Site icon Vistara News

KRPP Party: ಜನಾರ್ದನ ರೆಡ್ಡಿ ಪಕ್ಷಕ್ಕೆ ಫುಟ್‌ಬಾಲ್‌ ಚಿಹ್ನೆ: 30 ಸೀಟು ಗುರಿ; ಚಿಹ್ನೆ ಆಯ್ಕೆಯ ಸ್ವಾರಸ್ಯ ಬಿಚ್ಚಿಟ್ಟ ಮಾಜಿ ಸಚಿವ

#image_title

ಬೆಂಗಳೂರು: ಗಣಿ ಉದ್ಯಮಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸ್ಥಾಪಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ( KRPP Party) ಫುಟ್‌ಬಾಲ್‌ ಗುರುತು ಆಯ್ಕೆ ಮಾಡಿಕೊಂಡಿದ್ದಾರೆ. ಫುಟ್‌ಬಾಲ್‌ ಗುರುತು ಹಾಗೂ ಪಕ್ಷದ ಪ್ರಣಾಳಿಕೆಯನ್ನು ಬೆಂಗಳೂರಿನಲ್ಲಿ ಜನಾರ್ದನ ರೆಡ್ಡಿ ಬಿಡುಗಡೆ ಮಾಡಿದ್ದಾರೆ.

ಆರೋಗ್ಯ, ಶಿಕ್ಷಣ, ಕೃಷಿ ಸೇರಿ 11 ಕ್ಷೇತ್ರಗಳ ಪ್ರಣಾಲಿಕೆಯನ್ನು ಸಿದ್ಧಪಡಿಸಲಾಗಿದ್ದು, ಪ್ರತಿಯೊಂದಕ್ಕೂ ಮಹಾಪುರುಷರ ಹೆಸರನ್ನು ಇಡಲಾಗಿದೆ. ಬಸವೇಶ್ವರ ರೈತ ಭರವಸೆ, ಬಸವೇಶ್ವರ ಆರೋಗ್ಯ ಕವಚ, ರಾಣಿ ಚೆನ್ನಮ್ಮ ಅಭಯ ಹಸ್ತ, ಸಂಗೊಳ್ಳಿ ರಾಯಣ್ಣ ಯುವ ಕಿರಣ, ಬಸವೇಶ್ವರ ಗೃಹ ಯೋಜನೆ, ಒನಕೆ ಓಬವ್ವ ಸ್ವಾಭಿಮಾನ ಯೋಜನೆ, ಬಸವೇಶ್ವರ ಶಿಕ್ಷಣ ಸುಧಾರಣೆ, ಬಸವೇಶ್ವರ ಜಲ ಯಜ್ಞ, ಬಸವೇಶ್ವರ ಆಸರೆ ಪಿಂಚಣಿ ಯೋಜನೆ, ಅಭಿವೃದ್ಧಿ ವಿಕೇಂದ್ರೀಕರಣ, ಮಹರ್ಷಿ ವಾಲ್ಮೀಕಿ-ಅಂಬೇಡ್ಕರ್‌ ಜನಸ್ನೇಹಿ ಯೋಜನೆಗಳು ಎಂದು ಹೆಸರಿಸಲಾಗಿದೆ.

ಪ್ರಮುಖವಾಗಿ ಕೆಲವು ಘೋಷಣೆಗಳು ಈ ಕೆಳಕಂಡಂತಿವೆ

  1. ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ವಾರ್ಷಿಕ 15 ಸಾವಿರ ರೂ. ಬಂಡವಾಳ ನೆರವು
  2. ಐದು ಎಕರೆವರೆಗೆ ಭೂಮಿ ಹೊಂದಿರುವ ರೈತರ ಜಮೀನಿಗೆ ಉಚಿತ ಬೋರ್‌ವೆಲ್‌
  3. ವಾರ್ಷಿಕ ಆದಾಯ ಐದು ಲಕ್ಷ ರೂ.ಗಿಂತ ಕಡಿಮೆಯಿರುವವರಿಗೆ ಉಚಿತ ಆರೋಗ್ಯಶ್ರೀ
  4. ಗೃಹಿಣಿಯರಿಗೆ ಮಾಸಿಕ 2,500 ರೂ.
  5. ಒಂಟಿಯಾಗಿ ಜೀವಿಸುವ ಮಹಿಳೆಯರಿಗೆ ಮಾಸಿಕ 2,500 ರೂ.
  6. ಪ್ರತಿ ಮನೆಗೂ 250 ಯೂನಿಟ್‌ ಉಚಿತ ವಿದ್ಯುತ್‌
  7. ಉನ್ನತ ಶಿಕ್ಷಣ ಪೂರೈಸಲು ಬಸವಣ್ಣ ಕ್ರೆಡಿಟ್‌ ಕಾರ್ಡ್‌
  8. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ವೇತನ
  9. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ರೂ. ವೇತನ ಹೆಚ್ಚಳ
  10. ವೃದ್ಧಾಪ್ಯ ವೇತನವನ್ನು 1,200ರೂ.ನಿಂದ 1,500 ರೂ.ಗೆ ಹೆಚ್ಚಳ ಮಾಡುವುದು
  11. ಅಂಗವಿಕಲರ ಪಿಂಚಣಿಯನ್ನು 2,000 ರೂ.ಗೆ ಹೆಚ್ಚಿಸುವುದು
  12. ನೇಕಾರರ ಸಂಪೂರ್ಣ ಸಾಲ ಮನ್ನಾ

