Site icon Vistara News

Electric shock : ಕಬ್ಬಿನ ಗದ್ದೆಯಲ್ಲಿ ಕಟ್‌ ಆಗಿ ಬಿದ್ದ ವಿದ್ಯುತ್‌ ತಂತಿ ತುಳಿದು ಕೃಷಿ ಕಾರ್ಮಿಕ ಸಾವು

Agricultural labourer dies after being electrocuted by a cut electric wire in sugarcane field

ಹುಬ್ಬಳ್ಳಿ: ಹೊಲದಲ್ಲಿ ವಿದ್ಯುತ್ ಸ್ಪರ್ಶಿಸಿ ಕೃಷಿ ಕಾರ್ಮಿಕ (Electric shock) ದಾರುಣವಾಗಿ ಮೃತಪಟ್ಟಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ನಡೆದಿದೆ. ಮಾದೇವಪ್ಪ ಹಂಗರಕಿ (62) ಮೃತ ಕೃಷಿ ಕಾರ್ಮಿಕ.

ಮಾದೇವಪ್ಪ ಅವರು ಅನ್ವರ್ ಬೇಪಾರಿ ಎನ್ನುವವರ ಕಬ್ಬಿನ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪಂಪ್‌ಸೆಟ್‌‌ಗೆ ಅಳವಡಿಸಿದ್ದ ವಿದ್ಯುತ್ ಕೇಬಲ್ ಕಟ್ ಆಗಿತ್ತು. ಆದರೆ ಇದನ್ನು ಗಮನಿಸಿದ ಮಾದೇವಪ್ಪ ವಿದ್ಯುತ್ ತಂತಿ ತುಳಿದಾಗ ಕ್ಷಣಾರ್ಧದಲ್ಲೇ ವಿದ್ಯುತ್‌ ಪ್ರವಹಿಸಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇದನ್ನೂ ಓದಿ:Karnataka weather : ಮತ್ತೆ ಶುರುವಾಗುತ್ತಾ ಮಳೆ ಅಬ್ಬರ? ವಾರಾಂತ್ಯದಲ್ಲಿ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಕಟ್ಟಿಂಗ್‌ ಶಾಪ್‌ಗೆ ಯುವಕನಿಗೆ ಚಾಕು ಇರಿತ

ಬೆಂಗಳೂರಲ್ಲಿ ಪೊಲೀಸರ ಭಯವೇ ಇಲ್ಲದಂತಾಗಿದೆ. ಹಾಡಹಗಲೇ ಕಟ್ಟಿಂಗ್ ಶಾಪ್‌ಗೆ ನುಗ್ಗಿ ಯುವಕನಿಗೆ ಚಾಕು ಇರಿಯಲಾಗಿದೆ. ಬೆಂಗಳೂರಿನ ಜೆಜೆ ನಗರದ ಸೆಲೂನ್ ಶಾಪ್‌ನಲ್ಲಿ ಈ ಘಟನೆ ನಡೆದಿದೆ.

ಶಾಹಿದ್ ಅಹಮದ್ ಎಂಬಾತ ಚಾಕು ಇರಿತಕ್ಕೆ ಒಳಗಾದವನು. ತಬ್ರೇಜ್ ನದೀಂ, ಗುಡ್ಡು, ವಾಹೀಂ, ರಾಹಿಲ್ ರಿಯಾನ್, ರೋಷನ್, ಸಲೀಂ ಎಂಬುವರಿಂದ ಹಲ್ಲೆ ನಡೆಸಿದ್ದಾರೆ. ಕಳೆದ ಜ.16ರಂದು ರಾತ್ರಿ 9.30ಕ್ಕೆ ಹಲ್ಲೆ ನಡೆದಿದೆ. ಮೊದಲಿಗೆ ಪಾರ್ಕಿಂಗ್ ವಿಚಾರವಾಗಿ ಯುವಕರ ನಡುವೆ ಗಲಾಟೆ ನಡೆದಿದೆ. ನಂತರ ಸೆಲೂನ್ ಶಾಪ್ ಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾರೆ. ಯುವಕರ ಪುಂಡಾಟದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸದ್ಯ ಜೆಜೆ ನಗರ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಗಾಯಾಳು ಶಾಹಿದ್ ಅಹಮದ್‌ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ:JSS Hospital : ಅಯೋಧ್ಯಾ ಸಂಭ್ರಮೋತ್ಸವ; ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಫ್ರೀ ಟ್ರೀಟ್ಮೆಂಟ್‌

ಲಸ್ಸಿ ಕೆಫೆಗೆ ನುಗ್ಗಿ ಮ್ಯಾನೇಜರ್‌ಗೆ ಹಲ್ಲೆ

ಬೆಂಗಳೂರಿನ ಕೆಂಗೇರಿ ಸಮೀಪದ ಹೊಯ್ಸಳ ನಗರದಲ್ಲಿ ಲಸ್ಸಿ ಕೆಫೆಗೆ ನುಗ್ಗಿದ ಇಬ್ಬರು ಯುವಕರು ಕ್ಯಾಷಿಯರ್ ಇರ್ಷಾದ್ ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ ಇರ್ಷಾದ್ ತಗೆಲೆ ಗಂಭೀರವಾದ ಗಾಯವಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version