Site icon Vistara News

Murder Case: ವೃದ್ಧೆಯ ದೇಹ 6 ಭಾಗವಾಗಿ ಪೀಸ್‌ ಪೀಸ್‌; ಆಸ್ತಿಗಾಗಿ ಪರಿಚಿತನಿಂದಲೇ ಕೊಲೆ?

Murder Case

ಬೆಂಗಳೂರು: ಕೆ.ಆರ್.ಪುರಂ ಠಾಣೆ ವ್ಯಾಪ್ತಿಯ ನಿಸರ್ಗ ಲೇಔಟ್‌ನಲ್ಲಿ ನಡೆದ ವೃದ್ಧೆಯ ಭೀಕರ ಹತ್ಯೆ ಪ್ರಕರಣದಲ್ಲಿ (Murder Case) ಓರ್ವ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೃದ್ಧೆಯ ದೇಹವನ್ನು ಆರು ಭಾಗವಾಗಿ ಪೀಸ್ ಪೀಸ್ ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದು, ಮೃತದೇಹ ಪತ್ತೆಯಾದರೂ, ಕೈ ಕಾಲುಗಳು ನಾಪತ್ತೆಯಾಗಿವೆ. ವೃದ್ಧೆಯನ್ನು ಆರೋಪಿ ಹತ್ಯೆಗೈದು ಕೈ ಕಾಲುಗಳನ್ನು ಆವಲಹಳ್ಳಿ ಕೆರೆಗೆ ಎಸೆದಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಸುಶೀಲಮ್ಮ (70) ಎಂಬ ವೃದ್ಧೆಯ ಮೃತದೇಹ ನಿಸರ್ಗ ಬಡಾವಣೆಯ ಪಾಳು ಬಿದ್ದ ಮನೆ ಪಕ್ಕದ ಗಲ್ಲಿಯಲ್ಲಿ ಕಸ ಹಾಕುವ ಡ್ರಮ್‌ನಲ್ಲಿ ಕಂಡುಬಂದಿತ್ತು. ಸದ್ಯ ವೃದ್ಧೆಯ ನಾಪತ್ತೆಯಾಗಿರುವ ದೇಹದ ಭಾಗಗಳಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ. ಕೊಲೆ ಸಂಬಂಧ ಓರ್ವನನ್ನು ಕೆ.ಆರ್.ಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಲೆ ನಡೆದ ಸ್ಥಳದ ಸಮೀಪದಲ್ಲೇ ವಾಸವಿರುವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ರಕ್ತದ ಕಲೆ ಆಧರಿಸಿ ಸ್ಥಳೀಯ ಮನೆಯೊಂದಕ್ಕೆ ಪೊಲೀಸರನ್ನು ಡಾಗ್ ಸ್ಕ್ವಾಡ್ ಶ್ವಾನ ಕರೆದೊಯ್ದಿತ್ತು. ಈ ಹಿನ್ನೆಲೆ ಒಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ವ್ಯಕ್ತಿಯು, ಮೃತ ಸುಶೀಲಮ್ಮ ಕುಟುಂಬಕ್ಕೆ ಚಿರಪರಿಚಿತ ಹಾಗೂ ಅತ್ಯಾಪ್ತ ಎನ್ನಲಾಗಿದೆ.

