ಮೈಸೂರು: ವೈಜ್ಞಾನಿಕತೆ, ವೈಚಾರಿಕತೆ ಬೆಳೆದಾಗ ಮಾತ್ರ ಕಲಿತ ವಿದ್ಯೆಗೆ ಬೆಲೆ ಬರುತ್ತದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.
ಸ್ವಾಮಿ ವಿವೇಕಾನಂದ ಎಜುಕೇಶನಲ್ ಇನ್‌ಸ್ಟಿಟ್ಯೂಟ್ ವಿದ್ಯಾಸಂಸ್ಥೆಯ ರಜತ ಮಹೋತ್ಸವ ಹಾಗೂ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, 20 ವರ್ಷಗಳ ಹಿಂದೆ ಈ ಶಾಲೆಯ ಉದ್ಘಾಟನೆ ಮಾಡಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದು ಸಂಸ್ಥೆಯ ಬೆಳವಣಿಗೆಗೆ ಸಾಕ್ಷಿ. ಬೆಳವಾಡಿ ಭಾಗದಲ್ಲಿನ ಬಹುತೇಕ ಮಕ್ಕಳು ಹಳ್ಳಿಗಾಡಿನಿಂದ ಬಂದಿರುವವರು. ಅವರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಸಮಾಜದ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತಾಗ ಮಾತ್ರ ಅವರು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ವೈಜ್ಞಾನಿಕ ಚಿಂತನೆ ಮಾಡುವ ಶಕ್ತಿ ಅಗತ್ಯ
ಪ್ರತಿಯೊಬ್ಬರೂ ಶಿಕ್ಷಣದ ಜತೆಗೆ ಮಕ್ಕಳಲ್ಲಿ ವೈಚಾರಿಕತೆಯನ್ನು ಬೆಳೆಸಬೇಕು. ಸಮಾಜಲ್ಲಿ 850 ವರ್ಷಗಳ ಹಿಂದೆಯೇ ಮೌಢ್ಯಗಳನ್ನು ಬಿಟ್ಟು ವಿಚಾರವಂತಿಕೆ ಬೆಳೆಸಿಕೊಳ್ಳಬೇಕು ಎಂದು ಬಸವಾದಿ ಶರಣರು ಸಾರಿದ್ದರು. ಶಿಕ್ಷಿತರಾದ ಮೇಲೆ ವೈಜ್ಞಾನಿಕವಾಗಿ ಚಿಂತನೆ ಮಾಡುವ ಶಕ್ತಿ ಅಗತ್ಯ. ಉನ್ನತ ಶಿಕ್ಷಣ ಪಡೆದೂ ಕಂದಾಚಾರಗಳಿಗೆ ಜೋತು ಬಿದ್ದರೆ, ಶಿಕ್ಷಣ ಎಂದು ಹೇಳಲಾಗದು. ಸಮಾಜದ ಜತೆಗೆ ಸ್ಪಂದಿಸುವ ಜ್ಞಾನವಿರಬೇಕು. ಆಗ ಮಾತ್ರ ಅವರನ್ನು ಸುಶಿಕ್ಷಿತರು ಎಂದು ಕರೆಯಬಹುದು ಎಂದರು.
