ಕಂಪ್ಲಿ: ಚುನಾವಣಾ ಅಧಿಕಾರಿ, ತಹಸೀಲ್ದಾರ್ ಹಾಗೂ ಸಿಪಿಐ ಅವರು ಬಿಜೆಪಿ ಏಜೆಂಟ್ (Agents) ಗಳಾಗಿದ್ದಾರೆ ಎಂದು ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಆರೋಪಿಸಿದ್ದಾರೆ.
ಕಂಪ್ಲಿ ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗೂ ನಡೆದಂತಹ ನೀತಿ ಸಂಹಿತೆ ಉಲ್ಲಂಘನೆಯ ಕುರಿತು ಜಿಲ್ಲಾಧಿಕಾರಿಗಳು, ಕ್ಷೇತ್ರ ಚುನಾವಣಾ ಅಧಿಕಾರಿ, ತಹಸೀಲ್ದಾರ್ ಹಾಗೂ ಸಿಪಿಐಗೆ ಮಾಹಿತಿ ನೀಡುತ್ತಿದ್ದೇನೆ. ಆದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿನ ಎಲ್ಲ ಅಧಿಕಾರಿಗಳು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದರು.
ಇದನ್ನೂ ಓದಿ: New financial rules : ಮ್ಯೂಚುವಲ್ ಫಂಡ್‌ನಿಂದ ಎಲ್ಪಿಜಿ ದರದ ತನಕ ಹೊಸ ಬದಲಾವಣೆ ಏನು? ಇಲ್ಲಿದೆ ಡಿಟೇಲ್ಸ್
ಸ್ಪಂದಿಸದ ಅಧಿಕಾರಿಗಳು
ಇದೀಗ ಕ್ಷೇತ್ರದಲ್ಲಿ 120 ಜನ ಡಿಗ್ರಿ, ಡಿಪ್ಲೋಮಾ ಆದಂತಹ ವಿದ್ಯಾರ್ಥಿಗಳು ಮನೆ ಮನೆಗೆ ತೆರಳಿ ಮತದಾರರ ಕುರಿತು ಮಾಹಿತಿ ಪಡೆದು ಬಿಜೆಪಿ ಅಭ್ಯರ್ಥಿ ಸುರೇಶ್ ಬಾಬು ಭಾವಚಿತ್ರವಿರುವಂತಹ ಸ್ಲಿಪ್ ನೀಡಿ ಹಣ ನೀಡುವುದಾಗಿ ಹೇಳಿ ಬಿಜೆಪಿಗೆ ಮತ ನೀಡುವಂತೆ ತಿಳಿಸುತ್ತಿದ್ದಾರೆ. ಈ ವಿಚಾರ ಕುರಿತು ಸಂಬಂಧಪಟ್ಟಂತಹ ಅಧಿಕಾರಿಗಳ ಗಮನಕ್ಕೆ ತಂದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಯಾವುದೇ ತಪ್ಪು ಮಾಡದ ಕಾಂಗ್ರೆಸ್ ಕಾರ್ಯಕರ್ತರೊಬ್ಬರನ್ನು ಇಲ್ಲಸಲ್ಲದ ಕಾರಣ ಹೇಳಿ ಪೊಲೀಸ್ ಠಾಣೆಗೆ ಕರೆದೊಯ್ದು ಥಳಿಸುವಂತಹ ಕಾರ್ಯ ಸಿಪಿಐ ಸುರೇಶ್ ಮಾಡಿದ್ದಾರೆ. ಆದರೆ ಬಿಜೆಪಿ ಅವರು ರಾಜಾರೋಷವಾಗಿ ಜನರಿಗೆ ಸೀರೆ ಹಂಚಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಕಂಪ್ಲಿ ಕ್ಷೇತ್ರದಲ್ಲಿರುವ ಅಧಿಕಾರಿಗಳು ಬಿಜೆಪಿ ಏಜೆಂಟ್‌ಗಳಾಗಿದ್ದಾರೆ ಎಂದು ದೂರಿದರು.
ಪ್ರಚಾರ ತೊರೆದು ಧರಣಿ ಕೈಗೊಳ್ಳುತ್ತೇನೆ
ಈ ಕುರಿತು ಸೂಕ್ತ ಕ್ರಮ ಜರುಗಿಸಿ ಚುನಾವಣಾ ಅಧಿಕಾರಿ, ತಹಶೀಲ್ದಾರ್, ಸಿಪಿಐ ಸ್ಥಾನಕ್ಕೆ ಬೇರೆ ಅಧಿಕಾರಿಗಳನ್ನು ನೇಮಿಸಬೇಕು. ಇನ್ನು ಎರಡು ದಿನಗಳ ಒಳಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಜರುಗಿಸಿ ಆರೋಪಿಗಳ ವಿರುದ್ಧ ಪ್ರಕರಣದಾಖಲಿಸಿ ಪಾರದರ್ಶಕವಾಗಿ ಚುನಾವಣೆ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು. ಇಲ್ಲದಿದ್ದಲ್ಲಿ ಪ್ರಚಾರ ತೊರೆದು ನನ್ನ ಪಕ್ಷದ ಕಾರ್ಯಕರ್ತರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಕೈಗೊಳ್ಳುತ್ತೇನೆ ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: Dengue fever: 20 ದಿನದಲ್ಲೇ ಡೆಂಗ್ಯೂ ಕೇಸ್ ಹೆಚ್ಚಳ; 200ಕ್ಕೂ ಹೆಚ್ಚು ಮಂದಿಗೆ ಫೀವರ್
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶ್ರೀನಿವಾಸ್‌ರಾವ್, ತಾಪಂ ಸದಸ್ಯ ಷಣ್ಮುಖಪ್ಪ, ಮುಖಂಡರಾದ ಅಬೀಬ್ ರೆಹೆಮಾನ್, ಜಾಫರ್, ಕಟ್ಟೆ ವೆಂಕಟೇಶ್, ಕಟ್ಟೆ ವಿಜಯ ಮಹಾಂತೇಶ್, ಆರ್.ಪಿ. ಶಶಿಕುಮಾರ್, ವೈ.ಉಮೇಶ್, ಆದಿಶೇಶ, ಚೆನ್ನಬಸವ ಕೋರಿ ಸೇರಿ ಹಲವರು ಇದ್ದರು.