Site icon Vistara News

ತೆಲಂಗಾಣದಲ್ಲಿ ಕರ್ನಾಟಕ ಸರ್ಕಾರ ಸಾಧನೆಯ ಜಾಹೀರಾತಿಗೆ ಚುನಾವಣಾ ಆಯೋಗ ಬ್ರೇಕ್!

Election Commission bans Karnataka government ads in Telangana

ಹೈದ್ರಾಬಾದ್: ಚುನಾವಣಾ ನಿರತ ನೆರೆಯ ತೆಲಂಗಾಣದಲ್ಲಿ (Telangana Assembly election) ಕರ್ನಾಟಕ ಸರ್ಕಾರದ (Karnataka Government) ಸಾಧನೆಗಳನ್ನು ಬಿಂಬಿಸುವ ಜಾಹೀರಾತುಗಳ (Advertisement) ಪ್ರದರ್ಶನಕ್ಕೆ ಚುನಾವಣಾ ಆಯೋಗವು (Election Commission) ಬ್ರೇಕ್ ಹಾಕಿದ್ದು, ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ. ನವೆಂಬರ್ 30ರಂದು ತೆಲಂಗಾಣ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಕರ್ನಾಟಕ ಸರ್ಕಾರ ಸಾಧನೆಗಳ ಕುರಿತು ಕಾಂಗ್ರೆಸ್ ಪಕ್ಷವು, ತೆಲಂಗಾಣ ರಾಜ್ಯದ ಪತ್ರಿಕೆಗಳಲ್ಲಿ ಕಾಂಗ್ರೆಸ್ ಜಾಹೀರಾತು ನೀಡುತ್ತಿತ್ತು. ಆದರೆ, ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಭಾರತೀಯ ಜನತಾ ಪಾರ್ಟಿಯು (BJP Party) ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ದೂರು ಪರಿಶೀಲಿಸಿದ ಆಯೋಗವು, ಅಂತಿಮವಾಗಿ ಜಾಹೀರಾತು ನೀಡಲು ಬ್ರೇಕ್ ಹಾಕಿದೆ.

ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ಅವರ ಜನಸೇನಾದೊಂದಿಗೆ ತೆಲಂಗಾಣದಲ್ಲಿ ಚನಾವಣಾ ಕಣದಲ್ಲಿರುವ ಭಾರತೀಯ ಜನತಾ ಪಾರ್ಟಿಯು, ತೆಲಂಗಾಣದ ಮತದಾರರ ಮೇಲೆ ಪ್ರಭಾವ ಬೀರಲು ಕಾಂಗ್ರೆಸ್ ಪಕ್ಷವು ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ದೂರಿತ್ತು.

ಈ ವರ್ಷದ ಆರಂಭದಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಜಯಭೇರಿ ಬಾರಿಸಿತ್ತು. ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ ಸೋಲು ಕಂಡಿತ್ತು. ಈಗ ಅದೇ ರೀತಿಯ ಜಯವನ್ನು ತೆಲಂಗಾಣದಲ್ಲೂ ಕಾಂಗ್ರೆಸ್ ಪಕ್ಷವು ನಿರೀಕ್ಷೆ ಮಾಡುತ್ತಿದೆ. ಅದಕ್ಕಾಗಿ ಕರ್ನಾಟಕದಲ್ಲಿ ಸರ್ಕಾರ ಅನುಷ್ಠಾನಗೊಳಿಸಲಾಗಿರುವ ಗ್ಯಾರಂಟಿ ಕಾರ್ಯಕ್ರಮಗಳು ಸೇರಿದಂತೆ ಇತರ ಸಾಧನೆಗಳ ಕುರಿತು ತೆಲಂಗಾಣ ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗುತ್ತಿತ್ತು. ಆದರೆ, ಅಂತಿಮವಾಗಿ ಕಾಂಗ್ರೆಸ್‌ನ ಈ ಪ್ರಯತ್ನಕ್ಕೆ ಚುನಾವಣಾ ಆಯೋಗವು ಬ್ರೇಕ್ ಹಾಕಿದೆ.

ಮಧ್ಯ ಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ, ಮಿಜೋರಾಮ್ ವಿಧಾನಸಭೆ ಚುನಾವಣೆಯ ಮತದಾನ ಮುಗಿದಿದ್ದು, ತೆಲಂಗಾಣ ವಿಧಾನಸಭೆ ಚುನಾವಣೆ ಮಾತ್ರವೇ ಬಾಕಿ ಉಳಿದಿದೆ. ನವೆಂಬರ್ 30ರಂದು ತೆಲಂಗಾಣದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 3ರಂದು ಐದು ರಾಜ್ಯಗಳ ಫಲಿತಾಂಶವು ಪ್ರಕಟವಾಗಲಿದೆ. 2024ರ ಲೋಕಸಭೆ ಚುನಾವಣೆಗೆ ಸೆಮಿ ಫೈನಲ್ ಎಂದೇ ಪರಿಗಣಿಸಲಾಗಿರುವ ಈ ಐದು ರಾಜ್ಯಗಳ ಚುನಾವಣೆ ಭಾರೀ ಮಹತ್ವವನ್ನು ಪಡೆದುಕೊಂಡಿವೆ.

ತೆಲಂಗಾಣದಲ್ಲಿ ಬಿಆರ್‌ಎಸ್ (ಈ ಮೊದಲು ಟಿಆರ್‌ಎಸ್) ಸತತ ಎರಡು ಅವಧಿಗೆ ಅಧಿಕಾರದಲ್ಲಿದೆ. ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಭಾರೀ ಸ್ಪರ್ಧೆಯನ್ನು ಬಿಆರ್‌ಎಸ್ ಎದುರಿಸುತ್ತಿದೆ. ಜತೆಗೆ, ಪವನ್ ಕಲ್ಯಾಣ್ ಅವರು ಜನಸೇನಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಭಾರತೀಯ ಜನತಾ ಪಾರ್ಟಿಯೂ ಗೆಲ್ಲುವ ಹುಮ್ಮಸ್ಸು ತೋರುತ್ತಿದೆ. ಅಂತಿಮವಾಗಿ ಮತದಾರರು ಯಾರ ಕಡೆ ವಾಲಿದ್ದಾರೆಂಬುದು ಡಿಸೆಂಬರ್ 3ರಂದು ಗೊತ್ತಾಗಲಿದೆ.

ಈ ಸುದ್ದಿಯನ್ನೂ ಓದಿ: Telangana polls: ಚುನಾವಣೆ ಪ್ರಚಾರದ ವೇಳೆ ತೆಲಂಗಾಣದಲ್ಲಿ ಕೆಸಿಆರ್ ಪಕ್ಷದ ಸಂಸದನಿಗೆ ಚಾಕು ಇರಿತ

Exit mobile version