ಇದನ್ನೂ ಓದಿ | R Ashok : 2008ರಲ್ಲಿ ಬಿಜೆಪಿಗೆ ಅಧಿಕಾರ ನಿರಾಕರಿಸಿದ್ದು HDK ಅಲ್ಲ, ದೇವೇಗೌಡ್ರು; ಆರ್. ಅಶೋಕ್
ಸಮಸ್ಯೆಗಳನ್ನು ಪರಿಹಾರ ಮಾಡುವ ಶಕ್ತಿ ವಿದ್ಯಾರ್ಥಿಗಳಿಗೆ ಬರಬೇಕು
ಬರೀ ಓದು ಬರೆಯಲು ಮಾತ್ರವಲ್ಲದೆ ಸಾಮಾಜಿಕ ವ್ಯಕ್ತಿಯಾಗಿ ಸಮಾಜದ ಜವಾಬ್ದಾರಿಯನ್ನು ಹೊರುವ, ಸಮಸ್ಯೆಗಳನ್ನು ಪರಿಹಾರ ಮಾಡುವ ಶಕ್ತಿ ವಿದ್ಯಾರ್ಥಿಗಳಿಗೆ ಬರಬೇಕು. ಮಕ್ಕಳಿಗೆ ವೈಚಾರಿಕತೆ ತುಂಬಿ ಬೆಳೆಸಬೇಕು ಎನ್ನುವುದನ್ನು ಪ್ರತಿಯೊಬ್ಬ ಗುರುಗಳು ಬೆಳೆಸಿಕೊಳ್ಳಬೇಕು. ಶಿಕ್ಷಕರಲ್ಲಿ ವೈಚಾರಿಕತೆ ಬಂದರೆ ಮಕ್ಕಳಿಗೆ ಕೂಡ ಅದು ಬರಲು ಸಾಧ್ಯ. ಕೇವಲ ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಅದು ಶಿಕ್ಷಣವಲ್ಲ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು
ಗುರುದೇವೋಭವ ಎಂದು ಕರೆಯಲ್ಪಡುವ ಶಿಕ್ಷಕರು, ರೈತರು ಹಾಗೂ ಸೈನಿಕರನ್ನು ಹೆಚ್ಚು ಗೌರವ ದಿಂದ ಕಾಣುತ್ತೇವೆ. ತಂದೆತಾಯಿಗಳ ಮೇಲೂ ಶಿಕ್ಷಣ ನೀಡುವ ಹೊಣೆಯಿದೆ. ಇಂಗ್ಲಿಷ್ ಕಲಿಯಬೇಕು, ಆದರೆ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಕಲಿತರೆ ಹೆಚ್ಚು ಸುಲಭವಾಗಿ ಅರ್ಥವಾಗುತ್ತದೆ ಎಂದರು.
ಎಲ್ಲಾ ಮಕ್ಕಳಿಗೂ ಶಿಕ್ಷಣ ಕಡ್ಡಾಯ
ನಮ್ಮ ಕ್ಷೇತ್ರದ ಮಕ್ಕಳು ವಿದ್ಯಾವಂತರಾದರೆ ಅದಕ್ಕಿಂತ ಸಂತೋಷ ಬೇರೆ ಯಾವುದೂ ಇಲ್ಲ.
14 ವರ್ಷ ದೊಳಗಿನ ಎಲ್ಲಾ ಮಕ್ಕಳಿಗೂ ಶಿಕ್ಷಣ ಕಡ್ಡಾಯ ಹಾಗೂ ಅದು ಮೂಲ ಭೂತ ಹಕ್ಕು ಎಂದರು. ನೂರಕ್ಕೆ ನೂರರಷ್ಟು ಮಕ್ಕಳು ವಿದ್ಯಾವಂತರಾಗಬೇಕು. ದೇಶದಲ್ಲಿ ಕೇವಲ ಶೇ. 76 ಮಾತ್ರ ವಿದ್ಯಾವಂತರಿದ್ದಾರೆ . 75 ವರ್ಷಗಳಾದರೂ ಎಲ್ಲರೂ ಶಿಕ್ಷಣ ಪಡೆದಿಲ್ಲ ಎಂದರು.
ಇದನ್ನೂ ಓದಿ | ಪೆಟ್ರೋಲ್ ಬೆಲೆ ಇಳಿಕೆ, ಉಚಿತ ಅಯೋಧ್ಯೆ ಯಾತ್ರೆ; ತೆಲಂಗಾಣದಲ್ಲಿ ಬಿಜೆಪಿ ‘ಪ್ರಣಾಳಿಕೆ’ ಅಸ್ತ್ರ
ಸಾರ್ವತ್ರಿಕ ಮೂಲ ಆದಾಯದ ಆಧಾರದಲ್ಲಿ ಯೋಜನೆಗಳು
ನಮ್ಮ ಸರ್ಕಾರ ಬಂದ ಮೇಲೆ ಮನೆ ಮನೆಗೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಉಚಿತ ವಿದ್ಯುತ್, 2000 ಸಾವಿರ ರೂ. 5 ಕೆಜಿ ಹೆಚ್ಚು ಅಕ್ಕಿ, ಅನ್ನಭಾಗ್ಯ ಯೋಜನೆಗಳನ್ನು ಬಡವರಿಗೆ ನೀಡುವುದು ಖರ್ಚು ಮಾಡುವ ಶಕ್ತಿ ಬರಲಿ ಎಂದು ನೀಡಲಾಗುತ್ತಿದೆ. ಸಾರ್ವತ್ರಿಕ ಮೂಲ ಆದಾಯದ ಆಧಾರದಲ್ಲಿ ಈ ಯೋಜನೆಗಳು ಜಾರಿಯಾಗಿವೆ ಎಂದರು.