ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ (Free Bus Service) ಅವಕಾಶ ಕಲ್ಪಿಸಿದ ಸರ್ಕಾರದ ಶಕ್ತಿ ಯೋಜನೆಯನ್ನು (Shakti Scheme) ಬಿಜೆಪಿಯವರು ಟೀಕಿಸುತ್ತಿದ್ದಾರೆ. ಇಂಥ ಟೀಕಾಕಾರರಿಗೆ ಮಹಿಳೆಯರೇ ಮುಂದಿನ ಚುನಾವಣೆಯಲ್ಲಿ ಉತ್ತರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ವಿಧಾನಸೌಧದ ಪೂರ್ವ ದ್ವಾರದ ಮುಂಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC Service) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ವಿದ್ಯುತ್ ಚಾಲಿತ ಬಸ್ ಗಳನ್ನು ಲೋಕಾರ್ಪಣೆಗೊಳಿಸಿ (100 Electric Bus introduced) ಮಾತನಾಡಿದರು. ಮುಂದಿನ ಏಪ್ರಿಲ್ ವೇಳೆಗೆ 1400 ಹೊಸ ಎಲೆಕ್ಟ್ರಿಕ್ ಬಸ್‌ಗಳು ಬಿಎಂಟಿಸಿ ಸಾರಿಗೆ ವ್ಯವಸ್ಥೆಗೆ ಸೇರಲಿವೆ ಎಂದು ಹೇಳಿದರು.
ಶಕ್ತಿ ಯೋಜನೆಯಡಿ ಇಲ್ಲಿಯವರೆಗೂ ರಾಜ್ಯ ಸಾರಿಗೆಯ ಬಸ್‌ಗಳಲ್ಲಿ 120 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಪ್ರಯಾಣಿಸಿದ್ದಾರೆ. ನಿತ್ಯ 40 ಲಕ್ಷ ಜನ ಬಿಎಂಟಿಸಿಯಲ್ಲಿ ಪ್ರಯಾಣ ಮಾಡಿದ್ದಾರೆ. ಇದರಲ್ಲಿ ಎಲ್ಲ ಜಾತಿ, ಎಲ್ಲ ಧರ್ಮದ, ಎಲ್ಲ ಅಂತಸ್ತಿನ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ ಅವರು, ಉಚಿತ ಬಸ್ ಪ್ರಯಾಣವನ್ನು ಬಿಜೆಪಿ ಯವರು ಟೀಕಿಸುತ್ತಿದ್ದಾರೆ. ಆದರೆ ತಾವು ಅಧಿಕಾರದಲ್ಲಿದ್ದಾಗ ಈ ಜನೋಪಯೋಗಿ ಯೋಜನೆಯನ್ನು ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದರು.
ನಮ್ಮ ಗ್ಯಾರಂಟಿಗಳಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿ ರಾಜ್ಯದ ಆರ್ಥಿಕ ಚಟುವಟಿಕೆ ಹೆಚ್ಚಾಗಿ ರಾಜ್ಯದ ಆರ್ಥಿಕ ಬೆಳವಣಿಗೆ ಆಗುತ್ತಿದೆ. ಕಾರ್ಮಿಕ ಮತ್ತು ರೈತ ಮಹಿಳೆಯರು, ದುಡಿಯುವ ವರ್ಗಗಳ ಮಹಿಳೆಯರಿಗೆ ಇದರಿಂದ ಸಾಕಷ್ಟು ಹಣ ಉಳಿತಾಯವಾಗಿದೆ. ಆ ಹಣವನ್ನು ತಮ್ಮ ಕುಟುಂಬದ ಇತರೆ ಅಗತ್ಯಗಳಿಗೆ ಬಳಸುತ್ತಿದ್ದಾರೆ. ಹೀಗಾಗಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಶಕ್ತಿಯೂ ಹೆಚ್ಚುತ್ತಿದೆ ಎಂದು ಸರ್ಕಾರದ ಜನೋಪಯೋಗಿ ಯೋಜನೆಯ ಪರಿಣಾಮಕಾರಿ ಫಲಿತಾಂಶವನ್ನು ವಿವರಿಸಿದರು.
