Site icon Vistara News

Karnataka Election: ದಕ್ಷಿಣ ಆಫ್ರಿಕಾದಲ್ಲಿ ಬಳಕೆಯಾದ ಇವಿಎಂ ಉಪಯೋಗಿಸಿಲ್ಲ: ಚುನಾವಣಾ ಆಯೋಗ

voting machine

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಬಳಸಿರುವ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಈ ಹಿಂದೆ ದಕ್ಷಿಣ ಆಫ್ರಿಕಾ ಚುನಾವಣೆಯಲ್ಲಿ ಬಳಸಲಾಗಿತ್ತು ಎಂಬ ಕಾಂಗ್ರೆಸ್‌ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ ತಳ್ಳಿಹಾಕಿದ್ದು, ಈ ಬಾರಿ ಚುನಾವಣೆಗೆ ಹೊಸ ಇವಿಎಂಗಳನ್ನೇ ಬಳಸಲಾಗಿದೆ ಎಂದು ತಿಳಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಬಳಸಿದ್ದ ಇವಿಎಂಗಳನ್ನು ಕರ್ನಾಟಕ ಚುನಾವಣೆಯಲ್ಲಿ ಮರು ಬಳಕೆ ಮಾಡಲಾಗಿದೆ ಎಂದು ಕಾಂಗ್ರೆಸ್‌ ಕಳವಳ ವ್ಯಕ್ತಪಡಿಸಿ ಮೇ 8ರಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಹೀಗಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಅವರಿಗೆ ಚುನಾವಣಾ ಆಯೋಗ ಪತ್ರ ಬರೆದು ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ | Karnataka Election 2023 : ಫಲಿತಾಂಶದ ನಂತರ ಮುಂದೇನು?; ಪಕ್ಷದ ಅಭ್ಯರ್ಥಿಗಳೊಂದಿಗೆ ಕಾಂಗ್ರೆಸ್‌ ನಾಯಕರ ಮೀಟಿಂಗ್‌

ಎಲೆಕ್ಟ್ರಾನಿಕ್ಸ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (ಇಸಿಐಎಲ್)‌ ತಯಾರಿಸಿದ ಹೊಸ ಇವಿಎಂಗಳನ್ನು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿದೆ. ಇವಿಎಂ ಯಂತ್ರಗಳ ಸಾಗಣೆ ಹಾಗೂ ಪರಿಶೀಲನೆಯ ಪ್ರತಿ ಹಂತದಲ್ಲೂ ಕಾಂಗ್ರೆಸ್‌ ಪ್ರತಿನಿಧಿಗಳು ಭಾಗವಹಿಸಿದ್ದರು. ಆದರೆ, ಇವಿಎಂಗಳ ಮರುಬಳಕೆ ಬಗ್ಗೆ ತಪ್ಪು ಮಾಹಿತಿ ಹರಡಿದ ಮೂಲಗಳ ಬಗ್ಗೆ ಮೇ 15ರಂದು ಸಂಜೆ 5 ಗಂಟೆಯೊಳಗೆ ಕಾಂಗ್ರೆಸ್‌ ಮಾಹಿತಿ ನೀಡಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.

ಈ ಹಿಂದೆ ಕಾಂಗ್ರೆಸ್‌ ಸೇರಿ ವಿವಿಧ ಪಕ್ಷಗಳು ಚುನಾವಣೆಯಲ್ಲಿ ಇವಿಎಂ ಟ್ಯಾಂಪರಿಂಗ್‌ ನಡೆಯುತ್ತಿದೆ ಎಂದು ಆರೋಪಿಸಿದ್ದವು. ಆದರೆ, ಇವಿಎಂಗಳನ್ನು ಹ್ಯಾಕ್‌ ಮಾಡಲು ಸಾಧ್ಯವಿಲ್ಲ, ಸಾಕಷ್ಟು ಭದ್ರತಾ ಮಾನದಂಡಗಳೊಂದಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ತಯಾರಿಸಲಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿತ್ತು. ನಂತರ ಮತದಾರರಿಗೆ ಯಾವ ಅಭ್ಯರ್ಥಿಗೆ ಮತ ಹಾಕುತ್ತೇವೆ ಎಂಬುವುದನ್ನು ಖಚಿತಪಡಿಸಿಕೊಳ್ಳಲು 2019ರಿಂದ ಮತಗಟ್ಟೆಗಳಲ್ಲಿ ವಿವಿ ಪ್ಯಾಟ್‌ಗಳನ್ನು ಚುನಾವಣಾ ಆಯೋಗ ಬಳಸುತ್ತಿದೆ.

Exit mobile version