ಮೌನೇಶ್ ಬಡಿಗೇರ್, ಕೊಪ್ಪಳ
ಜೈನಕಾಶಿ ಎಂದು ಇತಿಹಾಸದಲ್ಲಿ ಕರೆಸಿಕೊಂಡಿರುವ ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕೊಪ್ಪಳ ವಿಧಾನಸಭಾ ಕ್ಷೇತ್ರವೂ ಒಂದು. ಜಾತ್ರೆಯ ಮೂಲಕ ದಕ್ಷಿಣ ಭಾರತದ ಮಹಾಕುಂಭಮೇಳ ಎಂದು ಪ್ರಸಿದ್ದಿ ಪಡೆದಿರುವ ಗವಿಸಿದ್ದೇಶ್ವರ ಮಠ, ಶಕ್ತಿ ದೇವತೆ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನವನ್ನು ಈ ಕ್ಷೇತ್ರ ಹೊಂದಿದೆ. ಕೊಪ್ಪಳ ತಾಲೂಕಿನ ಕಿನ್ನಾಳ ಭಾಗದ ಗ್ರಾಮಗಳು ಈ ಕ್ಷೇತ್ರ ವ್ಯಾಪ್ತಿಯಲ್ಲಿ ಇಲ್ಲ. ಇಂತಹ ಕೊಪ್ಪಳ ವಿಧಾನಸಭಾ ಕ್ಷೇತ್ರ ರಚನೆಯಾಗಿದ್ದು 1952 ರಲ್ಲಿ. ಆರಂಭದಲ್ಲಿಯೇ ಈ ಕ್ಷೇತ್ರದಲ್ಲಿ ಮೊದಲ ಮಹಿಳೆಯೊಬ್ಬರು ಶಾಸಕಿಯಾಗಿ ಆಯ್ಕೆಯಾಗಿದ್ದ ಕ್ಷೇತ್ರ. 1952 ರಲ್ಲಿ ಲೋಕಸೇವಕ ಸಂಘದ ಮಹಾದೇವಮ್ಮ ಎಂಬುವವರು ಈ ಕ್ಷೇತ್ರದ ಮೊದಲ ಶಾಸಕಿ. ಇವರಾದ ಬಳಿಕ ಮತ್ಯಾವ ಮಹಿಳೆಗೂ ಈ ಕ್ಷೇತ್ರದಲ್ಲಿ ಅವಕಾಶವೇ ದೊರಕಿಲ್ಲ. ಇಂತಹ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 1994 ರಿಂದಲೂ ಸಂಗಣ್ಣ ಕರಡಿ ಹಾಗೂ ಕೆ. ಬಸವರಾಜ ಹಿಟ್ನಾಳ್ ಕುಟುಂಬದ ನಡುವೆ ನಡೆಯುವ ಚುನಾವಣೆ ಎಂದೇ ಹೇಳಬಹುದು. ಈ ಎರಡೂ ಕುಟುಂಬಗಳಿಗೂ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗುತ್ತಾರೆ. ಪರ್ಯಾಯ ನಾಯಕರನ್ನು ಬೆಳೆಸುವ ಪ್ರಯತ್ನವೇ ಆಗಿಲ್ಲ.
