ಶಶಿಧರ ಮೇಟಿ, ಬಳ್ಳಾರಿ
ಅಂದು ಟಿಕೆಟ್ ಕೇಳುವವರಿಲ್ಲ, ಇಂದು ಟಿಕೆಟ್‌ಗಾಗಿ ಕ್ಯೂ. ಇದು ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ. ರೆಡ್ಡಿ ಸಹೋದರರ ಮತ್ತು ಶ್ರೀರಾಮುಲು ಪ್ರಭಾವಕ್ಕೆ ಬಹುತೇಕರು ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದ ಕಾಲವಿತ್ತು. ಕಾಂಗ್ರೆಸ್ ಟಿಕೆಟ್‌ಗೆ ಅಷ್ಟಾಗಿ ಬೇಡಿಕೆಯೂ ಇರಲಿಲ್ಲ. ಆದರೆ, ಈಗ ಕಾಲ ಬದಲಾಗಿದೆ. ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ೨೦೨೩ರ ವಿಧಾನಸಭಾ ಚುನಾವಣೆ (Election 2023) ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ಬೇಡಿಕೆ ಸಹ ಹೆಚ್ಚಾಗಿದೆ.
ಈಗ ಹೇಗಿದ್ದರೂ ರೆಡ್ಡಿ ಸಹೋದರರ ಪ್ರಭಾವಕ್ಕೆ ಕಡಿಮೆಯಾಗಿದೆ ಎಂಬ ಚರ್ಚೆ ಮುನ್ನಲೆಗೆ ಬಂದಿದೆ. ಇತ್ತ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿಯೂ ಸ್ಪರ್ಧೆ ಮಾಡುವ ಉತ್ಸಾಹ ಬಂದಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾನುವಾರ ಬಳ್ಳಾರಿಗೆ ಭೇಟಿ ನೀಡಿದ ಸಂದರ್ಭ ಸರಿಯಾದ ವೇದಿಕೆಯೂ ಆಗಿದೆ. ಉತ್ಸಾಹಿಗಳು ತಮ್ಮ ಮನದಾಳವನ್ನು ಅಧ್ಯಕ್ಷರ ಮುಂದೆ ಇಟ್ಟಿದ್ದಾರೆ.
ಪಾಲಿಕೆ ಚುನಾವಣೆ ಟರ್ನಿಂಗ್ ಪಾಯಿಂಟ್
2020ರಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯೇ ಈ ಎಲ್ಲ ಬೆಳವಣಿಗೆಗೆ ಟರ್ನಿಂಗ್ ಪಾಯಿಂಟ್ ಆಗಿದೆ. ಈ ಫಲಿತಾಂಶವು ಕಾಂಗ್ರೆಸ್ಸಿಗರ ಪಾಲಿಗೆ ದಿಕ್ಸೂಚಿ ಎಂದರೂ ತಪ್ಪಾಗಲಾರದು. ಬಳ್ಳಾರಿ ಪಾಲಿಕೆ ಚುನಾವಣೆಯ 39 ವಾರ್ಡ್ಗಳ ಪೈಕಿ 21ರಲ್ಲಿ ಕಾಂಗ್ರೆಸ್ ಜಯಗಳಿಸಿದ್ದರೆ, ಬಿಜೆಪಿ 13ರಲ್ಲಿ ಇನ್ನುಳಿದ 5 ವಾರ್ಡ್‌ಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದರು. ಮತದಾರರ ನಾಡಿಮಿಡಿತ ಅರಿತ ಸ್ಥಳೀಯ ನಾಯಕರು ೨೦೨೩ರ ಚುನಾವಣೆಯ ಲೆಕ್ಕಾಚಾರದಲ್ಲಿ ನಿರತರಾದರು. ಈ ಹಿನ್ನೆಲೆಯಲ್ಲಿ ಮತದಾರ ಕಾಂಗ್ರೆಸ್‌ನತ್ತ ಒಲವು ತೋರುತ್ತಿದ್ದಾರೆಂಬ ಸುಳಿವನ್ನು ಹಿಡಿದು ಕೈ ನಾಯಕರು ಟಿಕೆಟ್‌ಗಾಗಿ ಮುಗಿಬಿದ್ದಿದ್ದಾರೆ.
ಪಾಲಿಕೆ ಚುನಾವಣೆಯೇ ಏಕೆ ಗೆಲುವಿನ ದಿಕ್ಸೂಚಿ?
