ಬೆಂಗಳೂರು: ಕರ್ನಾಟಕದಲ್ಲಿ ಈಗಾಗಲೇ ವಿದ್ಯುತ್ ಬೆಲೆಯೇರಿಕೆಯಿಂದ ಜನ ಪರಿತಪಿಸುತ್ತಿರುವ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಮ್ಮೆ ವಿದ್ಯುತ್ ಬೆಲೆಯೇರಿಕೆಯ ಬಿಸಿ ತಾಗುವ ಸಾಧ್ಯತೆ ಇದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ಸೇರಿ ರಾಜ್ಯದ ಎಲ್ಲ ಎಸ್ಕಾಂಗಳು ವಿದ್ಯುತ್ ಬೆಲೆಯೇರಿಕೆ (Electricity Price) ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲಿಯೇ ಒಂದು ಯೂನಿಟ್‌ಗೆ 50-60 ಪೈಸೆ ಜಾಸ್ತಿಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಬೆಸ್ಕಾಂ ಜತೆಗೆ ರಾಜ್ಯದಲ್ಲಿರುವ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ), ಕಲಬುರಗಿ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಸೆಸ್ಕ್-ಮೈಸೂರು) ಕೂಡ ವಿದ್ಯುತ್ ಬೆಲೆಯೇರಿಕೆ ಕುರಿತಂತೆ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿವೆ. ಒಂದು ಯೂನಿಟ್‌ಗೆ 49 ಪೈಸೆ ಏರಿಕೆ ಮಾಡಬೇಕು ಎಂಬುದಾಗಿ ಕೆಇಆರ್‌ಸಿಗೆ ಡಿಸೆಂಬರ್ ಕೊನೆಯ ವಾರದಲ್ಲಿಯೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಕುರಿತು ಶೀಘ್ರದಲ್ಲಿಯೇ ಕೆಇಆರ್‌ಸಿ ಬೆಲೆಯೇರಿಕೆ ಮಾಡಿ ಆದೇಶ ಹೊರಡಿಸಲಿದೆ ಎನ್ನಲಾಗಿದೆ. ಏಪ್ರಿಲ್ 1ರಿಂದಲೇ ಪರಿಷ್ಕೃತ ದರ ಅನ್ವಯವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪರಿಷ್ಕರಣೆಗೆ ಪ್ರಸ್ತಾವನೆ ಏಕೆ?
ರಾಜ್ಯದಲ್ಲಿ ಕರ್ನಾಟಕ ಸರ್ಕಾರವು ಗ್ಯಾರಂಟಿ ಯೋಜನೆಗಳ ಅಡಿಯಲ್ಲಿ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಪೂರೈಸುತ್ತಿರುವ ಕಾರಣ ಕಳೆದ ಕೆಲ ತಿಂಗಳಿಂದ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ, ವಿದ್ಯುತ್ ಸರಬರಾಜು ವೆಚ್ಚ, ವಿದ್ಯುತ್ ಖರೀದಿ, ಕಲ್ಲಿದ್ದಿಲು ಖರೀದಿ ಸೇರಿ ಹಲವು ಕಾರಣಗಳಿಂದಾಗಿ ನಿರ್ವಹಣೆಯು ಹೊರೆಯಾಗುತ್ತದೆ. ಹಾಗಾಗಿ, ರಾಜ್ಯದಲ್ಲಿ 2024-25ನೇ ಸಾಲಿನಲ್ಲಿ ವಿದ್ಯುತ್ ದರ ಏರಿಕೆ ಮಾಡಬೇಕು ಎಂದು ಎಸ್ಕಾಂಗಳು ಪ್ರಸ್ತಾವನೆ ಸಲ್ಲಿಸಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ವಿಶ್ಲೇಷಣೆ: ಜನಸಮೂಹದ ಆಯ್ಕೆ ಸ್ವಾತಂತ್ರ್ಯ ಕಸಿದ ಬೆಲೆಯೇರಿಕೆ
ಕಳೆದ ಬಾರಿ ಎಷ್ಟು ಏರಿಕೆ ಆಗಿತ್ತು?
2023ರ ಮೇ ತಿಂಗಳಲ್ಲಿ ವಿದ್ಯುತ್ ಬೆಲೆ ಏರಿಕೆಯಾಗಿತ್ತು. ಒಂದು ಯೂನಿಟ್‌ಗೆ 70 ಪೈಸೆ ಏರಿಕೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಆದೇಶ ಹೊರಡಿಸಿತ್ತು. ವಿದ್ಯುತ್ ಬೆಲೆ ಏರಿಕೆ ಖಂಡಿಸಿ ಸಾರ್ವಜನಿಕರು, ವ್ಯಾಪಾರಸ್ಥರು, ಕಾರ್ಖಾನೆಗಳ ಮಾಲೀಕರು ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಮತ್ತೆ ವಿದ್ಯುತ್ ಬೆಲೆಯೇರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆಯೇರಿಕೆಯು ಜನರನ್ನು ಬಾಧಿಸುತ್ತಿವ ಕಾರಣ ಮತ್ತೆ ಬೆಲೆಯೇರಿಕೆ ಮಾಡುವುದು ಸರಿಯಲ್ಲ ಎಂಬ ಆಗ್ರಹಗಳು ಕೇಳಿಬರುತ್ತಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