ತಂದೆಯನ್ನು ಸೋಲಿಸಿದ್ದರು, ಮಗನಿಂದ ಸೋಲುಂಡರು
ಕೊಪ್ಪಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಹಿಟ್ನಾಳ್ ಕುಟುಂಬ ಹಾಗೂ ಕರಡಿ ಕುಟುಂಬಗಳು ಸಾಂಪ್ರದಾಯಿಕ ರಾಜಕೀಯ ಎದುರಾಳಿಗಳು. 1994 ರಿಂದಲೇ ಸಂಗಣ್ಣ ಕರಡಿ ಹಾಗೂ ಕೆ. ಬಸವರಾಜ ಹಿಟ್ನಾಳ್ ಅವರು ವಿಧಾನಸಭಾ ಚುನಾವಣೆಯಲ್ಲಿ ಮುಖಾಮುಖಿಯಾಗುತ್ತಾ ಬಂದಿದ್ದಾರೆ. 1994 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸ್ಪರ್ಧಿಸಿ ಕರಡಿ ವಿಧಾನಸಭೆ ಹೊಕ್ಕಿದ್ದರು. ಅಲ್ಲಿಂದ ಬಳಿಕ 1999 ರಲ್ಲಿ ಜೆಡಿಯುನಿಂದ ಸ್ವರ್ಧಿಸಿದ್ದ ಸಂಗಣ್ಣ ಕರಡಿ ಗೆಲುವಿನ ನಗೆ ಬೀರಿದ್ದರು. ಆಗಲೂ ಸಹ ಕೆ. ಬಸವರಾಜ ಹಿಟ್ನಾಳ್ ಸೋಲುಂಡಿದ್ದರು. ಬಳಿಕ 2004 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಕೆ. ಬಸವರಾಜ ಹಿಟ್ನಾಳ್ ಕರಡಿ ಸಂಗಣ್ಣಗೆ ಸೋಲಿನ ರುಚಿ ತೋರಿಸಿದ್ದರು. ಮತ್ತೆ 2008 ರಲ್ಲಿ ಜೆಡಿಎಸ್‌ನಿಂದ ಕರಡಿ ಸಂಗಣ್ಣ ಗೆಲ್ಲುವ ಮೂಲಕ ಕಾಂಗ್ರೆಸ್‍ನ ಕೆ. ಬಸವರಾಜ ಹಿಟ್ನಾಳ್ ಗೆ ಮತ್ತೆ ಸೋಲಿನ ರುಚಿ ತೋರಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಿಂದಾಗಿ 2011 ರಲ್ಲಿ ಸಂಗಣ್ಣ ಕರಡಿ ಜೆಡಿಎಸ್‍ಗೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆಗೊಂಡರು.
2011 ರಲ್ಲಿ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಕರಡಿ ಸಂಗಣ್ಣ ಸ್ಪರ್ಧಿಸಿ ಗೆಲುವು ದಾಖಲಿಸಿದರು. ಆದರೆ ಕೊಪ್ಪಳ ಕ್ಷೇತ್ರದ ಮತದಾರ ಬದಲಾವಣೆ ಬಯಸಿದ್ದರಿಂದ 2013 ರಲ್ಲಿ ನಡೆದ ಕಾಂಗ್ರೆಸ್ ಕೆ ರಾಘವೇಂದ್ರ ಹಿಟ್ನಾಳ ಆಯ್ಕೆಯಾಗಿದ್ದರಿಂದ ಮತ್ತದೆ ಹಿಟ್ನಾಳ್ ಕುಟುಂಬದಿಂದ ಸಂಗಣ್ಣ ಕರಡಿ ಸೋಲಿನ ರುಚಿ ಉಣಬೇಕಾಯಿತು. ಅಲ್ಲದೆ ಜತೆಗೆ 2018 ರಲ್ಲಿ ಕೆ. ರಾಘವೇಂದ್ರ ಹಿಟ್ನಾಳ್ ಅವರೇ ಮರು ಆಯ್ಕೆಯಾಗುವ ಮೂಲಕ ತಮ್ಮ ತಂದೆ ಕೆ.ಬಸವರಾಜ ಹಿಟ್ನಾಳ ಅವರಿಗೆ ಸೋಲಿನ ರುಚಿ ಉಣಿಸಿದ್ದ ಸಂಗಣ್ಣ ಕರಡಿ ಕುಟುಂಬಕ್ಕೆ ಸೋಲಿಸುವ ಮೂಲಕ ಸೇಡು ತೀರಿಸಿಕೊಂಡರು. ಪ್ರಸ್ತುತ ಕೊಪ್ಪಳ ಕ್ಷೇತ್ರದ ಶಾಸಕರಾಗಿರುವ ಕೆ. ರಾಘವೇಂದ್ರ ಹಿಟ್ನಾಳ, ಸಂಗಣ್ಣ ಕರಡಿಯಿಂದ ಅನೇಕ ಬಾರಿ ಸೋಲುಂಡಿರುವ ಕೆ. ಬಸವರಾಜ ಹಿಟ್ನಾಳ್ ಅವರ ಮಗನಾಗಿದ್ದಾರೆ.
