲ: ಬಿ.ಕೆ. ಹರಿಪ್ರಸಾದ್
ಸೆ. 9ಕ್ಕೆ ಬೆಂಗಳೂರಲ್ಲಿ ಬೃಹತ್ ಸಮಾವೇಶ, ಹಿಂದುಳಿದ ಸಮಾಜಗಳ ಒಕ್ಕೂಟ
ಬಿಲ್ಲವ/ಈಡಿಗ ಸಮುದಾಯವನ್ನು ಅವಗಣನೆ ವಿರುದ್ಧ ಸಮಾನ ಮನಸ್ಕ ಇತರ ಸಮುದಾಯಗಳನ್ನು ಸೇರಿಸಿಕೊಂಡು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು. ಹಿಂದುಳಿದ ವರ್ಗಗಳಲ್ಲಿ ಅತಿ ಹಿಂದುಳಿದ ವರ್ಗ ಈಡಿಗ/ ಬಿಲ್ಲವ ಸಮಾಜ. ಇದೀಗ ಇದೇ ರೀತಿ ಹಿಂದುಳಿದವರನ್ನು ಸೇರಿಸಿಕೊಂಡು ಒಂದು ಅತಿ ಹಿಂದುಳಿದ ಸಮಾಜಗಳ ಒಕ್ಕೂಟ ರಚನೆ ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.
ಸೆಪ್ಟೆಂಬರ್ 9ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಅದರಲ್ಲಿ ಈಡಿಗ, ಲಂಬಾಣಿ ಸೇರಿದಂತೆ ಹಿಂದುಳಿದ ವರ್ಗಗಳ ಮುಖಂಡರು ಭಾಗವಹಿಸಲಿದ್ದಾರೆ. ಅತಿ ಹಿಂದುಳಿದ ವರ್ಗಗಳ ಸಮಾಜಗಳ ಸಮಾವೇಶದಲ್ಲಿ 8-10 ಸಾವಿರ ಅರಮನೆ ಮೈದಾನದಲ್ಲಿ ಸೇರಲಿದ್ದಾರೆ. ಬಿ.ಕೆ. ಹರಿಪ್ರಸಾದ್, ನಾಗರಾಜ್ ಯಾದವ್, ಕೋಟ ಶ್ರೀನಿವಾಸ ಪೂಜಾರಿ, ಪ್ರಕಾಶ್ ರಾಥೋಡ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದರು.