ತುಮಕೂರು: ಅಕ್ಕ ಅಂದರೆ ಎರಡನೇ ತಾಯಿ ಇದ್ದಂಗೆ. ಅಕ್ಷರಶಃ ಈ ಮಾತು ತುಮಕೂರಲ್ಲಿ ನಿಜವಾಗಿದೆ. ತಂಗಿಯ ಜೀವ ಉಳಿಸಲು ತನ್ನ ಪ್ರಾಣವನ್ನು ಲೆಕ್ಕಿಸದೇ ಅಕ್ಕ ಬಾವಿಗೆ (Jumped into the well) ಹಾರಿದ್ದಾಳೆ. ಈಕೆಯ ಸಾಹಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ಬಂದಿದೆ. ಇಲ್ಲಿನ ಕುಚ್ಚಂಗಿಪಾಳ್ಯದಲ್ಲಿ ಸಹೋದರಿಯ ಜೀವ ರಕ್ಷಿಸಲು 8 ವರ್ಷದ ಬಾಲಕಿಯೊಬ್ಬಳು ಬಾವಿಗೆ ಹಾರಿದ ಘಟನೆ ನಡೆದಿದೆ. ಶಾಲು (8) ಎಂಬಾಕೆ ಬಾವಿಗೆ ಹಾರಿ ತಂಗಿಯ ರಕ್ಷಣೆಯನ್ನು ಮಾಡಿದ್ದಾಳೆ.
ಉತ್ತರ ಪ್ರದೇಶ ಮೂಲದ ಜೀತೇಂದ್ರ ಹಾಗೂ ರಾಜಕುಮಾರಿ ದಂಪತಿ ತುಮಕೂರಿನಲ್ಲಿ ತೋಟದ ಮನೆಯಲ್ಲಿ ಕೆಲಸಕ್ಕೆ ಇದ್ದರು. ಜೀತೇಂದ್ರ ಹಾಗೂ ರಾಜಕುಮಾರಿ ದಂಪತಿಗೆ ಶಾಲು (8), ಹಿಮಾಂಶು (7), ರಾಶಿ (3), ಕಪಿಲ್ (2) ಎಂಬ ನಾಲ್ವರು ಮಕ್ಕಳು ಇದ್ದಾರೆ. ಹಿಮಾಂಶು ಹಾಗೂ ರಾಶಿ ತೋಟದಲ್ಲಿ ಆಟವಾಡುತ್ತಿದ್ದರು. ಈ ವೇಳೆ ರಾಶಿ ಕೈಯಲ್ಲಿದ್ದ ಆಟಿಕೆಯನ್ನು ಹಿಮಾಂಶು ಕಿತ್ತುಕೊಳ್ಳಲು ಹೋಗಿದ್ದ. ಆತನಿಂದ ತಪ್ಪಿಸಿಕೊಳ್ಳುವ ಬರದಲ್ಲಿ ರಾಶಿ ಆಯತಪ್ಪಿ ಬಾವಿಗೆ ಬಿದ್ದಿದ್ದಳು.
ರಾಶಿ ಬಾವಿಯಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಳು. ಇದನ್ನು ಕಂಡ ಶಾಲೂ ಗಾಬರಿ ಆಗಲಿಲ್ಲ. ಬದಲಿಗೆ ಬುದ್ಧಿವಂತಿಕೆಯಿಂದ ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ತಂಗಿಯನ್ನು ಕಾಪಾಡಲು ಬಾವಿಗೆ ಹಾರಿಯೇ ಬಿಟ್ಟಳು. ಮಕ್ಕಳ ಕಿರುಚಾಟ ಕೇಳಿ ಬಂದ ಅಕ್ಕಪಕ್ಕದವರು ಶಾಲೂ ಸಹಾಯಕ್ಕೆ ಬಂದಿದ್ದಾರೆ. ಕೂಡಲೇ ಇಬ್ಬರನ್ನು ಬಾವಿಯಿಂದ ಮೇಲಕ್ಕೆ ಎತ್ತಿದ್ದಾರೆ.
ಇದನ್ನೂ ಓದಿ: Alia Bhatt Viral Video : ಫೋಟೊಗ್ರಾಫರ್ ಚಪ್ಪಲಿ ಆಲಿಯಾ ಭಟ್ ಕೈಯಲ್ಲಿ!
ಮಾಲೀಕ ಕಲಿಸಿದ ಈಜು
ಕಳೆದ ಮೂರ್ನಾಲ್ಕು ದಿನದಿಂದಷ್ಟೇ ಶಾಲೂ ಈಜು ಕಲಿಯಲು ಶುರು ಮಾಡಿದ್ದಳು. ತೋಟದ ಮಾಲೀಕ ಧನಂಜಯ್ಯ ಶಾಲೂಗೆ ಈಜುವುದನ್ನು ಕಲಿಸಿಕೊಡುತ್ತಿದ್ದರು. ಹೀಗಾಗಿ ಮನೆಯಲ್ಲಿ ಲೈಫ್ ಜಾಕೆಟ್ ಇಟ್ಟುಕೊಂಡಿದ್ದರು. ತಂಗಿ ಬಾವಿಗೆ ಬಿದ್ದೊಡನೆ ಶಾಲೂ ಕ್ಷಣವೂ ಯೋಚಿಸಿದೆ, ಲೈಫ್ ಜಾಕೆಟ್ ಧರಿಸಿ ಕಾಪಾಡಲು ಮುಂದಾಗಿದ್ದಳು.
ಶಾಲೂ ಸಾಹಸ ಕೊಂಡಾಡಿದ ಗ್ರಾಮಸ್ಥರು
ಶಾಲೂ ಸಾಹಸವು ಇಡೀ ಗ್ರಾಮಕ್ಕೆ ಆವರಿಸಿ, ಎಲ್ಲರೂ ಆಕೆಯನ್ನು ಕೊಂಡಾಡಿದ್ದಾರೆ. ಚಿಕ್ಕ ವಯಸ್ಸಿಗೆ ಇಷ್ಟು ಧೈರ್ಯ ತೋರಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಂತಹ ಸಮಯದಲ್ಲಿ ದೊಡ್ಡವರಿಗೆ ಏನು ಮಾಡಬೇಕು ಎಂದು ಕೈಕಾಲಾಡುವುದಿಲ್ಲ, ಬದಲಿಗೆ ಇನ್ನಷ್ಟು ಗಾಬರಿ ಆಗುತ್ತದೆ. ಆದರೆ ಶಾಲೂ ಸಮಯಪ್ರಜ್ಞೆ ಹಾಗೂ ಆಕೆಯ ಧೈರ್ಯ, ಸಾಹಸಕ್ಕೆ ಶಬಾಷ್ ಗಿರಿ ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