ಈತ ಈ ಹಿಂದೆ ಉನ್ನತ ಹುದ್ದೆಯಲ್ಲಿದ್ದು, ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದ ಎನ್ನಲಾಗಿದೆ. ಸದ್ಯ ಸ್ಥಳೀಯವಾಗಿ ರಾಜಕೀಯ ಪಕ್ಷವೊಂದರ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ. ಇವನೇ ಹಂತಕನಾ? ಅಥವಾ ಹಂತಕನಿಗೆ ಸಹಾಯ ಮಾಡಿದನೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಸಿಸಿಟಿವಿಯಲ್ಲಿ ಹಂತಕನ ಸಂಪೂರ್ಣ ಚಿತ್ರಣ ಸೆರೆಯಾಗಿದ್ದು, ಕೃತ್ಯದ ನಂತರ ಮೃತದೇಹ ಬಿಸಾಡಲು ಹಂತಕ ಪರದಾಡಿದ್ದಾನೆ. ದೇಹವನ್ನು ಎಸೆಯಲು ಖರ್ತನಾಕ್ ಪ್ಲ್ಯಾನ್‌ ಮಾಡಿದ್ದ ಆರೋಪಿ, ಮೊದಲು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ನಂತರ ಸಣ್ಣ ಡ್ರಮ್‌ನಲ್ಲಿ ಕಸ ತುಂಬುವ ರೀತಿ ಮೃತದೇಹವನ್ನು ಹಾಕಿದ್ದಾನೆ. ಆದರೆ ಇಡೀ ರಾತ್ರಿ ಏನು ಮಾಡಬೇಕೆಂದು ಗೊತ್ತಾಗದೆ, ಮನೆ ಒಳಗೆ, ಹೊರಗೆ ಓಡಾಡಿದ್ದಾನೆ. ಮೃತದೇಹ ಹೊರಗೆ ತರುವ ಮುನ್ನಾ ರಸ್ತೆಯಲ್ಲಿನ ಬೀದಿ ದೀಪವನ್ನು ಹಂತಕ ಆರಿಸಿದ್ದ. ಜನರ ಓಡಾಟದ ಬಗ್ಗೆ ಗಮನಿಸಿ, ತಡರಾತ್ರಿ ಮೃತದೇಹವನ್ನ ನಿಸರ್ಗ ಬಡಾವಣೆಯ ಪಾಳುಬಿದ್ದ ಮನೆ ಬಳಿ ಇಟ್ಟಿದ್ದ.

ಇದನ್ನೂ ಓದಿ | Murder Case : ಡ್ರಮ್‌ನಲ್ಲಿತ್ತು ತುಂಡು ತುಂಡಾಗಿ ಕತ್ತರಿಸಿದ ವೃದ್ಧೆಯ ದೇಹ!

ಕೊಲೆ ಹಿಂದೆ ಇದ್ಯಾ ಆಸ್ತಿಯ ವಿಚಾರ?

ಸುಶೀಲಮ್ಮನ ಸಾವಿಗೆ ಆಸ್ತಿಯ ವಿಚಾರ ಕಾರಣವಾಯಿತಾ ಎಂಬ ಅನುಮಾನಗಳು ಮೂಡಿವೆ. ಕೊಲೆಯಾದ ವೃದ್ದೆ ಸುಶೀಲಮ್ಮ ಹೆಸರಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇದೆ. ಉತ್ತರಹಳ್ಳಿ ಹಾಗೂ ಯಲಹಂಕದಲ್ಲಿ ವೃದ್ಧೆ ಹೆಸರಲ್ಲಿ ಪ್ರಾಪರ್ಟಿ ಇದೆ. ಕೆಲ ಆಸ್ತಿಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೋರ್ಟ್‌ನಲ್ಲಿ ವ್ಯಾಜ್ಯ ಇತ್ಯರ್ಥವಾಗಿತ್ತು. ಸದ್ಯದಲ್ಲೆ ದೊಡ್ಡದಾದ ಅಮೌಂಟ್ ಬರಲಿದೆ ಎಂದು ಸ್ಥಳೀಯರು ಹಾಗೂ ಪರಿಚಿತರ ಬಳಿ ಮೃತ ವೃದ್ಧೆ ಹೇಳಿದ್ದರು. ಕೋಟಿಗಟ್ಟಲೇ ಆಸ್ತಿಯಿದ್ದರೂ ಮಕ್ಕಳಿಂದ ವೃದ್ಧೆ ದೂರವಿದ್ದರು. ಹೀಗಾಗಿ ಪರಿಷಿತರೇ ವೃದ್ಧೆಯನ್ನು ಹತ್ಯೆ ಮಾಡಿದ್ರಾ ಎಂಬ ಅನುಮಾನಗಳು ಮೂಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version