ಲಾಂಚನ ಹಾಗೂ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಈಗಾಗಲೇ ನಾನು ಪಕ್ಷದ ಕನಸುಗಳನ್ನು ಜನರ ಮುಂದೆ ಹೇಳ್ತಾಯಿದ್ದೀನಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರಿಗೆ ಒಳ್ಳೆಯದು ಆಗಬೇಕು. ಜನರು ಸಹ ನನಗೆ ಸ್ಪಂದಿಸಿದ್ದಾರೆ. 12 ಅಭ್ಯರ್ಥಿಗಳ ಘೋಷಣೆ ಮಾಡದ್ದೀನಿ. 50 ಕ್ಷೇತ್ರಗಳಲ್ಲಿ ಪಕ್ಷದ ಚಟುವಟಿಕೆಗಳು ನಡೆಯುತ್ತಿವೆ. 30 ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲ್ಲುವು ಸಾಧಿಸಲಿದೆ. ಹಿಂದೆ ರಾಜಕೀಯ ಮಾಡುವಾಗ ಏನ್ ಏನ್ ಸಮಸ್ಯೆ ಇತ್ತು ಅಂತ ಗೊತ್ತಿತ್ತು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಈ ಹಿಂದೆ ಪಾವಗಡಕ್ಕೆ ಹೇಗಿತ್ತು ಇಂದು ಸಹ ಹಾಗೇ ಇದೆ. ನಾನು ಹೋದ ಕಡೆ ಜನರು ನನ್ನ ಬಳಿ ಬಂದು ನಿಮ್ಮನ್ನೇ ಗೆಲ್ಲಿಸುತ್ತೇವೆ ಎಂದು ಹೇಳ್ತಾಯಿದ್ದಾರೆ. ನಾನು ಆ ಜನರ ಆಸೆಗಳನ್ನು ಸಂಪೂರ್ಣವಾಗಿ ಪೂರೈಸುತ್ತೇನೆ ಎಂದರು.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷವೂ ಯಾರ ಜೊತೆಗೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ. ನನ್ನ ಪರವಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮುಂದೆ ಪ್ರಚಾರ ಮಾಡ್ತಾರೆ ಅನ್ನೋದು ಸಂಪೂರ್ಣ ಸುಳ್ಳು. ಬಿಜೆಪಿ ಸೇರಿದಂತೆ ಯಾವ ಪಕ್ಷದ ನಾಯಕರು ನನ್ನ ಸಂಪರ್ಕ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ತಾವು ಫುಟ್‌ಬಾಲ್‌ ಚಿಹ್ನೆ ಆಯ್ಕೆ ಮಾಡಿಕೊಂಡದ್ದರ ಕುರಿತು ರೆಡ್ಡಿ ಮಾತನಾಡಿದರು. ಎಲ್ಲ ಪಕ್ಷದವರೂ, ನಾಯಕರು ನನ್ನನ್ನು ಪುಟ್ಬಾಲ್ ರೀತಿಯಲ್ಲಿ ಆಡಿದರು. ಅದೇ ಕಾರಣಕ್ಕೆ ನಾನು ಪುಟ್ಬಾಲ್ ಚಿಹ್ನೆ ಆಯ್ಕೆ ಮಾಡಿಕೊಂಡೆ. ಪುಟ್ಬಾಲ್ ಆಟದಲ್ಲಿ ಯಾರು ಎಷ್ಟು ಗೋಲ್ ಹೊಡೆದ್ರೂ, ಯಾರಿಗೆ ಗೋಲ್ಡನ್ ಬೂಟ್ ಸಿಕ್ತು ಅಂತ ನೀವೇ ಬರೆದುಕೊಳ್ಳಿ. ನಾನಂತೂ ಪುಟ್ಬಾಲ್ ಆದೆ ಎಂದರು.

ಇದನ್ನೂ ಓದಿ: Janardhana Reddy : ಸ್ಪರ್ಧೆಯಿಂದ ಹಿಂದೆ ಸರಿಯಲ್ಲ; ಜನಾರ್ದನ ರೆಡ್ಡಿ, ಪತ್ನಿಗೆ ಸೆಡ್ಡು ಹೊಡೆದ ಸೋಮಶೇಖರ ರೆಡ್ಡಿ

Exit mobile version