ಹಾವೇರಿ: ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಕ್ಕರೆ ನಾಡು ಮಂಡ್ಯದಲ್ಲಿ ಆಯೋಜನೆ ಮಾಡಲು ನಿರ್ಧಾರ ಮಾಡಲಾಗಿದೆ.
ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಡುವೆಯೇ ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಮಂಡ್ಯದಲ್ಲಿ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. 2017ರಲ್ಲಿ ಮೈಸೂರಿನಲ್ಲಿ ಆಯೋಜನೆಯಾಗಿದ್ದ 83ನೇ ಸಮ್ಮೇಳನದ ನಂತರ ಮತ್ತೆ ದಕ್ಷಿಣ ಕರ್ನಾಟಕಕ್ಕೆ ಕನ್ನಡದ ತೇರು ಸಾಗಿದೆ.
ಮೈಸೂರಿನ ನಂತರದಲ್ಲಿ ಧಾರವಾಡ, ಕಲಬುರ್ಗಿ ಹಾಗೂ ಇದೀಗ ಹಾವೇರಿಯಲ್ಲಿ ಸಮ್ಮೇಳನ ನಡೆಯುತ್ತಿದೆ. ದಕ್ಷಿಣ ಕರ್ನಾಟಕದ ಜಿಲ್ಲೆಯೊಂದಕ್ಕೆ ಮುಂದಿನ ಬಾರಿ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ತಾವ ಸಮ್ಮೇಳನ ನಡೆಸುವುದಾಗಿ ಮಂಡ್ಯದ ಜತೆಗೆ ಚಿಕ್ಕಮಗಳೂರು, ಉತ್ತರ ಕನ್ನಡ, ಬಳ್ಳಾರಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಘಟಕಗಳೂ ಆಸಕ್ತಿ ತೋರಿದ್ದವು. ಈ ಹಿನ್ನೆಲೆಯಲ್ಲಿ ತೀರ್ಮಾನ ಮಾಡಲಾಗಿದೆ.
ಮಹೇಶ್ ಜೋಶಿ ಅವರ ನೇತೃತ್ವದಲ್ಲಿ ಈ ಕುರಿತು ಶನಿವಾರ ರಾತ್ರಿ ಸಭೆ ನಡೆಯಿತಾದರೂ ಒಮ್ಮತಕ್ಕೆ ಬರಲಾಗಿರಲಿಲ್ಲ. ಭಾನುವಾರ ಬೆಳಗ್ಗೆ ನಡೆದ ಕಾರ್ಯಕಾರಿ ಸಮಿತಿಯಲ್ಲಿ ಈ ನಿರ್ಧಾರ ಮಾಡಲಾಗಿದೆ.
ಸಭೆಯ ನಂತರ ಪ್ರತಿಕ್ರಿಯೆ ನೀಡಿದ ಮಂಡ್ಯ ಜಿಲ್ಲಾ ಕಸಾಪ ಅಧ್ಯಕ್ಷ ರವಿಕುಮಾರ್ ಚಾಮಲಾಪುರ, ಮಹೇಶ್ ಜೋಶಿ ಅವರ ನೇತೃತ್ವದ ಸಭೆಯಲ್ಲಿ, ಮಂಡ್ಯದಲ್ಲಿ 87ನೇ ಸಮ್ಮೇಳನ ಆಯೋಜನೆ ಮಾಡುವ ಕುರಿತು ತೀರ್ಮಾನ ಮಾಡಲಾಗಿದೆ. ಕಸಾಪ ಅಧ್ಯಕ್ಷರ ಜತೆಗೆ ನಿಕಟಪೂರ್ವ ಅಧ್ಯಕ್ಷ ಡಾ. ಮನುಬಳಿಗಾರ್ ಅವರ ನೇತೃತ್ವದಲ್ಲಿ ಸಮ್ಮೇಳನ ನಡೆಯಲಿದೆ. ಈ ನಿರ್ಧಾರಕ್ಕೆ ಬೆಂಬಲ ಸೂಚಿಸಿದ ಎಲ್ಲ ಜಿಲ್ಲಾ ಅಧ್ಯಕ್ಷರುಗಳಿಗೂ ಧನ್ಯವಾದ ಎಂದು ತಿಳಿಸಿದರು.
ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಮಾತನಾಡಿ, ಸಮ್ಮೇಳನ ಎಲ್ಲಿ ಆಯೋಜನೆ ಮಾಡಬೇಕು ಎಂಬ ಕುರಿತು ನಡೆದ ಮತದಾನದಲ್ಲಿ 17 ಜಿಲ್ಲೆಗಳು ಮಂಡ್ಯ ಪರವಾಗಿ, 16 ಜಿಲ್ಲೆಗಳು ಬಳ್ಳಾರಿ ಪರವಾಗಿ ಬೆಂಬಲ ಸೂಚಿಸಿವೆ. ಈ ಸಮ್ಮೇಳನದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಉಂಟಾಗಿವೆ. ಮುಂದಿನ ಸಮ್ಮೇಳನದಲ್ಲಿ ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಕನ್ನಡದಲ್ಲಿ ಮಕ್ಕಳ ಸಾಹಿತ್ಯಕ್ಕೆ ಪ್ರಕಾಶಕರ ಕೊರತೆ