ಕಲಬುರಗಿ: ಇಲ್ಲಿನ ಅಫಜಲಪುರ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಲೈನ್‌ಮ್ಯಾನ್‌ಗೆ ವಿದ್ಯುತ್ ಪ್ರವಹಿಸಿ (Electric Shock) ಮೃತಪಟ್ಟಿದ್ದಾರೆ. ಸಂತೋಷ್ (28) ಮೃತ ದುರ್ದೈವಿ.
ಜೇವರ್ಗಿ ತಾಲೂಕಿನ ಹುಲ್ಲುರು ಗ್ರಾಮದ ನಿವಾಸಿಯಾದ ಸಂತೋಷ್ ದೇವಲಗಾಣಗಾಪುರದಲ್ಲಿ ಐಟಿ ಸೆಟ್ ಲೈನ್ ಸರಿಪಡಿಸಲು ಹೋಗಿದ್ದರು. ಸಂತೋಷ್ ಐಟಿ ಸೆಟ್ ಪರಿಶೀಲನೆ ಮಾಡಲು ವಿದ್ಯುತ್ ಕಂಬ ಎರಿದ್ದರು. ಎಲ್‌ಸಿ ಆಫ್ ಮಾಡಿದ್ದರೂ ವಿದ್ಯುತ್ ಸರಬರಾಜು ಆಗಿ ಸಂತೋಷ್ ಮೃತಪಟ್ಟಿದ್ದಾರೆ.
ಈ ಕುರಿತು ಕೆಇಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ದೇವಲಗಾಣಗಾಪುರ ಪೊಲೀಸರ ಭೇಟಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಹೆದ್ದಾರಿ ತಡೆದು ರೈತರ ಪ್ರತಿಭಟನೆ
ವಿದ್ಯುತ್ ಸ್ಪರ್ಶಿಸಿ ಲೈನ್‌ಮ್ಯಾನ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ಅಫಜಲಪುರ ಮುಖ್ಯ ಹೆದ್ದಾರಿ ತಡೆದು ರೈತರು ಪ್ರತಿಭಟಿಸಿದ್ದಾರೆ. ಅಫಜಲಪುರ ತಾಲೂಕಿನ ಚೌಡಾಪುರ ಬಳಿ ಮುಖ್ಯ ಹೆದ್ದಾರಿ ತಡೆದು, ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೈನ್‌ಮ್ಯಾನ್ ಸಂತೋಷ್ ಮೃತಪಟ್ಟಿದ್ದಾರೆಂದು ಆರೋಪಿಸಿದರು.
ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವು
ಸೋಲಾರ್ ತಂತಿಗೆ ಅಕ್ರಮವಾಗಿ ಸಂಪರ್ಕ ಕಲ್ಪಿಸಿದ್ದ ವಿದ್ಯುತ್ ತುಳಿದು ಕಾಡಾನೆಯೊಂದು ಮೃತಪಟ್ಟಿದೆ. ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಘಟನೆ ನಡೆದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಸುಮಾರು 30ರಿಂದ 35 ವರ್ಷದ ಕಾಡಾನೆ ಮೃತಪಟ್ಟಿದೆ.
ಕಂದಾಯ ಜಮೀನು ಮತ್ತು ರಸ್ತೆ ಸಮೀಪದಲ್ಲಿ ಕಾಡಾನೆಯ ಕಳೇಬರ ಪತ್ತೆಯಾಗಿತ್ತು. ಕೂಡಲೇ ಆನೆಮಾಳ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಸಿಎಫ್, ಎಸಿಎಫ್, ಆರ್ಎಫ್ಒ, ಪಶು ವೈದ್ಯಾಧಿಕಾರಿಗಳು, ಸೆಸ್ಕ್ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಇದನ್ನೂ ಓದಿ: Viral Video: ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿದ ನದಿ; ಆತಂಕದ ಮಧ್ಯೆಯೇ ಕಾರಣ ಹೇಳಿದ ಬಿಯರ್ ಫ್ಯಾಕ್ಟರಿ
ಈ ವೇಳೆ ಉದಯ್ ಬಿನ್ ಥಾಮಸ್ ಎಂಬಾತ ತನ್ನ ಜಮೀನಿಗೆ ಅಳವಡಿಸಿದ್ದ ಸೋಲಾರ್ ತಂತಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ. ವಿದ್ಯುತ್ ಸ್ಪರ್ಶದಿಂದ ಕಾಡಾನೆ ಮೃತಪಟ್ಟಿರುವುದು ಸ್ಥಳ ಪರಿಶೀಲನೆ ವೇಳೆ ತಿಳಿದು ಬಂದಿದೆ. ಕಾಡಾನೆಯ ಮರಣೋತ್ತರ ಪರೀಕ್ಷೆಯಲ್ಲೂ ಇದೇ ವರದಿ ಲಭ್ಯವಾಗಿದೆ. ಆರೋಪಿ ಉದಯ್ ಮತ್ತು ಕುಟುಂಬಸ್ಥರು ತಲೆಮರೆಸಿಕೊಂಡಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