ಉಡುಪಿ: ಕಾಂಗ್ರೆಸ್‌ನವರು ವಿಧಾನಸಭಾ ಚುನಾವಣೆಯನ್ನು (Election 2023) ಗೆಲ್ಲುತ್ತಾರೆಂಬುದು ಸುಳ್ಳು. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ. ಮೊದಲು ಅವರ ಕ್ಷೇತ್ರ ಬಾದಾಮಿಯಲ್ಲಿ ಗೆಲ್ಲಲಿ, ಕರ್ನಾಟಕದಲ್ಲಿ ಗೆದ್ದು ಬರುವ ಮಾತನ್ನಾಡುವ ಅವರು ಬಾದಾಮಿಯನ್ನು ಏಕೆ ಬಿಡುವ ತೀರ್ಮಾನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಶ್ನೆ ಮಾಡಿದರು.
ಮುಂಬರುವ ವಿಧಾನಸಭಾ ಚುನಾವಣೆಯನ್ನು ಗೆದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗಿಫ್ಟ್ ಕೊಡುತ್ತೇವೆ ಎಂದು ಹೇಳಿರುವ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಬಿಎಸ್‌ವೈ, ಸಿದ್ದರಾಮಯ್ಯ ಯಾವುದೋ ಭ್ರಮೆಯಲ್ಲಿದ್ದಾರೆ. ರಾಜ್ಯದ ಜನ ಅವರ ಜೇಬಿನಲ್ಲಿದ್ದಾರೆ ಎಂಬ ಭಾವನೆ ಮನಸ್ಸಲ್ಲಿದ್ದಂತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುವುದು ಅಸಾಧ್ಯ ಎಂದು ಹೇಳಿದರು.
ನಾನು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಪ್ರವಾಸ ಹೊರಟಾಗ ಅಭೂತಪೂರ್ವ ಜನಬೆಂಬಲ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲದೊಂದಿಗೆ ಬಿಜೆಪಿಗೆ ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಸಿಗಲಿದೆ. ಕರ್ನಾಟಕದಲ್ಲಿ ಬಿಜೆಪಿಯ ಗೆಲುವನ್ನು ತಡೆಯಲು ಸಿದ್ದರಾಮಯ್ಯ ಅವರಿಂದ ಸಾಧ್ಯವಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.
ಇದನ್ನೂ ಓದಿ | ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರೋದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿ.ಎಸ್.ಯಡಿಯೂರಪ್ಪ
ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುವ ಸಿದ್ದರಾಮಯ್ಯ ಅವರೇ, ನೀವು ಬಾದಾಮಿ ವಿಧಾನಸಭಾ ಕ್ಷೇತ್ರವನ್ನು ಯಾಕೆ ಬಿಟ್ಟು ಬರುತ್ತಿದ್ದೀರಿ? ಬಾದಾಮಿಯಲ್ಲಿ ಸ್ಪರ್ಧೆ ಮಾಡಿದರೆ ಸಿದ್ದರಾಮಯ್ಯ ಅವರಿಗೆ ಸೋಲು ನಿಶ್ಚಿತ. ಶಾಸಕರಾಗಿ ಕೆಲವೇ ಮತಗಳಿಂದ ಅಂದು ಅವರು ಗೆದ್ದು ಬಂದಿರುವ ನೀವು, ಆನಂತರ ಕ್ಷೇತ್ರವನ್ನು ಮರೆತುಬಿಟ್ಟಿದ್ದೀರಿ, ಅಲ್ಲಿ ಯಾವುದೇ ಅಭಿವೃದ್ಧಿಯನ್ನೂ ಮಾಡಿಲ್ಲ. ಬಾದಾಮಿಯನ್ನು ತೊರೆಯುವ ನಿರ್ಧಾರವನ್ನು ಮಾಡಿರುವ ನಿಮಗೆ ಎಷ್ಟರ ಮಟ್ಟಿಗೆ ಶೋಭೆ ತರುತ್ತದೆ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
ರಾಜ್ಯದ ಜನ ಈಗಾಗಲೇ ತೀರ್ಮಾನವನ್ನು ಮಾಡಿದ್ದು, ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಉತ್ತರ ಕೊಡುತ್ತಾರೆ. ಬೇರೆಬೇರೆ ಪಕ್ಷದಿಂದ ಅನೇಕರು ಈಗಾಗಲೇ ಬಿಜೆಪಿಗೆ ಬಂದಿದ್ದಾರೆ. ಇನ್ನೂ ಬರುವವರಿದ್ದಾರೆ ಎಂದು ಬಿಎಸ್‌ವೈ ಹೇಳಿದರು.
ಸತೀಶ್ ಜಾರಕಿಹೊಳಿ ಗೌರವದಿಂದ ನಡೆದುಕೊಳ್ಳಲಿ
ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಿಂದು ಅಶ್ಲೀಲ ಹೇಳಿಕೆ ವಿಚಾರ. ಹಿಂದುಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದು ಖಂಡನೀಯ. ಕಾಂಗ್ರೆಸ್‌ನವರು ಇದನ್ನು ಖಂಡಿಸಿದ್ದಾರೆ. ಕಾಂಗ್ರೆಸ್ ಕೇವಲ ಖಂಡನೆ ಮಾಡಿದರೆ ಸಾಲುವುದಿಲ್ಲ. ಸತೀಶ್ ಜಾರಕಿಹೊಳಿ ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು. ಹಗುರವಾಗಿ ಮಾತನಾಡಿದರೆ ದೊಡ್ಡವನಾಗುತ್ತೇನೆ ಎಂದು ಅಂದುಕೊಂಡಿದ್ದರೆ ಅದೊಂದು ಭ್ರಮೆ. ಅವರು ಗೌರವದಿಂದ ನಡೆದುಕೊಳ್ಳಬೇಕು. ಹಿಂದುಗಳಿಗೆ ಅಪಮಾನ ಆಗುವ ಹಾಗೆ ವರ್ತನೆ ಮಾಡಬಾರದು ಎಂದು ಪ್ರಶ್ನೆಯೊಂದಕ್ಕೆ ಬಿಎಸ್‌ವೈ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ | Sarvodaya Samavesha | ಸಣ್ಣಪುಟ್ಟ ಭಿನ್ನಮತ ಇದ್ದರೂ ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇವೆ: ಖರ್ಗೆಗೆ ಸಿದ್ದು ಮಾತು