ಬೆಂಗಳೂರು: ರಾಜ್ಯದ ನಾಗರಿಕರಿಗೆ ಕರೆಂಟ್ ದರದ ಶಾಕ್ ಕೊಟ್ಟ ಬಳಿಕ ಮತ್ತೊಂದು ಬೆಸ್ಕಾಂ ಮತ್ತೊಂದು ಬರೆ ಎಳೆದಿದೆ.
ವಿದ್ಯುತ್ ಮೀಟರ್ ಡೆಪಾಸಿಟ್ ಮೊತ್ತವನ್ನು ಬೆಸ್ಕಾಂ ಏರಿಕೆ ಮಾಡಿದೆ. ಪ್ರತಿ ಮನೆಯ ಮೀಟರ್ ಅಳವಡಿಕೆಗೂ ಮುನ್ನ ಬೆಸ್ಕಾಂ ಭದ್ರತಾ ಠೇವಣಿಯನ್ನು ಪಡೆದಿರುತ್ತದೆ. ವಿದ್ಯುತ್ ದರ ಹೆಚ್ಚಳವಾದಂತೆ ಹಾಗೂ ಬಳಕೆ ಪ್ರಮಾಣ ಏರಿದಂತೆ ಈ ಲೆಕ್ಕಾಚಾರ ಬದಲಾಗುತ್ತದೆ. ಒಂದು ವರ್ಷದಲ್ಲಿ ಪಾವತಿಸುವ ಮಾಸಿಕ ಸರಾಸರಿ ವಿದ್ಯುತ್ ಬಿಲ್ ಆಧಾರದಲ್ಲಿ ಈ ಲೆಕ್ಕಾಚಾರ ಮಾಡಲಾಗುತ್ತದೆ. ಎರಡು ತಿಂಗಳ ಸರಾಸರಿ ಬಿಲ್ ಮೊತ್ತವನ್ನು ಬೆಸ್ಕಾಂ ಠೇವಣಿ ಇರಿಸಿಕೊಳ್ಳುತ್ತದೆ.
ಉದಾಹರಣೆಗೆ ವರ್ಷ ಪೂರ್ತಿ ಪಾವತಿಸಿದ ಒಟ್ಟು ವಿದ್ಯುತ್ ಬಿಲ್ ₹6 ಸಾವಿರ ಇದ್ದರೆ, ಮಾಸಿಕ ಸರಾಸರಿ ₹600 ಆಗುತ್ತದೆ. ಅದರಂತೆ ಎರಡು ತಿಂಗಳ ಸರಾಸರಿ, ₹1,200 ಠೇವಣಿಯನ್ನು ಬೆಸ್ಕಾಂನಲ್ಲಿ ಇರಿಸಬೇಕಾಗುತ್ತದೆ. ಈ ಹಿಂದಿನ ಬಿಲ್ ಲೆಕ್ಕಾಚಾರದಲ್ಲಿ ₹1,000 ಪಾವತಿ ಮಾಡಿದ್ದರೆ ಈಗ ₹200 ನೀಡಿ ಠೇವಣಿ ಮೊತ್ತವನ್ನು ಹೆಚ್ಚಿಸಬೇಕಾಗುತ್ತದೆ. ಈ ರೀತಿ ಠೇವಣಿ ಪರಿಷ್ಕರಣೆ ಕಾರ್ಯವನ್ನು ಪ್ರತಿ ವರ್ಷ ಬೆಸ್ಕಾಂ ನಡೆಸುತ್ತದೆ.
ಠೇವಣಿ ಹಣವನ್ನು, ವಿದ್ಯುತ್ ಸಂಪರ್ಕವನ್ನು ಸರೆಂಡರ್ ಮಾಡಿದಾಗ, ಅಂದರೆ ನಮಗೆ ವಿದ್ಯುತ್ ಸಂಪರ್ಕ ಬೇಡ ಎಂದು ತಿಳಿಸಿದಾಗ ವಾಪಸ್ ನೀಡುವುದಾಗಿ ನಿಯಮ ಹೇಳುತ್ತದೆ. ಆದರೆ ಈಗಿನ ಕಾಲದಲ್ಲಿ ಯಾರು ವಿದ್ಯುತ್ ಸಂಪರ್ಕವನ್ನು ಸರೆಂಡರ್ ಮಾಡುತ್ತಾರೆ ಎಂಬುದೇ ಯಕ್ಷಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಪ್ರತಿ ವರ್ಷ ಸಾರ್ವಜನಿಕರಿಂದ ಬೃಹತ್ ಮೊತ್ತದ ಠೇವಣಿಯನ್ನು ಬೆಸ್ಕಾಂ ಸಂಗ್ರಹಿಸುತ್ತಾ ಸಾಗುತ್ತದೆ.
ಈ ವರ್ಷವೂ ಅದರಂತೆ ಪ್ರತಿ ಮನೆಗೆ ಬೆಸ್ಕಾಂ ನೋಟಿಸ್ ನೀಡಿದೆ. 2021ರ ಬಿಲ್ ಮೊತ್ತವನ್ನು ಆಧರಿಸಿ ಈ ನೋಟಿಸ್ ನೀಡಲಾಗಿದೆ. ಈ ಠೇವಣಿ ಮೊತ್ತವನ್ನು ಪಾವತಿಸಲು ಒಂದು ತಿಂಗಳ ಅವಕಾಶ ನೀಡಲಾಗಿದೆ. ತಪ್ಪಿದಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡುವುದಾಗಿ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಅಮೇಜಾನ್, ಫ್ಲಿಪ್‌ಕಾರ್ಟ್ ʼಅಂಗಡಿʼ ಬಂದ್ ಮಾಡಲಿದೆಯೇ ONDC?