ಪುತ್ರ ವ್ಯಾಮೋಹ
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಸಾಂಪ್ರದಾಯಿಕ ರಾಜಕೀಯ ಎದುರಾಳಿಗಳಾಗಿರುವ ಹಿಟ್ನಾಳ್ ಹಾಗೂ ಕರಡಿ ಕುಟುಂಬಗಳಲ್ಲಿ ಪುತ್ರ ವ್ಯಾಮೋಹ ಇದ್ದೇ ಇದೆ. ಕಾಂಗ್ರೆಸ್‍ನ ಕೆ. ಬಸವರಾಜ ಹಿಟ್ನಾಳ್ ಅವರು ತಮ್ಮಿಬ್ಬರ ಮಕ್ಕಳ ರಾಜಕೀಯ ಭವಿಷ್ಯ ಕಟ್ಟುವ ಮತ್ತು ಭದ್ರಗೊಳಿಸುವ ನಿಟ್ಟಿನಲ್ಲಿ ಸಕ್ಸಸ್ ಆಗಿದ್ದಾರೆ ಎಂದೇ ಹೇಳಬಹುದು. 2011 ರ ಉಪಚುನಾವಣೆಯಲ್ಲಿ ಸೋತ ಬಳಿಕ ಕೆ. ಬಸವರಾಜ ಹಿಟ್ನಾಳ್ ಅವರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ತಮ್ಮ ಮಗ ಕೆ. ರಾಘವೇಂದ್ರ ಹಿಟ್ನಾಳ್ ಅವರನ್ನು 2013 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ರಾಜಕೀಯ ಹಾದಿ ಸುಗಮಗೊಳಿಸಿದರು.ಇನ್ನೊಬ್ಬ ಮಗ ಕೆ. ರಾಜಶೇಖರ್ ಹಿಟ್ನಾಳ್ ಅವರನ್ನು ರಾಜಕೀಯ ಮುನ್ನೆಲೆಗೆ ತಂದು ವಿಜಯನಗರ ಕ್ಷೇತ್ರದಲ್ಲಿ ಸ್ಪರ್ಧಿಗಿಳಿಯುವ ಸಿದ್ದತೆಯನ್ನು ಒಳಗೊಳಗೆ ಮಾಡಿದ್ದಾರೆ.
ಸಂಗಣ್ಣ ಕರಡಿ ಅವರೂ ಸಹ ತಮ್ಮ ಇಬ್ಬರು ಮಕ್ಕಳನ್ನು ರಾಜಕೀಯಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಒಬ್ಬ ಮಗ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರೆ ಇನ್ನೊಬ್ಬ ಹಿರಿಯ ಮಗ ಅಮರೇಶ ಕರಡಿ ಕಳೆದ 2018 ರಲ್ಲಿ ನಡೆದ ಚುನಾವಣೆಯಲ್ಲಿ ಸೋಲನ್ನುಂಡರು. 2018 ರಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಸಂಗಣ್ಣ ಕರಡಿ ಅವರ ಪುತ್ರ ವ್ಯಾಮೋಹವೇ ಕಾರಣ ಎಂಬುದು ಎಲ್ಲೆಡೆ ಚರ್ಚೆಯಾಗುತ್ತಿರುವ ವಿಚಾರ. ಏಕೆಂದರೆ 2018 ರ ಚುನಾವಣೆಯಲ್ಲಿ ಬಿಜೆಪಿ ಸಿ.ವಿ. ಚಂದ್ರಶೇಖರ್ ಅವರಿಗೆ ಟಿಕೆಟ್ ಘೋಷಣೆ ಮಾಡಿತ್ತು. ಆದರೆ ಮಗ ಅಮರೇಶ ಕರಡಿ ಅವರ ಒತ್ತಡಕ್ಕೆ ಮಣಿದು ಬಿಜೆಪಿಯ ಬಿ ಫಾರಂ ತಂದು ಅಮರೇಶ ಕರಡಿಯನ್ನು ಸ್ಪರ್ಧೆಗಿಳಿಸಿದರು. ಈ ಬೆಳವಣಿಗೆಯಿಂದ ಕಾರ್ಯಕರ್ತರದಲ್ಲಿ ಸ್ಥಳೀಯ ಬಿಜೆಪಿಯಲ್ಲಿ ಅಸಮಧಾನ ಹೊಗೆಯಾಡುವಂತೆ ಮಾಡಿತು. ಜೊತೆಗೆ ಬಿಜೆಪಿ ಸೋಲಿಗೆ ಕಾರಣವಾಯಿತು.
