ಯಶವಂತ್ ಕುಮಾರ್ ಎ. ವಿಸ್ತಾರ ನ್ಯೂಸ್ ದಾವಣಗೆರೆ
೨೦೨೩ರ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಸಲು ನವೆಂಬರ್ 21 ಕಡೆಯ ದಿನವಾಗಿತ್ತು. ಆದರೆ, ಮಾಜಿ ಸಚಿವ ಎಸ್.ಎಸ್. ಮಲ್ಲಿ ಕಾರ್ಜುನ್ ಅವರು ಅರ್ಜಿ ಸಲ್ಲಿಸದೆ ಇರುವುದು ದಾವಣಗೆರೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ದಾವಣಗೆರೆ ಕಾಂಗ್ರೆಸ್‌ನ ಹೈಕಮಾಂಡ್ ಎಂದೇ ಹೆಸರು ಪಡೆದ ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಕಾಂಗ್ರೆಸ್ ಟಿಕೆಟ್ ಗಾಗಿ ಯಾವುದೇ ಅರ್ಜಿ ಸಲ್ಲಿಸಿಲ್ಲ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಎಸ್.ಎಸ್.ಮಲ್ಲಿಕಾರ್ಜುನ್ ಬಹುತೇಕ ಫೈನಲ್ ಎಂಬಂತಿತ್ತು ರಾಜಕೀಯ ವಾತಾವರಣ. ಈ ಬಾರಿ ಟಿಕೆಟ್ ಪಡೆಯಲು ಇಚ್ಛಿಸುವವರು ಕಡ್ಡಾಯವಾಗಿ ಕೆಪಿಸಿಸಿಗೆ ಅರ್ಜಿ ಹಾಕಬೇಕು ಎಂಬ ಕಡ್ಡಾಯ ಆದೇಶದ ನಡುವೆಯೂ ಮಲ್ಲಿಕಾರ್ಜುನ್ ಡೋಂಟ್ ಕೇರ್ ಎಂದಿದ್ದಾರೆ.
2018ರ ವಿಧಾನಸಭಾ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್.ಎಸ್.ಮಲ್ಲಿಕಾರ್ಜುನ್ ಬಿಜೆಪಿಯ ಎಸ್.ಎ.ರವೀಂದ್ರನಾಥ್ ವಿರುದ್ಧ ಸೋಲು ಕಂಡಿದ್ದರು. ಬಳಿಕ ರಾಜಕೀಯವಾಗಿ ಕಾಣಿಸಿಕೊಂಡಿದ್ದು ಕೊಂಚ ಕಡಿಮೆಯೇ. 2023ರ ಚುನಾವಣೆಯಲ್ಲಿ ಪುನಃ ಕಣಕ್ಕಿಳಿಯಲು ತಯಾರಿ ನಡೆಸಿದ್ದ ಮಲ್ಲಿಕಾರ್ಜುನ್ ಕೆಪಿಸಿಸಿಗೆ ಅರ್ಜಿ ಸಲ್ಲಿಸದೆ ಭಿನ್ನ ನಡೆ ಅನುಸರಿಸಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಮಲ್ಲಿಕಾರ್ಜುನ್ ತಂದೆ ಶಾಮನೂರು ಶಿವಶಂಕರಪ್ಪ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಕಾಂಗ್ರೆಸ್ ನಲ್ಲಿ ಹಿರಿಯರಾದ ಕಾಗೋಡು ತಿಮ್ಮಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಅನೇಕ ಹಿರಿಯರು ಕೆಪಿಸಿಸಿಗೆ ಶುಲ್ಕ ಕಟ್ಟಿ ಅರ್ಜಿ ಹಾಕಿದ್ದಾರೆ. ಆದರೆ, ಎಸ್.ಎಸ್.ಮಲ್ಲಿಕಾರ್ಜುನ್ ಮಾತ್ರ ಯಾವುದೇ ಅರ್ಜಿ ಹಾಕಿಲ್ಲ. ಅತ್ತ ತಿರುಗಿಯೂ ನೋಡಿಲ್ಲ. ಮಲ್ಲಿಕಾರ್ಜುನ್ ಅವರ ಈ ನಡೆ ದಾವಣಗೆರೆ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಕೆಪಿಸಿಸಿ ಅಧ್ಯಕ್ಷರು ಅರ್ಜಿ ಹಾಕಿದವರಿಗೆ ಮಾತ್ರ ಟಿಕೆಟ್ ಎಂದಿದ್ದಾರೆ. ಇತ್ತ ಮಲ್ಲಿಕಾರ್ಜುನ್ ಅರ್ಜಿ ಹಾಕಿಲ್ಲ. ಆದರೆ, ಕ್ಷೇತ್ರದ ಜನ ಮಾತ್ರ ಈ ಬಾರಿಯೂ ಮಲ್ಲಿಕಾರ್ಜುನ್ ಗೆ ಟಿಕೆಟ್ ಖಚಿತ ಎನ್ನುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ನಡೆಯುತ್ತದೆ. ಕಳೆದ ಬಾರಿ ಅಂಬರೀಶ್ ಮನೆಗೆ ಹೋಗಿ ಬಿ ಫಾರಂ ಕೊಟ್ಟು ಬಂದಿಲ್ವಾ ಅದೇ ರೀತಿ ಈ ಬಾರಿಯೂ ಮಲ್ಲಿಕಾರ್ಜುನ್ ಮನೆಗೆ ಬಿ ಫಾರಂ ಬರುತ್ತೆ ಎನ್ನುತ್ತಾರೆ ಎಸ್ಸೆಸ್ಸೆಂ ಆಪ್ತರು. ಆದರೆ, ವಿರೋಧಿ ಬಣದವರು ಕೆಪಿಸಿಸಿ ನಡೆಗಾಗಿ ಕಾದು ಕುಳಿತಿದ್ದಾರೆ.
ಎಸ್.ಎಸ್.ಮಲ್ಲಿಕಾರ್ಜುನ್ ಕಡೆಯ ದಿನವೂ ಅರ್ಜಿ ಹಾಕಿಲ್ಲ. ದಾವಣಗೆರೆ ಉತ್ತರಕ್ಕೆ ಇದುವರೆಗೂ ಕಾಂಗ್ರೆಸ್ ಪಕ್ಷದಿಂದ ಯಾರೂ ಅರ್ಜಿ ಹಾಕಿಲ್ಲ. ಹಾಗಾಗಿ ಪಕ್ಷ ಟಿಕೆಟ್ ಯಾರಿಗಾದರೂ ನೀಡಬಹುದು ಎನ್ನುತ್ತಾರೆ ಕಾಂಗ್ರೆಸ್ ದಾವಣಗೆರೆ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ.
ಇದನ್ನೂ ಓದಿ | Election 2023 | ಕೊನೆಗೂ ಕಾಂಗ್ರೆಸ್ ಟಿಕೆಟ್ ಪಡೆಯಲು ಅರ್ಜಿ ಸಲ್ಲಿಸಿದ ಸಿದ್ದರಾಮಯ್ಯ: ಒಂದೇ ಕ್ಷೇತ್ರದಿಂದ ಸ್ಪರ್ಧೆ