ಬೆಂಗಳೂರು: ದಸರಾ ಹಬ್ಬಕ್ಕೆ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. 6 ವರ್ಷಗಳ ಬಳಿಕ ಸುಮಾರು 2,500 ಪ್ರೌಢ ಶಾಲಾ ಶಿಕ್ಷಕರ ನೇಮಕಾತಿಗೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮುಂದಾಗಿದೆ. ಒಟ್ಟು 2,500 ಹುದ್ದೆಗಳ ಪೈಕಿ 2,200 ಸಹ ಶಿಕ್ಷಕರು, 200 ದೈಹಿಕ ಶಿಕ್ಷಣ ಶಿಕ್ಷಕರು, 100 ವಿಶೇಷ ಶಿಕ್ಷಕರ(ಸಂಗೀತ, ಕಲೆ, ಇತರ) ನೇಮಕಾತಿಗೆ ಇದೀಗ ಕಾಲ ಕೂಡಿಬಂದಿದ್ದು, ಸದ್ಯದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, 2016ರ ನಂತರ ಪ್ರೌಢ ಶಾಲಾ ಶಿಕ್ಷಕರ ನೇಮಕಾತಿ ನಡೆದಿರಲಿಲ್ಲ. ಇದರಲ್ಲಿ ವಿಶೇಷವಾಗಿ ದಶಕದ ಬಳಿಕ ಕ್ರೀಡಾ ಶಿಕ್ಷಕರ ನೇಮಕಾತಿ ಮಾಡಲಾಗುತ್ತಿದೆ. ಕ್ರೀಡೆ ಮತ್ತು ಕಲೆ ಕ್ಷೇತ್ರಗಳಿಗೆ ಒತ್ತು ನೀಡುವ ನಿಟ್ಟಿನಲ್ಲಿ ವಿಶೇಷ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನಾ ಸೆ.೧೦ ರಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 778 ಉಪನ್ಯಾಸಕರ ಖಾಲಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುತ್ತದೆ. ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದರು. ಈಗ ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಬಗ್ಗೆ ಮಾಹಿತಿ ನೀಡಿರುವುದು ಶಿಕ್ಷಕ ಹಾಗೂ ಉಪನ್ಯಾಸಕ ಹುದ್ದೆಗಳ ಆಕಾಂಕ್ಷಿಗಳಿಗೆ ಸಂತಸ ತಂದಿದೆ.
ಇದನ್ನೂ ಓದಿ | PU Supplementary Results | ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ; ಬಾಲಕಿಯರೇ ಮೇಲುಗೈ