2007ರಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 35 ವಾರ್ಡ್‌ಗಳ ಪೈಕಿ 30 ವಾರ್ಡ್‌ಗಳಲ್ಲಿ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಪ್ರಭಾವದಿಂದ ಬಿಜೆಪಿ ಗೆಲುವು ಸಾಧಿಸಿದರೆ, 3 ವಾರ್ಡ್‌ಗಳಲ್ಲಿ ಜೆಡಿಎಸ್, 2 ವಾರ್ಡ್‌ನಲ್ಲಿ ಬಿಎಸ್ಸಿ ಗೆಲುವು ಸಾಧಿಸಿತ್ತು. ಆಗ ಕಾಂಗ್ರೆಸ್ ತೀವ್ರ ಮುಖಭಂಗ ಎದುರಿಸಿತ್ತು. ಈ ಬೆನ್ನಲ್ಲೆ ಎದುರಾದ 2008 ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರವು ಪ್ರತಿಷ್ಠೆಯ ಕಣವಾಗಿತ್ತು. ಕಾಂಗ್ರೆಸ್‌ನಲ್ಲಿ ಅಂದು ಮಾಜಿ ಸಚಿವ ದಿವಾಕರ ಬಾಬು ಮತ್ತು ಅನಿಲ್ ಲಾಡ್ ಟಿಕೆಟ್ ಆಕಾಂಕ್ಷಿಯಾಗಿದ್ದು ಬಿಟ್ಟರೆ ಬೇರೆ ಯಾವ ಟಿಕೆಟ್ ಆಕಾಂಕ್ಷಿಗಳೂ ಇರಲಿಲ್ಲ.
ಇದನ್ನೂ ಓದಿ | ಬಾದಾಮಿಯಲ್ಲಿ ಅಡ್ಜಸ್ಟ್‌ಮೆಂಟ್ ?: ಚುನಾವಣೆಗೆ ಎರಡು ದಿನ ಮೊದಲು ಶ್ರೀರಾಮುಲು ಎಲ್ಲಿದ್ದರು?
ರೆಡ್ಡಿ ವರ್ಸಸ್ ಲಾಡ್ ಕದನ
ಅಂದು ರೆಡ್ಡಿ ಸಹೋದರರ ಚುನಾವಣೆಯ ತಂತ್ರಗಾರಿಕೆಯ ಎಲ್ಲ ಬಲಗಳಿಗೆ ಅನಿಲ್ ಲಾಡ್ ಸೆಡ್ಡು ಹೊಡೆಯುತ್ತಾರೆ ಎನ್ನುವ ಕಾರಣಕ್ಕೆ ಅವರಿಗೆ ಟಿಕೆಟ್ ಸಿಕ್ಕಿತ್ತು. 2008ರ ಚುನಾವಣೆಯಲ್ಲಿಯೇ ಸೋಮಶೇಖರ ರೆಡ್ಡಿಗೆ ಅನಿಲ್ ಲಾಡ್ ಅಕ್ಷರಶಃ ಆತಂಕ ಮೂಡಿಸಿದ್ದರು. ಅಲ್ಪ ಮತಗಳ ಅಂತರದಲ್ಲಿಯೇ ಲಾಡ್ ಸೋತರು. ಆದರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಭಾವ ಹೆಚ್ಚಲು ಕಾರಣವಾಗಿ 2013ರ ಗೆಲುವಿಗೆ ನಾಂದಿಯಾಯಿತು. 2018ರ ಚುನಾವಣೆಯಲ್ಲಿ ಕೊನೆಯ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್‌ನಲ್ಲಿ ಅನಿಲ್ ಲಾಡ್ ಹಿಂದೆ ಬಿದ್ದಿರುವುದು ಸೋಲಿಗೆ ಕಾರಣ ಎಂಬುದು ರಾಜಕೀಯ ವಿಶ್ಲೇಷಣೆಯಾಗಿದೆ.
ರೆಡ್ಡಿ ಸಹೋದರರು, ಶ್ರೀರಾಮುಲು ಪ್ರಭಾವ ಕಡಿಮೆಯಾಯ್ತೆ?
