Site icon Vistara News

Election 2023 | ರಾಜ್ಯ ಬಿಜೆಪಿ ಹಿರಿಯ ನಾಯಕರಿಗೆ ಸ್ಪರ್ಧೆ ಬೇಡವೆಂದರೇ ಲೆಹರ್‌ ಸಿಂಗ್‌?

Lehar sing

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ (Election 2023) ಸಂಬಂಧಪಟ್ಟಂತೆ ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಮಾಡಿರುವ ಒಂದು ಟ್ವೀಟ್‌ ಈಗ ಬಿಜೆಪಿ ವಲಯದಲ್ಲಿ ಭಾರಿ ಗದ್ದಲ ಸೃಷ್ಟಿಸಿದೆ. ಗುಜರಾತ್ ಬಿಜೆಪಿ ನಾಯಕರ ನಿರ್ಧಾರವು ರಾಜ್ಯಕ್ಕೆ ಮಾದರಿಯಾಗಲಿ. ರಾಜ್ಯ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಮುಂದಿನ ಚುನಾವಣೆಯಲ್ಲಿ ಹಿರಿಯ ನಾಯಕರು ಸ್ಪರ್ಧೆ ಮಾಡದೆ ಯುವ ಜನತೆಗೆ ಅವಕಾಶ ಮಾಡಿಕೊಡಿ ಎಂದು ಟ್ವೀಟ್‌ ಮಾಡಿದ್ದಾರೆ.

ಗುಜರಾತ್‌ ಮಾಜಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸಹಿತ ಇಬ್ಬರು ಸಚಿವರು ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಲೆಹರ್‌ ಸಿಂಗ್‌, ಈ ನಿರ್ಧಾರವನ್ನು ರಾಜ್ಯದ ಹಿರಿಯ ನಾಯಕರೂ ಅನುಕರಿಸಲಿ ಎಂದು ಕಿವಿ ಮಾತು ಹೇಳಿದ್ದಾರೆ. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಮುನ್ನಾದಿನ ಅವರು ಮಾಡಿರುವ ಈ ಟ್ವೀಟ್‌ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

ಟ್ವೀಟ್‌ನಲ್ಲೇನಿದೆ?
“ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಮಾಜಿ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಹಾಗೂ ಮಾಜಿ ಸಚಿವರಾದ ಭೂಪೇಂದ್ರ ಸಿಂಗ್‌ ಚುಡಾಸ್ಮ ಮತ್ತು ಪ್ರದೀಪ್ ಸಿಂಗ್‌ ಜಡೇಜಾ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ. ಗುಜರಾತ್‌ನಲ್ಲಿ ನಡೆದ ಈ ಬೆಳವಣಿಗೆಯು ಕರ್ನಾಟಕಕ್ಕೂ ಮಾದರಿಯಾಗಬೇಕು. ಮುಂದಿನ ಪೀಳಿಗೆಯ ಬದಲಾವಣೆಗೆ ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮ ಶ್ಲಾಘನೀಯವಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ರಾಜ್ಯ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ರಾಜ್ಯದ ಹಿರಿಯ ನಾಯಕರು ಕಿರಿಯರಿಗೆ ದಾರಿ ಮಾಡಿಕೊಡಬೇಕು” ಎಂದು ಲೆಹರ್‌ ಸಿಂಗ್‌ ಟ್ವಿಟರ್‌ ಮೂಲಕ ಹೇಳಿದ್ದಾರೆ.

ಯಾವ ನಾಯಕರಿಗೆ ಅನ್ವಯಿಸುತ್ತದೆ?
ಈಗ ಬಿಜೆಪಿ ವಲಯದಲ್ಲಿ ಈ ಟ್ವೀಟ್‌ ಬಹಳ ಸುದ್ದಿ ಮಾಡಿದ್ದು, ಯಾವೆಲ್ಲ ನಾಯಕರಿಗಾಗಿ ಅವರು ಹೇಳಿರಬಹುದು? ಹಿರಿಯ ನಾಯಕರು ಎಂದರೆ ಎಷ್ಟು ವಯಸ್ಸಿನವರು, ೬೦ ವರ್ಷ ಮೇಲ್ಪಟ್ಟವರೇ, ೭೦ ವರ್ಷ ಮೇಲ್ಪಟ್ಟವರೇ ಅಥವಾ ೭೫ ವರ್ಷಕ್ಕಿಂತ ಹೆಚ್ಚಿನವರಿಗೆ ಹೇಳಿದ್ದಾರೆಯೇ ಎಂಬ ಚರ್ಚೆಗಳು ಹುಟ್ಟಿಕೊಂಡಿವೆ.

ಇದನ್ನೂ ಓದಿ | Hindu | ಯಡಿಯೂರಪ್ಪ ಹಿಂದು ಅಲ್ಲ, ವೀರಶೈವ ಲಿಂಗಾಯತ ಎಂದ ಮಹಾಸಭಾದ ಪ್ರಧಾನ ಕಾರ್ಯದರ್ಶಿ!

Exit mobile version