ಚಿಕ್ಕಮಗಳೂರು/ಬಾಗಲಕೋಟೆ: ಚುನಾವಣೆ (Election 2023) ಹತ್ತಿರ ಬಂದಾಗ ಭಾವನಾತ್ಮಕವಾಗಿ ಮಾತನಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮಗೆ ಆರೋಗ್ಯ ಸರಿ ಇಲ್ಲ, ನಾನು ಸಿಎಂ ಆಗಬೇಕೆಂದರೆ ನೀವು ಮತ ಹಾಕಬೇಕು ಎಂದೆಲ್ಲ ಹೇಳುತ್ತಾರೆ. ಆದರೆ, ಅವರ ಸುಳ್ಳನ್ನು ಜನ ನಂಬಲಾರರು. ಅದಕ್ಕಾಗಿಯೇ ಅವರನ್ನು ಕಳೆದ ಬಾರಿ ಪ್ರತಿಪಕ್ಷ ನಾಯಕರನ್ನಾಗಿ ಕೂರಿಸಿದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಡೂರಿನಲ್ಲಿ ಸುದ್ದಿಗಾರರ ಬಳಿ ಮಾತನಾಡಿದ ಅವರು, ಚುನಾವಣೆ ಹತ್ತಿರ ಬಂದಿದೆ. ಹೀಗಾಗಿ ಸಿದ್ದರಾಮಯ್ಯ ಭಾವನಾತ್ಮಕವಾಗಿ ಮತ ಕೇಳುತ್ತಿದ್ದಾರೆ. ಅವರು ನೂರು ಕಾಲ ಬದುಕಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. 2013ರ ಚುನಾವಣೆಯಲ್ಲಿಯೂ ಅವರು ಇದೇ ರೀತಿ ಹೇಳಿದ್ದರು. ಆಗ ಜನ ಅವರನ್ನು ನಂಬಿ ಮತ ಹಾಕಿದ್ದರು. ಆದರೆ, ಅವರ ಆಡಳಿತ ಕಾಲದಲ್ಲಿ ಕೊಲೆ, ಸುಲಿಗೆ ಜಾಸ್ತಿ ಇತ್ತು. ಬಳಿಕ ಜನ ಅವರನ್ನು ನಂಬದೇ, ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ ಎಂದು ಹೇಳಿದರು.
ಮತ್ತೆ ಜನ ನಂಬಲಾರರು
ಸಿದ್ದರಾಮಯ್ಯ ಅವರು ಈಗ ಮತ್ತೆ ಭಾವನಾತ್ಮಕವಾಗಿ ಮಾತುಗಳನ್ನು ಆಡುತ್ತಿದ್ದಾರೆ. ಅವರನ್ನು ನಂಬುವ ಸ್ಥಿತಿಯಲ್ಲಿ ಜನರು ಇಲ್ಲ. ಕನ್ನಡಿಗರು ಇಂತಹ ಮಾತಿಗೆ ಬೆಲೆ ನೀಡಲಾರರು. ರಾಜ್ಯದ ಜನತೆ ವಿಶ್ಲೇಷಣೆ ಮಾಡಿ ಮತ ಹಾಕುತ್ತಾರೆ ಎಂದು ಸಿಎಂ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ | Live | BJP Janasankalpa Yatre | ಸಿದ್ದರಾಮಯ್ಯ ಮಾಡಿದ್ದು ಭಾಷಣ; ಸಾಮಾಜಿಕ ನ್ಯಾಯ ನೀಡಿದ್ದು ಬಿಜೆಪಿ: ಸಿಎಂ ಬೊಮ್ಮಾಯಿ
ಸಿದ್ದರಾಮಯ್ಯರಿಗೆ ಯಾವ ಕ್ಷೇತ್ರವೂ ಸೇಫ್ ಅಲ್ಲ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ರಾಜ್ಯದಲ್ಲಿ ಯಾವ ಕ್ಷೇತ್ರವೂ ಸೇಫ್ ಇಲ್ಲ. ದೇಶದ ಜನ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡುತ್ತಿದ್ದಾರೆ. ಯುವಕರು ಕಾಂಗ್ರೆಸ್ ಪಕ್ಷವನ್ನು ನಿರಾಕರಿಸಿ ಗುಂಡಿಗೆ ಹಾಕಿದ್ದಾರೆ. ಗುಂಡಿಯನ್ನು ಯಾರೋ ತೋಡಿರುತ್ತಾರೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬಾಗಲಕೋಟೆಯಲ್ಲಿ ಹೇಳಿದರು.
ಇನ್ನು ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವ ವಿಚಾರವಾಗಿ ಮಾತುಗಳು ಕೇಳಿಬರುತ್ತಿದೆ. ಕೋಲಾರದಲ್ಲಿ ಕಾಂಗ್ರೆಸ್ ಪರಿಸ್ಥಿತಿ ನೆಟ್ಟಗೆ ಇಲ್ಲ. ಅಲ್ಲಿ ಭಿನ್ನಮತ ಜಾಸ್ತಿ ಇದೆ. ಅಲ್ಲಿ ಈಗಾಗಲೇ ಕಾಂಗ್ರೆಸ್ ಹಿರಿಯ ನಾಯಕ ಮುನಿಯಪ್ಪ ಅವರನ್ನೇ ಸ್ವಪಕ್ಷೀಯರು ಸೋಲಿಸಿದ್ದಾರೆ. ಆ ಸರದಿ ಎಲ್ಲರಿಗೂ ಬರಬಹುದು. ಚಾಮುಂಡಿಯಲ್ಲಿ ಜನ ಅವರನ್ನು ಕೈ ಬಿಟ್ಟರೂ, ಬಾದಾಮಿ ಜನ ಅವರನ್ನು ಗೌರವದಿಂದ ಗೆಲ್ಲಿಸಿದ್ದರು. ಅವರ ಸೇವೆ ಮಾಡಿಕೊಂಡು ಅವರು ಇಲ್ಲೇ ಇರಬೇಕಿತ್ತು. ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು ತಳ್ಳುವ ಕೆಲಸ ಮಾಡಬಾರದು. ಇಲ್ಲೇ ಸ್ಪರ್ಧೆ ಮಾಡುತ್ತಾರೆ ಎಂದು ಭಾವಿಸಿದ್ದೆವು. ಈಗ ಇಲ್ಲಿಂದಲೂ ಹೊರಗೆ ಹೋಗುತ್ತಿದ್ದಾರೆ. ಕಷ್ಟ ಕಾಲದಲ್ಲಿ ಕೈ ಹಿಡಿದವರನ್ನು ಮರಿಯಬಾರದು ಎಂದು ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ | ಶೆಲ್ಟರ್‌ನಲ್ಲಿ ಗುಂಬಜ್ | ಗುಂಬಜ್ ಒಡೀತೇನೆ ಅನ್ನೋದಕ್ಕೆ ಪ್ರತಾಪ್ ಸಿಂಹ ಯಾವನ್ರೀ?: ಅಬ್ಬರಿಸಿದ ಸಿದ್ದರಾಮಯ್ಯ