ಬೆಂಗಳೂರು: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಪ್ರಕ್ರಿಯೆ ಭರದಿಂದ ಸಾಗಿದೆ. ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನ ಮಾತ್ರ ಬಾಕಿಯಿದ್ದು, ಈ ಪೈಕಿ ಬಿಜೆಪಿಯಿಂದ ಅನೇಕರು ಸಲ್ಲಿಕೆ ಮಾಡಿದ್ದಾರೆ.
ಸಂಸದ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್ ಚಿಂಚೋಳಿಯಿಂದ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಬಳಿ 30 ಸಾವಿರ ರೂ. ನಗದು, ಪತ್ನಿಯ ಬಳಿ 15 ಸಾವಿರ ರೂ. ನಗದು ಇದೆ ಎಂದಿದ್ದಾರೆ. ಒಟ್ಟು 1.4 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ 67. 19 ಲಕ್ಷ ರೂ. ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ.
ಪಶುಸಂಗೋಪನ ಸಚಿವರಾಗಿದ್ದ ಪ್ರಭು ಚವ್ಹಾಣ್ ಔರಾದ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಕೈಯಲ್ಲಿ 2.2 ಲಕ್ಷ ನಗದು ಸೇರಿ 2 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇದರಲ್ಲಿ ಆರು ಕ್ರೇನ್, ಮೂರು ಜೆಸಿಬಿ, 4 ಟಾಟಾ ಟಿಪ್ಪರ್, 1 ಅಶೋಕ್ ಲೇಲ್ಯಾಂಡ್ ಟಿಪ್ಪರ್, ಮೂರು ಡಂಪರ್ ಹಾಗೂ ಮೂರು ಫಾರ್ಚ್ಯೂನರ್ ಕಾರು, ಒಂದು ಸ್ಕಾರ್ಪಿಯೋ ಕಾರು ಇವೆ. 6.6 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಘೋಷಿಸಿದ್ದಾರೆ. ತಮ್ಮ ಉದ್ಯೋಗವನ್ನು ಕೃಷಿ ಮತ್ತು ಉದ್ಯ, (ಪ್ರಭು ಎಂಟರ್‌ಪ್ರೈಸಸ್) ಎಂದು ತಿಳಿಸಿದ್ದಾರೆ.
ಶಂಕರ ಪಾಟೀಲ್ ಮುನೇನಕೊಪ್ಪ ಅವರು ನವಲಗುಂದ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಕೈಯಲ್ಲಿ 2.59 ಲಕ್ಷ ರೂ. ನಗದು ಹೊಂದಿದ್ದು, ಒಟ್ಟು 4.37 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ಒಟ್ಟು 5.24 ಕೋಟಿ ರೂ. ಸ್ಥಿರಾಸ್ತಿ ಇದೆ ಎಂದು ಹೇಳಿದ್ದಾರೆ.
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ತಿಪಟೂರಿನಿಂದ ನಾಮಪತ್ರ ಸಲ್ಲಿಸಿದ್ದಾರೆ. ಅವರ ಕೈಯಲ್ಲಿ 1 ಲಕ್ಷ ರೂ. ನಗದು ಇದೆ. 4. 35 ಕೋಟಿ ಚರಾಸ್ತಿ, ಒಟ್ಟು 5. 65 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಹೇಳಿದ್ದಾರೆ.
ವಸತಿ ಸಚಿವ ವಿ. ಸೋಮಣ್ಣ ಅವರು ವರುಣ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದು, ತಮ್ಮ ಬಳಿ 3.61 ಕೋಟಿ ರೂ. ಚರಾಸ್ತಿ ಇದ್ದರೆ ಪತ್ನಿ ಬಳಿ 13.01 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ ಎಂದಿದ್ದಾರೆ. ತಮ್ಮ ಬಳಿ 10.21 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದ್ದರೆ ಪತ್ನಿ ಬಳಿ ದುಪ್ಪಟ್ಟು ಅಂದರೆ 21 ಕೋಟಿ ರೂ. ಮೌಲ್ಯಸ ಸ್ಥಿರಾಸ್ತಿ ಇದೆ ಎಂದಿದ್ದಾರೆ. ಸಾಲದಲ್ಲೂ ಪತ್ನಿಯೇ ಮುಂದಿದ್ದಾರೆ. ಸೋಮಣ್ಣ 2.9 ಕೋಟಿ ರೂ. ಹೊಣೆಗಾರಿಕೆಗಳನ್ನು ಹೊಂದಿದ್ದರೆ, ಪತ್ನಿ 4.53 ಕೋಟಿ ರೂ. ಹೊಣೆಗಾರಿಕೆ ಹೊಂದಿದ್ದಾರೆ.
ಬಿಬಿಎಂಪಿ ಆಯುಕ್ತ ಸೇರಿ ಸರ್ಕಾರದ ವಿವಿಧ ಹುದ್ದೆಯಲ್ಲಿದ್ದು ನಿವೃತ್ತರಾದ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ ಕುಮಾರ್ ಕೊರಟಗೆರೆಯಿಂದ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಬಳಿ 3.6 ಕೋಟಿ ರೂ., ಪತ್ನಿ ಬಳಿ 4.3 ಕೋಟಿ ರೂ. ಮೌಲ್ಯದ ಚರಾಸ್ತಿ ಇದೆ. ಅನಿಲ್ ಕುಮಾರ್ ಬಳಿ 6 ಕೋಟಿ ರೂ. ಹಾಗೂ ಪತ್ನಿ ಬಳಿ 18 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಹೇಳಿದ್ದಾರೆ. ಸರ್ಕಾರಿ ಅಧಿಕಾರಿಯಾಗಿದ್ದು ನಿವೃತ್ತರಾಗಿರುವ ಅನಿಲ್ ಕುಮಾರ್, ತಮ್ಮದು ʼಸಮಾಜ ಸೇವೆʼ ಉದ್ಯೋಗ ಎಂದು ಹೇಳಿದ್ದಾರೆ.
ಇದನ್ನೂ ಓದಿ: Public Exam : 5, 8ನೇ ತರಗತಿ ಪಬ್ಲಿಕ್ ಪರೀಕ್ಷೆ, ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ, ನಾಳೆ ವಿಚಾರಣೆ