ತುಮಕೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ (Election 2023) ನಾನು ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ. ನನ್ನ ಕುಟುಂಬದವರೂ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಮಧುಗಿರಿ ಶಾಸಕ ವೀರಭದ್ರಯ್ಯ ಯುಟರ್ನ್ ಹೊಡೆದಿದ್ದು, ಮುಂದಿನ ಚುನಾವಣೆಗೆ ತಾವೇ ಅಭ್ಯರ್ಥಿ ಎಂದು ಘೋಷಿಸಿದ್ದಾರೆ.
ಈ ಬಗ್ಗೆ ಮಧುಗಿರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ವೀರಭದ್ರಯ್ಯ, ಮುಂದಿನ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ನಾನೇ ಅಭ್ಯರ್ಥಿಯಾಗಲಿದ್ದೇನೆ. ದೇವೇಗೌಡ ಅವರ ಕುಟುಂಬಕ್ಕೆ ಇಲ್ಲ ಎಂದು ಹೇಳಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ನಾನು ನನ್ನ ಮನಸ್ಸನ್ನು ಬದಲಿಸಿದ್ದೇನೆ ಎಂದು ಹೇಳಿದರು.
ಕೆಲವು ಕಾರಣಗಳಿಂದಾಗಿ ನಾನು ಚುನಾವಣೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೆ. ನನ್ನ ಕುಟುಂಬದವರು ಕೂಡಾ ಸ್ಪರ್ಧಿಸುವುದು ಬೇಡ ಎನ್ನುತ್ತಿದ್ದರು. ಹೀಗಾಗಿಯೇ ನಾನು ಸ್ಪರ್ಧೆ ಮಾಡದಿರುವ ತೀರ್ಮಾನವನ್ನು ತೆಗೆದುಕೊಂಡಿದ್ದೆ. ಆದರೆ, ಈ ಸುದ್ದಿಯು ಮಾಧ್ಯಮಗಳಲ್ಲಿ ಬಂದ ನಂತರ ಜೆಡಿಎಸ್ ಕಾರ್ಯಕರ್ತರು ಬೆಂಗಳೂರಿನ ನನ್ನ ಮನೆಯ ಮುಂದೆ ಧರಣಿ ನಡೆಸಿದರು. ನಾನು ಸ್ಪರ್ಧೆ ಮಾಡಲೇಬೇಕೆಂದು ಹಠ ಹಿಡಿದರು. ನಾನು ನಿರ್ಧಾರ ಬದಲಿಸಲು ಇದೂ ಒಂದು ಕಾರಣವಾಗಿದೆ ಎಂದರು.
ಇದನ್ನೂ ಓದಿ | HD Kumaraswamy | ರಮೇಶ್ ಕುಮಾರ್ ವಿರುದ್ಧದ ʼಅವಾಚ್ಯʼ ಶಬ್ದವನ್ನು ಹಿಂಪಡೆದ ಮಾಜಿ ಸಿಎಂ
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರು ನನ್ನ ಮತ್ತು ನನ್ನ ಮಗನ ಜತೆ ಮಾತನಾಡಿದರು. ಹೈ ಕಮಾಂಡ್ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ. ಹೈಕಮಾಂಡ್ ಸೂಚನೆ ಮತ್ತು ಕಾರ್ಯಕರ್ತರ ಒತ್ತಾಯಕ್ಕೆ ನಾನು ಮಣಿದಿದ್ದೇನೆ. ಮುಂಬರುವ ಚುನಾವಣೆಯಲ್ಲೂ ನಾನೇ ಅಭ್ಯರ್ಥಿಯಾಗಿರಲಿದ್ದು, ಗೆಲುವು ಸಾಧಿಸುವ ವಿಶ್ವಾಸವಿದೆ. ಮಧುಗಿರಿಯನ್ನು ಜಿಲ್ಲೆಯನ್ನಾಗಿಸುವುದು. ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಮಾಡಿಸುವುದು ನನ್ನ ಮುಂದಿನ ಗುರಿಯಾಗಿದ್ದು, ಇವುಗಳು ಈಡೇರಿದರೆ ಮಾತ್ರ ನನಗೆ ಸಮಾಧಾನ. ಅಲ್ಲದೆ, ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿ ಎಂದು ಹೇಳಿದರು.
ಸ್ಪರ್ಧೆ ಮಾಡಲ್ಲ ಎಂದಿದ್ದ ವೀರಭದ್ರಯ್ಯ
ಇತ್ತೀಚೆಗೆ ಶಾಸಕ ವೀರಭದ್ರಯ್ಯ ಅವರು, “ತಾವು ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ” ಎಂದು ಕಾರ್ಯಕರ್ತರ ಸಮ್ಮುಖದಲ್ಲಿ, ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಇದು ರಾಜಕೀಯ ವಲಯದಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿತ್ತು. ಬಳಿಕ ಅವರ ಮನವೊಲಿಕೆ ಕಸರತ್ತುಗಳು ನಡೆದಿದ್ದವು. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಾತುಕತೆ ನಡೆಸಿದ್ದರು. ಈಗ ಕೊನೆಗೂ ಶಾಸಕ ವೀರಭದ್ರಯ್ಯ ಮನಸ್ಸನ್ನು ಬದಲಾಯಿಸಿದ್ದು, ಮುಂದಿನ ಚುನಾವಣೆಗೆ ಜೆಡಿಎಸ್‌ನಿಂದ ತಾವೇ ಅಭ್ಯರ್ಥಿಯಂದು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ | HD Kumaraswamy | ಹೆಣ್ಣು ಮಕ್ಕಳು ಅದೇ ಜಿಲ್ಲೆಯ ಗಂಡನ್ನೇ ವರಿಸುವ ಹೊಸ ಕಾನೂನು ಜಾರಿಗೆ ತನ್ನಿ; ಎಚ್‌ಡಿಕೆಗೆ ಯುವ ರೈತನ ಪತ್ರ