Site icon Vistara News

ಮುಂದುವರಿದ ಅಲಯನ್ಸ್ ಕಾಲೇಜು ವಿದ್ಯಾರ್ಥಿಗಳ ಪುಂಡಾಟ; ಆನೇಕಲ್‌ನಲ್ಲಿ ವೃದ್ಧನ ಮೇಲೆ ಹಲ್ಲೆ

ಅಲಯನ್ಸ್ ಕಾಲೇಜು

ಆನೇಕಲ್: ಪ್ರತಿಷ್ಠಿತ ಅಲಯನ್ಸ್ ಕಾಲೇಜು ವಿದ್ಯಾರ್ಥಿಗಳ ಪುಂಡಾಟ ಮುಂದುವರಿದಿದೆ. ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ವೃದ್ಧನ ಮೇಲೆ ಹಲ್ಲೆ ಮಾಡಿ ಹುಚ್ಚಾಟ ಮೆರೆದಿದ್ದಾರೆ.

ಮುನಿಯಲ್ಲಪ್ಪ (70) ಹಲ್ಲೆಗೊಳಗಾದ ವೃದ್ಧ. ಆನೇಕಲ್ ತಾಲೂಕಿನ ಅರವಂಟಿಗೆಪುರ ಗೇಟ್‌ ಬಳಿ ಬಸ್‌ನಿಂದ ಇಳಿಯುವಾಗ ಕಾಲೇಜು ವಿದ್ಯಾರ್ಥಿನಿಗೆ ವೃದ್ಧರೊಬ್ಬರ ಕೈ ಟಚ್ ಆಗಿದೆ. ಈ ವೇಳೆ ವಿದ್ಯಾರ್ಥಿನಿ ಸ್ನೇಹಿತರಿಗೆ ಫೋನ್‌ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾಳೆ. ಸ್ಥಳಕ್ಕೆ ಆಗಮಿಸಿದ ಅಲಯನ್ಸ್ ಕಾಲೇಜಿನ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು, ದೊಣ್ಣೆ ಹಾಗೂ ರಾಡ್‌ಗಳ ಮೂಲಕ ವೃದ್ಧನ ಮೇಲೆ ಹಲ್ಲೆ ಮಾಡಿದ್ದಾರೆ. ಬಸ್ ನಿಲ್ದಾಣದ ಬಳಿ ಹಲ್ಲೆ ನಡೆಸಿದ್ದು ಸಾಲದೆಂಬಂತೆ ಗ್ರಾಮಕ್ಕೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಇದರಿಂದ ವೃದ್ಧ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹಿಂದೆ ಗಾಂಜಾ ಹಾಗೂ ಕುಡಿದ ಮತ್ತಿನಲ್ಲಿ ಪದೇಪದೆ ದಾಂಧಲೆ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗಳು, ಇದೀಗ ವೃದ್ಧರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಪುಂಡಾಟಕ್ಕೆ ಕಡಿವಾಣ ಹಾಕುವಲ್ಲಿ ಕಾಲೇಜು ಆಡಳಿತ ಮಂಡಳಿ ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿರುವ ಸ್ಥಳೀಯರು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | ಕೋಲಾರ, ರಾಮನಗರದಲ್ಲಿ ಭಾರಿ ಮಳೆಯಿಂದ ಫಾರ್ಮ್‌ನೊಳಗೆ ನುಗ್ಗಿದ ನೀರು: ಸಾವಿರಾರು ಕೋಳಿಗಳ ಸಾವು

Exit mobile version