ತುಮಕೂರು: ವಿದ್ಯುತ್ ಸ್ಪರ್ಶದಿಂದ (Electric Shock) ತಂದೆ ಮತ್ತು ಮಗಳು (Father and daughter death) ಪ್ರಾಣ ಕಳೆದುಕೊಂಡ ದಾರುಣ ಘಟನೆ ತುಮಕೂರು ಜಿಲ್ಲೆಯ (Tumkur News) ಪಾವಗಡ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಬಸವಹಳ್ಳಿ ಗ್ರಾಮದ ರೈತ ದಿಗವಿಂಟಿ ರಾಮಕೃಷ್ಣರೆಡ್ಡಿ (65) ಮತ್ತು ಅವರ ಮಗಳು ನಿರ್ಮಲಾ (45) ಮೃತ ದುರ್ದೈವಿಗಳು.
ರಾಮಕೃಷ್ಣ ರೆಡ್ಡಿ ಪಕ್ಕದ ಆಂಧ್ರದ ಮಡಕಶಿರಾ ತಾಲೂಕಿನ ಎಲ್ಲೋಟಿ ಗ್ರಾಮದಲ್ಲಿರೋ ಹೊಲದಲ್ಲಿ ನೀರು ಬಿಡಲು ಹೋಗಿದ್ದರು. ಈ ವೇಳೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಜಮೀನಿಗೆ ಹೋದ ತಂದೆ ಎಷ್ಟು ಹೊತ್ತಾದರೂ ವಾಪಸ್ ಬಾರದೆ ಇದ್ದುದ್ದಕ್ಕೆ ಗಾಬರಿಗೊಂಡ ಮಗಳು ನಿರ್ಮಲಾ ತಂದೆಯನ್ನು ಹುಡುಕಲು ಜಮೀನಿಗೆ ತೆರಳಿದ್ದಾರೆ. ಈ ವೇಳೆ ಮಗಳು ನಿರ್ಮಲಾ ಕೂಡ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ.
ಈ ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಧಾವಿಸಿದ್ದಾರೆ. ಆದರೆ, ಅಷ್ಟು ಹೊತ್ತಿಗೆ ಇಬ್ಬರ ಬದುಕೂ ಅಂತ್ಯವಾಗಿತ್ತು. ಮಗಳು ಜಮೀನಿಗೆ ಹೋದಾಗ ಅವರು ಅಲ್ಲಿ ಬಿದ್ದಿದ್ದರು. ಆದರೆ, ಅವರು ಬಿದ್ದಿರುವುದು ವಿದ್ಯುತ್ ಆಘಾತದಿಂದ ಎನ್ನುವುದು ಆಕೆಗೆ ಗೊತ್ತಿರಲಿಲ್ಲ. ಆಕೆ ತಂದೆ ಬಿದ್ದಲ್ಲಿಗೆ ಹೋಗಿ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಅವರಿಗೂ ವಿದ್ಯುತ್ ಆಘಾತವಾಗಿ ಸಾವು ಕಂಡಿದ್ದಾರೆ.
ಗ್ರಾಮಸ್ಥರು ಅಪ್ಪ, ಮಗಳ ಶವವನ ಬಸವನಹಳ್ಳಿ ಗ್ರಾಮಕ್ಕೆ ಸಾಗಿಸಿದ್ದಾರೆ. ಊರಿನಲ್ಲಿ ಬಂಧುಗಳು ಮತ್ತು ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದ್ದು, ಅದೇ ಠಾಣೆಯಲ್ಲಿ ಕೇಸು ದಾಖಲಾಗಿದೆ.
ತುಂಡಾಗಿ ಬಿದ್ದಿದ್ದ ತಂತಿ ತಗುಲಿ ವೃದ್ಧೆ ಸಾವು; ಶವ ಎತ್ತಲು ಬಿಡದೆ ಪ್ರತಿಭಟನೆ
ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಬಳ್ಳೂರು ಗ್ರಾಮದಲ್ಲಿ ಭಾರಿ ಮಳೆಗೆ (Rain News) ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದ ವೃದ್ಧೆಯೊಬ್ಬರು ಅದನ್ನು ತುಳಿದು ಮೃತಪಟ್ಟಿರುವ ಪ್ರಕರಣ ಗಂಭೀರತೆಯನ್ನು ಪಡೆದುಕೊಂಡಿದೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಶನಿವಾರ ಮಧ್ಯಾಹ್ನವಾದರೂ ಶವವನ್ನು ಮೇಲಕ್ಕೆತ್ತಲು ಬಿಡದೆ ಹೋರಾಟ ನಡೆಸಲಾಗುತ್ತಿದೆ. ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಲಾಗಿದೆ.
ರಂಗಮ್ಮ (60) ಮೃತ ದುರ್ದೈವಿ. ಭಾರಿ ಗಾಳಿ, ಮಳೆಯಿಂದ ವಿದ್ಯುತ್ ತಂತಿ ತುಂಡಾಗಿ ರಸ್ತೆಗೆ ಬಿದ್ದಿತ್ತು. ಆದರೆ, ಇದನ್ನು ಯಾರೂ ಗಮನಿಸಿರಲಿಲ್ಲ. ಈ ವೇಳೆ ಹೊಲಕ್ಕೆ ಹೋಗಿ ಹಸುವಿನ ಜತೆ ವಾಪಸಾಗುತ್ತಿದ್ದ ಮಹಿಳೆ ರಂಗಮ್ಮ ಮನೆಯತ್ತ ಹೊರಟಿದ್ದರು. ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಯಾವುದೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ತುಳಿದು ಅವರು ಮೃತಪಟ್ಟಿದ್ದರು. ಇವರ ಜತೆಗಿದ್ದ ಹಸುವೂ ಮೃತಪಟ್ಟಿತ್ತು.
ಒಂದು ವರ್ಷದ ಹಿಂದೆ ಇದೇ ಜಾಗದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರಂಗಮ್ಮ ಬಾವಮೈದುನ ಯಜಮಾನ್‌ಗೌಡ ಎಂಬುವವರು ಮೃತಪಟ್ಟಿದ್ದರು. ತಂತಿ ಬೀಳುವಂತಿದೆ ದುರಸ್ತಿ ಮಾಡುವಂತೆ ಒಂದು ತಿಂಗಳಿನಿಂದ ಚೆಸ್ಕಾಂ ಸಿಬ್ಬಂದಿಗೆ ಬಳ್ಳೂರು ಗ್ರಾಮಸ್ಥರು ಮನವಿ ಮಾಡಿದ್ದರು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಚೆಸ್ಕಾಂ ನಿರ್ಲಕ್ಷ್ಯ ವಹಿಸಿದೆ. ಈಗ ಮೃತ ರಂಗಮ್ಮ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು. ಇನ್ನು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಅಮಾನತು ಮಾಡಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ. ಕ್ರಮ ಜರುಗಿಸುವವರೆಗೂ ಮೃತದೇಹವನ್ನು ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಗ್ರಾಮದ ನೂರರು ಜನ, ರೈತ ಸಂಘದ ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: Jain Muni Murder : ಹಿರೇಕೋಡಿ ಜೈನಮುನಿಯನ್ನು ತುಂಡು ತುಂಡಾಗಿ ಕತ್ತರಿಸಿ ಕೊಳವೆ ಬಾವಿಗೆ ಎಸೆದರು!