2023 ರ ಮುಖಾಮುಖಿ
2023 ರ ಚುನಾವಣೆಯಲ್ಲಿ ಮತ್ತದೆ ಕರಡಿ ಹಾಗೂ ಹಿಟ್ನಾಳ್ ಕುಟುಂಬಗಳು ಮುಖಾಮುಖಿಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಪ್ರಸ್ತುತ ಕೊಪ್ಪಳ ಲೋಕಸಭಾ ಸದಸ್ಯರಾಗಿರುವ ಸಂಗಣ್ಣ ಕರಡಿ ಅವರು ಬರುವ ವಿಧಾನಸಭಾ ಚುನಾವಣೆಯಲ್ಲಿ ತಾವೂ ಸಹ ಪ್ರಭಲ ಸ್ಪರ್ಧಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿ ಪಕ್ಷದ ನಿಯಮದ ಪ್ರಕಾರ ವಯಸ್ಸಿನ ಕಾರಣ ನೀಡಿ ಸಂಗಣ್ಣ ಕರಡಿಗೆ ಟಿಕೆಟ್ ನೀಡದಿದ್ದರೂ ಪಕ್ಷಾಂತರ ಮಾಡಿಯಾದರೂ ಸ್ಪರ್ಧಿಸುವ ಸಾಧ್ಯತೆ ಇದೆ. ಏಕೆಂದರೆ ಒಮ್ಮೆಯಾದರೂ ಸಚಿವನಾಗಬೇಕು ಎಂಬುದು ಸಂಗಣ್ಣ ಕರಡಿ ಅವರ ಜೀವಮಾನದ ಆಸೆಯಾಗಿದೆ. ಇತ್ತ ಸಿದ್ದರಾಮಯ್ಯ ಅವರು ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಕ್ಷೇತ್ರ ಬಿಟ್ಟುಕೊಡುವುದಾಗಿ ಪ್ರಸ್ತುತ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಹ ಹೇಳಿದ್ದಾರೆ.
ಒಂದು ವೇಳೆ ಸಿದ್ದರಾಮಯ್ಯ ಅವರು 2023 ರ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ ಆದರೆ ಬಿಜೆಪಿ ಸಹ ಸಂಗಣ್ಣ ಕರಡಿ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಪ್ರಸ್ತುತ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಕಣಕ್ಕಿಳಿಯಲಿದ್ದಾರೆ. ಬಹದ್ದೂರಬಂಡಿ ಏತ ನೀರಾವರಿ ಯೋಜನೆ, ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡಿಸುವ ಮೂಲಕ ಪ್ರಸ್ತುತ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಹ ತಮ್ಮ ಗೆಲುವಿಗೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ. ಆದರೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಕೆ. ರಾಘವೇಂದ್ರ ಹಿಟ್ನಾಳ್ ಅವರೊಂದಿಗೆ ಒಳಗೊಳಗೆ ಮುನಿಸಿಕೊಂಡಿದ್ದು ಈ ಬಾರಿ ಹಿಟ್ನಾಳ್ ಗೆ ಕೈಕೊಡುವ ಸಾಧ್ಯತೆ ಇದೆ.
