ಬೆಂಗಳೂರು: ಚುನಾವಣೆಯಲ್ಲಿ ಜನರ ಭಾಗವಹಿಸುವಿಕೆಯನ್ನು ಹೆಚ್ಚಳ ಮಾಡಲು ಅನೇಕ ಪ್ರಯೋಗಗಳು, ಸುಧಾರಣೆಗಳನ್ನು ಮಾಡುತ್ತಿರುವ ಕೇಂದ್ರ ಚುನಾವಣಾ ಆಯೋಗ ಇದೀಗ ಐತಿಹಾಸಿಕ ನಿರ್ಧಾರವೊಂದಕ್ಕೆ ಮುಂದಾಗಿದೆ.
ತಮ್ಮ ಮತ ಕ್ಷೇತ್ರದಿಂದ ವಿವಿಧ ಕಾರಣಕ್ಕೆ ದೂರ ಇರುವ ಮತದಾರರು, ತಮ್ಮದೇ ಮತಗಟ್ಟೆಗೆ ಆಗಮಿಸುವ ಅನಿವಾರ್ಯತೆ ಇಲ್ಲದೆಯೇ ಮತದಾನದ ಹಕ್ಕನ್ನು ಚಲಾಯಿಸಲು ದೂರ ಮತದಾನ ಯಂತ್ರ (Remote Voting Machine-RVM) ಅನ್ನು ರೂಪಿಸಿದೆ.
ವಿವಿಧ ಕಾರಣಗಳಿಗೆ ಜನರು ವಲಸೆ ಹೋಗುತ್ತಾರೆ. ಕೆಲಸ, ಮದುವೆ, ಶಿಕ್ಷಣ ಸೇರಿ ಅನೇಕ ಕಾರಣಕ್ಕೆ ತಮ್ಮ ಊರುಗಳಿಂದ ದೂರ ಇರುತ್ತಾರೆ. ತಾವು ಕೆಲಸ ಮಾಡುವ, ಮದುವೆಯಾದ ಅಥವಾ ಶಿಕ್ಷಣ ಪಡೆಯುತ್ತಿರುವ ಕ್ಷೇತ್ರಕ್ಕೇ ಮತದಾನದ ಹಕ್ಕನ್ನು ವರ್ಗಾವಣೆ ಮಾಡಿಕೊಳ್ಳಲು ಅನೇಕರಿಗೆ ಇಷ್ಟ ಇರುವುದಿಲ್ಲ. ಆಗಾಗ್ಗೆ ಮನೆಗಳನ್ನು ಬದಲಾಯಿಸುವುದು, ಸಾಮಾಜಿಕ ಕಾರಣಗಳು ಹಾಗೂ ಗ್ರಾಮದಲ್ಲಿ ಮತದಾನದ ಹಕ್ಕು ಇರಬೇಕು ಎಂಬ ಭಾವನಾತ್ಮಕ ಕಾರಣಕ್ಕೂ ಮತದಾನದ ಹಕ್ಕನ್ನು ವರ್ಗಾವಣೆ ಮಾಡಿಕೊಳ್ಳುವುದಿಲ್ಲ.
ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುವವರು ಕುರಿತು ಕೇಂದ್ರದಲ್ಲಿ ಯಾವುದೇ ಅಂಕಿ ಅಂಶ ಇಲ್ಲ. ಆದರೆ ಈ ರೀತಿ ವಲಸೆ ಹೋಗುವವರಲ್ಲಿ ಶೇ.85 ಜನರು ತಮ್ಮದೇ ರಾಜ್ಯದಲ್ಲಿ ಬೇರೆ ಕಡೆಯಲ್ಲಿ ವಾಸಿಸುತ್ತಿರುತ್ತಾರೆ. ಇಂತಹವರು ಮತದಾನದ ದಿನ ಗ್ರಾಮಕ್ಕೆ ಅಥವಾ ತಮ್ಮ ಮತಗಟ್ಟೆಗೆ ಆಗಮಿಸಿ ಮತ ಚಲಾವಣೆ ಮಾಡುವುದಿಲ್ಲ. ಇದರಿಂದಾಗಿ ಮತದಾನದ ಪ್ರಮಾಣ ಕಡಿಮೆಯಾಗುತ್ತಿದೆ. ಈ ಸಮಸ್ಯೆ ಸರಿಪಡಿಸಲು ಚುನಾವಣಾ ಆಯೋಗ ಮುಂದಾಗಿದೆ.