ರಾಜ್ಯದ 4 ಕೋಟಿ 30 ಲಕ್ಷ ಮಂದಿ ನೇರವಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಆ ಮೂಲಕ ಬಡವರು ಮತ್ತು ದುಡಿಯುವ ವರ್ಗಗಳನ್ನು ಆರ್ಥಿಕ ಪ್ರಗತಿಯ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದರು. ಆರ್ಥಿಕ ಶಕ್ತಿ ಮೂಲಕ ನಾಡಿನ ಸಮಸ್ತ ಮಹಿಳೆಯರಿಗೆ ಮತ್ತು ಬಡ, ಶ್ರಮಿಕ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸ್ವಾತಂತ್ರ್ಯ ಲಭಿಸಿದೆ. ಇದನ್ನು ಸಾಧಿಸಲು ಕಾಂಗ್ರೆಸ್ ಸರ್ಕಾರವೇ ಬರಬೇಕಾಯಿತು. ಹಿಂದಿದ್ದ ಬಿಜೆಪಿ ಸರ್ಕಾರಗಳು ಇದನ್ನು ಸಾಧಿಸಲಿಲ್ಲ. ಬದಲಿಗೆ ಟೀಕಿಸುತ್ತಾ ಕುಳಿತಿವೆ ಎಂದು ಸಿದ್ದರಾಮಯ್ಯ ಹೇಳಿದರು.
ದೆಹಲಿ ಬಿಟ್ಟರೆ ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್ ಬೆಂಗಳೂರಲ್ಲಿ
ಮಾರ್ಚ್ ವೇಳೆ ಈಗ ನಿಗದಿಯಾಗಿರುವ ಎಲ್ಲಾ 921 ಎಲೆಕ್ಟ್ರಿಕ್ ಬಸ್‌ಗಳು ರಸ್ತೆಗೆ ಇಳಿಯಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಸದ್ಯ 300 ಬಸ್ ಗಳು ನಗರದಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಹೊಸ ಬಸ್‌ಗಳು ಬಂದ ಮೇಲೆ ದೆಹಲಿ ಬಿಟ್ಟರೆ ಅತಿ ಹೆಚ್ಚು ಎಲೆಕ್ಟ್ರಿಕ್ ಬಸ್ ಗಳು ಇರುವ ರಾಜ್ಯ ನಮ್ಮದಾಗುತ್ತದೆ ಎಂದು ಹರ್ಷಿಸಿದರು.
ʻʻಇನ್ನೂ 840 ಡೀಸೆಲ್ ಬಸ್ ಗಳೂ ಬರಲಿವೆ. ಬೆಂಗಳೂರಿನ ಜನಸಂಖ್ಯೆಗೆ ತಕ್ಕಂತೆ 10 ಸಾವಿರ ಬಸ್ ಗಳ ಸೇವೆ ಬೇಕಿದೆ. ದಿನನಿತ್ಯ 10 ಲಕ್ಷ ಮಂದಿ ಬಿಎಂಟಿಸಿ ಬಸ್ ಗಳಲ್ಲಿ ಸಂಚಾರ ಮಾಡುತ್ತಿದ್ದಾರೆʼʼ ಎಂದು ತಿಳಿಸಿದ ಅವರು, 2016ರಿಂದ ಸಾರಿಗೆ ನಿಗಮಗಳಲ್ಲಿ ನೇಮಕಾತಿ ಆಗಿರಲಿಲ್ಲ. ಈ ಬಾರಿ ಹೊಸ ನೇಮಕಾತಿಗೆ ಸಿಎಂ ಸಿದ್ದರಾಮಯ್ಯ ಅವರು ಅನುಮತಿ ನೀಡಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತರಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಜಿ ನಗರ ಶಾಸಕ ರಿಜ್ವಾನ್ ಅರ್ಷದ್ ವಹಿಸಿದ್ದರು. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಕ್ರೀಡಾ ಸಚಿವ ನಾಗೇಂದ್ರ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.