ಚಂದ್ರಶೇಖರ್‌ಗೆ ಅದೃಷ್ಟ?
ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಕಳೆದ ಬಾರಿಯೇ ಅಭ್ಯರ್ಥಿಯಾಗಿ ಘೋಷಣೆಯಾಗಿ ಕೊನೆ ಕ್ಷಣದಲ್ಲಿ ಬಿ ಫಾರಂ ಸಿಗದ ಸಿ.ವಿ. ಚಂದ್ರಶೇಖರ್ ಅವರಿಗೆ 2023 ರಲ್ಲಿ ಬಿಜೆಪಿ ಟಿಕೆಟ್ ಪಕ್ಕಾ ಎಂಬ ಮಾಹಿತಿ ಲಭ್ಯವಾಗಿದೆ. ತಮಗೆ ಈ ಬಾರಿ ಹೈಕಮಾಂಡ್ ಟಿಕೆಟ್ ನೀಡುವ ಭರವಸೆ ನೀಡಿದ್ದು ತಾವೇ ಅಭ್ಯರ್ಥಿ ಎಂದು ಸಿ.ವಿ. ಚಂದ್ರಶೇಖರ್ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಕಳೆದ ಬಾರಿ ಟಿಕೆಟ್ ತಪ್ಪಿದ್ದರಿಂದ ಆ ಅನುಕಂಪ ಈ ಬಾರಿ ಸಿ.ವಿ. ಚಂದ್ರ ಶೇಖರ್ ಅವರಿಗೆ ವರವಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇಂತಹ ಸಂದರ್ಭದಲ್ಲಿ ಕರಡಿ ಸಂಗಣ್ಣ ಜೆಡಿಎಸ್‌ನಿಂದ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಆಗಲೂ ಕರಡಿ ವರ್ಸಸ್ ಹಿಟ್ನಾಳ್ ಕುಟುಂಬ ಫೈಟ್ ಮುಂದುವರಿಯಲಿದೆ.
ಸಂಭಾವ್ಯ ಅಭ್ಯರ್ಥಿಗಳು
- ಸಂಗಣ್ಣ ಕರಡಿ, ಮಹಾಂತೇಶ ಪಾಟೀಲ್ ಮೈನಹಳ್ಳಿ, ಸಿ.ವಿ. ಚಂದ್ರಶೇಖರ್ (ಬಿಜೆಪಿ)
- ಕೆ. ರಾಘವೇಂದ್ರ ಹಿಟ್ನಾಳ್ ,ಸಿದ್ದರಾಮಯ್ಯ (ಕಾಂಗ್ರೆಸ್)
- ವೀರೇಶ ಮಹಾಂತಯ್ಯನಮಠ (ಜೆಡಿಎಸ್.) ವಯಸ್ಸಿನ ಕಾರಣ ನೀಡಿ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದರೆ ಸಂಗಣ್ಣ ಕರಡಿ ಜೆಡಿಎಸ್‍ಗೆ ಹಾರಬಹುದು. ಕೊನೆ ಕ್ಷಣದಲ್ಲಿ ಜೆಡಿಎಸ್ನ ಅಭ್ಯರ್ಥಿಯಾಗಬಹುದು)
ಚುನಾವಣಾ ಇತಿಹಾಸ
ಮತದಾರರ ಅಂಕಿಅಂಶ
ಇದನ್ನೂ ಓದಿ | ಎಲೆಕ್ಷನ್ ಹವಾ | ಗಂಗಾವತಿ | ಪರಣ್ಣ ವಿರೋಧಿ ಅಲೆಯ ಲಾಭ ಪಡೆಯುವ ಸೆಣೆಸಾಟದಲ್ಲಿ ಅನ್ಸಾರಿ