ಆರ್‌ವಿಎಂ ಮೂಲಕ ಮತ
ವಲಸೆ ಮತದಾರರ ಪ್ರಮಾಣವನ್ನು ಹೆಚ್ಚಳ ಮಾಡಲು ಈಗಿನ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅನೇಕ ಮಾರ್ಗಗಳನ್ನು ಅನ್ವೇಷಣೆ ಮಾಡುತ್ತಿದ್ದಾರೆ. ಅದರಲ್ಲಿ ಆರ್‌ವಿಎಂ ಕೂಡ ಒಂದು. ಒಂದು ಪ್ರದೇಶದಲ್ಲಿ ಆರ್‌ವಿಎಂ ಮತಕೇಂದ್ರವನ್ನು ಸ್ಥಾಪಿಸಿ, ಅಲ್ಲಿಂದಲೇ ತಂತಮ್ಮ ಕ್ಷೇತ್ರಕ್ಕೆ ಮತ ಚಲಾಯಿಸಲು ಅನುಕೂಲ ಮಾಡಿಕೊಡುತ್ತದೆ. ಈಗ ಸಿದ್ಧಪಡಿಸಿರುವ ಒಂದು ಆರ್‌ವಿಎಂ ಯಂತ್ರದ ಮೂಲಕ 72 ಮತಕ್ಷೇತ್ರಗಳನ್ನು ಸಂಪರ್ಕಿಸಬಹುದು. ಅಂದರೆ, 72 ಕ್ಷೇತ್ರಗಳ ವಲಸಿಗ ಮತದಾರರು ಇಲ್ಲಿಂದಲೇ ಮತದಾನ ಮಾಡಬಹುದು.
ಆದರೆ ಇದಕ್ಕೆ ಅನೇಕ ಕಾನೂನು, ತಾಂತ್ರಿಕ ಹಾಗೂ ಆಡಳಿತಾತ್ಮಕ ಸವಾಲುಗಳಿವೆ. ಈ ರೀತಿ ಆರ್‌ವಿಎಂ ಸ್ಥಾಪನೆ ಮಾಡಲು ಜನಪ್ರತಿನಿಧಿ ಕಾಯ್ದೆ ಸೇರಿ ಒಟ್ಟು ಮೂರು ಕಾಯ್ದೆಗಳಲ್ಲಿ ತಿದ್ದುಪಡಿ ತರಬೇಕಾಗುತ್ತದೆ. ಆಡಳಿತಾತ್ಮಕವಾಗಿ ಆ ಯಂತ್ರಗಳ ನಿರ್ವಹಣೆ, ಪಾರದರ್ಶಕ ವಾತಾವರಣ ನಿರ್ಮಾಣ ಸೇರಿ ಅನೇಕ ನಿರ್ಧಾರ ಮಾಡಬೇಕಿದೆ. ತಾಂತ್ರಿಕವಾಗಿಯೂ, ಆ ಮತಗಳನ್ನು ಎಣಿಕೆ ಮಾಡುವುದು ಸೇರಿ ಅನೇಕ ಸವಾಲುಗಳಿವೆ.
ಇದೆಲ್ಲವನ್ನೂ ಚರ್ಚೆ ನಡೆಸಲು ಕೇಂದ್ರ ಚುನಾವಣಾ ಆಯೋಗವು ದೇಶದ ಎಲ್ಲ 8 ರಾಷ್ಟ್ರೀಯ ಪಕ್ಷಗಳು ಹಾಗೂ 57 ರಾಜ್ಯ ಪಕ್ಷಗಳಿಗೆ ಪರಿಕಲ್ಪನೆಯ ಟಿಪ್ಪಣಿಯನ್ನು ರವಾನೆ ಮಾಡಿದೆ. ಹೊಸ ಪ್ರಯೋಗದ ಕುರಿತು ರಾಜಕೀಯ ಪಕ್ಷಗಳಲ್ಲಿರುವ ಅನುಮಾನ ಬಗೆಹರಿಸುವುದು ಹಾಗೂ ಸಲಹೆಗಳನ್ನು ಸ್ವೀಕರಿಸಲು ಮುಂದಾಗಿದೆ. ಡಿಸೆಂಬರ್ 31ರೊಳಗೆ ರಾಜಕೀಯ ಪಕ್ಷಗಳು ಲಿಖಿತ ಅಭಿಪ್ರಾಯಗಳನ್ನು ನೀಡಲಿದ್ದು, ಜನವರಿ 16ರಂದು ಸಭೆ ಆಯೋಜಿಸಿದೆ. ಚುನಾವಣಾ ಅಧಿಕಾರಿಗಳ ಜತೆಗೆ ತಾಂತ್ರಿಕ ಸಮಿತಿ ಸದಸ್ಯರೂ ಉಪಸ್ಥಿತರಿದ್ದು, ಮಾಹಿತಿ ನೀಡಲಿದ್ದಾರೆ.
ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳ ಆಧಾರದಲ್ಲಿ ಆರ್‌ವಿಎಂ ಅಳವಡಿಕೆ ಕುರಿತು ಆಯೋಗ ನಿರ್ಧಾರ ಮಾಡಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಜಂಟಿ ಕಾರ್ಯದರ್ಶಿ ಅನುಜ್ ಚಂದಕ್ ತಿಳಿಸಿದ್ದಾರೆ. ಈ ಪ್ರಯೋಗ ಯಶಸ್ವಿಯಾದರೆ, ತಮ್ಮ ಮತ ಕ್ಷೇತ್ರದಿಂದ ದೂರವಿರುವ ಅನೇಕರಿಗೆ ಮತದಾನದ ಹಕ್ಕು ದೊರಕುತ್ತದೆ.
ಇದನ್ನೂ ಓದಿ | Voter Data | ಮತದಾರರ ಪಟ್ಟಿ ಅಕ್ರಮ; ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯ ಕಾಂಗ್ರೆಸ್ ನಾಯಕರಿಂದ ದೂರು