ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆಗೆ (Election 2023) ಕಾಂಗ್ರೆಸ್‌ನಲ್ಲಿ ಕೇಳಿದರೆ ನಮ್ಮ ಮನೆಗೆ ನಾಲ್ಕು ಟಿಕೆಟ್ ಬೇಕಾದರೂ ಕೊಡುತ್ತಾರೆ ಎಂದು ಅದೇ ಪಕ್ಷದ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದರು.
ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಕೊಡುವ ನಿಯಮವೇನಾದರೂ ಕಾಂಗ್ರೆಸ್‌ನಲ್ಲಿ ಜಾರಿಯಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಶಾಮನೂರು, ಅದೆಲ್ಲ ಏನೂ ಇಲ್ಲ. ನಮ್ಮ ಕುಟುಂಬದವರು ಕೇಳಿದರೆ ಎರಡಲ್ಲ ನಾಲ್ಕು ಟಿಕೆಟ್ ಅನ್ನು ಬೇಕಾದರೂ ಕಾಂಗ್ರೆಸ್‌ನವರು ಕೊಡುತ್ತಾರೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಗಳಾದವರು ಕೆಪಿಸಿಸಿಗೆ ಅರ್ಜಿ ಸಲ್ಲಿಸುವ ನಿಯಮ ಇದ್ದು, ಇದಕ್ಕೆ ನ. ೨೧ ಕೊನೇ ದಿನವಾಗಿತ್ತು. ಆದರೆ, ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರು ಅರ್ಜಿ ಸಲ್ಲಿಕೆ ಮಾಡಿಲ್ಲ. ಈ ಬಗ್ಗೆ ಶಾಮನೂರು ಶಿವಶಂಕರಪ್ಪ ಅವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದಾಗ, ಈ ವಿಚಾರವಾಗಿ ನನ್ನ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನೇ ಕೇಳಿ ಎಂದು ಉತ್ತರಿಸಿದರು.
ಅವರು ಸ್ಪರ್ಧೆ ಮಾಡುತ್ತಾರೋ ಇಲ್ಲವೋ, ಅರ್ಜಿ ಏಕೆ ಹಾಕಿಲ್ಲ ಎಂಬ ಬಗ್ಗೆ ಅವರನ್ನೇ ಕೇಳಬೇಕು. ನಾವು ಯಾರೂ ಆಂತರಿಕವಾಗಿ ಈ ಬಗ್ಗೆ ಮಾತನಾಡುವುದಿಲ್ಲ. ಇದೆಲ್ಲ ಅವರವರ ಸ್ವಂತ ಅಭಿಪ್ರಾಯ ಎಂದು ಉತ್ತರಿಸಿದರು.
ಕಳೆದ ಚುನಾವಣೆಯಲ್ಲಿ ಸೋತಿದ್ದ ಎಸ್‌ಎಸ್‌ಎಂ
೨೦೧೮ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆ ವೇಳೆ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಭಾರಿ ಪೈಪೋಟಿ ಏರ್ಪಟಿತ್ತು. ಆದರೆ, ಕಾಂಗ್ರೆಸ್‌ನ ಎಸ್.ಎಸ್. ಮಲ್ಲಿಕಾರ್ಜುನ ಅವರ ವಿರುದ್ಧ ಬಿಜೆಪಿಯಿಂದ ರವೀಂದ್ರನಾಥ್ ವಿಜಯ ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಮಲ್ಲಿಕಾರ್ಜುನ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯಲಿದ್ದಾರೆಯೇ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ | ಜನಸಂಕಲ್ಪ ಯಾತ್ರೆ | ಟಿಕೆಟ್ ಆಕಾಂಕ್ಷಿಗಳಿಗೆ ಭಾಷಣದ ಪ್ರಾರಂಭದಲ್ಲೇ ಎಚ್ಚರಿಕೆ ಕೊಟ್ಟ ಸಿಎಂ ಬೊಮ್ಮಾಯಿ