2007ರಲ್ಲಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಸೋಲು ಕಾಂಗ್ರೆಸ್ ಆಕಾಂಕ್ಷಿಗಳ ವಿಧಾನಸಭೆಯ ಟಿಕೆಟ್ ಉತ್ಸಾಹ ಕುಂದಿಸಿದ್ದರೆ, ಇನ್ನೊಂದು ಕಡೆ ರೆಡ್ಡಿ ಸಹೋದರರು ಮತ್ತು ಶ್ರೀರಾಮು ಲು ಅವರು ಪ್ರಭಾವ, ಚುನಾವಣೆ ತಂತ್ರಗಾರಿಕೆಗೆ ಕಾಂಗ್ರೆಸ್ ನಾಯಕರು ಆತಂಕ ಪಟ್ಟಿದ್ದು ವಾಸ್ತವ. ಈ ಬಾರಿ ಆಕಾಂಕ್ಷಿಗಳಲ್ಲಿ ಪಾಲಿಕೆ ಚುನಾವಣೆಯ ಗೆಲುವು ಉತ್ಸಾಹ ಮೂಡಿದ್ದರೆ, ಇನ್ನೊಂದು ಕಡೆ ಪಾಲಿಕೆ ಚುನಾವಣೆಯಲ್ಲಿ ರೆಡ್ಡಿ ಸಹೋದರರಲ್ಲಿ ಒಬ್ಬರಾದ ಸೋಮಶೇಖರ ರೆಡ್ಡಿ ಅವರ ಮಗ ಶ್ರವಣಕುಮಾರ್ ರೆಡ್ಡಿ 18 ವಾರ್ಡಿನಲ್ಲಿ ಕಾಂಗ್ರೆಸ್ ವಿರುದ್ಧ ಸೋತಿದ್ದರು. 39ನೇ ವಾರ್ಡಿನಲ್ಲಿ ಬಿಜೆಪಿ ಮುಖಂಡ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ (ಶ್ರೀರಾಮುಲು ಅವರ ಸಂಬಂಧಿ, ಮಾಜಿ ಶಾಸಕ ಸುರೇಶ್ ಬಾಬು ಸೋದರಮಾವ) ಮಗಳು ಉಮಾದೇವಿ ಕಾಂಗ್ರೆಸ್‌ನ ಶಶಿಕಲಾ ಜಗನ್ ವಿರುದ್ಧ ಸೋತಿರುವುದು ಸಹ ಇವರ ಪ್ರಭಾವ ಕಡಿಮೆಯಾಗಿರುವ ಸಂದೇಶವನ್ನು ರವಾನೆ ಮಾಡಿದಂತಾಗಿದೆ. ಇದರಿಂದಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಉತ್ಸಾಸ ಹಿಮ್ಮಡಿಗೊಳ್ಳಲು ಕಾರಣವಾಗಿದೆ.
ಕ್ಷೇತ್ರವೊಂದಕ್ಕೆ ಮುಗಿಬಿದ್ದ ಆಕಾಂಕ್ಷಿಗಳು
ವಿಭಾಜಿತ ಜಿಲ್ಲೆಯಲ್ಲಿರುವ ಐದು ಕ್ಷೇತ್ರಗಳ ಪೈಕಿ ನಾಲ್ಕು ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರಗಳಿದ್ದರೆ, ಬಳ್ಳಾರಿ ನಗರ ಮಾತ್ರ ಸಾಮಾನ್ಯ ಕ್ಷೇತ್ರವಾಗಿದೆ. ಸಹಜವಾಗಿಯೇ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಅನಿಲ್ ಲಾಡ್, ಮಾಜಿ ಸಚಿವ ದಿವಾಕರಬಾಬು ಅಥವಾ ಅವರ ಮಗ ಹನುಮ ಕಿಶೋರ್, ಸೂರ್ಯನಾರಾಯಣ ರೆಡ್ಡಿ ಅವರ ಮಗ ಭರತ್ ರೆಡ್ಡಿ, ಅಲ್ಲಂ ವೀರಭದ್ರಪ್ಪ ಅವರ ಮಗ ಅಲ್ಲಂ ಪ್ರಶಾಂತ್, ಜೆ.ಎಸ್. ಆಂಜಿನೇಯಲು, ಮುಂಡ್ಲೂರು ಅನುಪ್ಕುಮಾರ್, ಸುನೀಲ್ ರಾವೂರ್ ಸೇರಿದಂತೆ ಹಲವು ನಾಯಕರ ಹೆಸರು ಕೇಳಿ ಬರುತ್ತಿದೆ. ಟಿಕೆಟ್ ಹಂಚಿಕೆಯಲ್ಲಿ ಮುನಿಸು ಎದುರಾಗದೆ ಇರಲಾದರು ಎಂಬ ಆತಂಕವು ಕಾಂಗ್ರೆಸ್‌ನಲ್ಲಿ ಮನೆ ಮಾಡಿದೆ.
ಇದನ್ನೂ ಓದಿ | ಹಳೇ ಕ್ಷೇತ್ರ, ಹಳೇ ಸ್ನೇಹ; ರಾಜಕೀಯದ ವೈರತ್ವದ ಅಧ್ಯಾಯಕ್ಕೆ ನಾಗೇಂದ್ರ-ಶ್ರೀರಾಮಲು ಮುನ್ನುಡಿ!