Site icon Vistara News

ಜಮೀನಿಗೆ ಹೋಗುತ್ತಿದ್ದ ರೈತನ ಮೇಲೆ ಎರಗಿದ ಕಾಡಾನೆ, ಹೊಲದಲ್ಲೇ ಹೆಣವಾದ ದುರ್ದೈವಿ

elephant attack

ಮೈಸೂರು: ರೈತರೊಬ್ಬರು ತಮ್ಮ ಹೊಲಕ್ಕೆ ಹೋಗುತ್ತಿದ್ದಾಗ ಕಾಡಾನೆ ದಾಳಿಗೆ ಸಿಲಕಿ ಪ್ರಾಣ ಕಳೆದುಕೊಂಡಿದ್ದಾರೆ. ಎಚ್‌ ಡಿ ಕೋಟೆ ತಾಲೂಕಿನ ಎತ್ತಿಗೆ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಬಾಲನ್‌ ಎಂಬ ಕೇರಳ ಮೂಲದ ಕೃಷಿಕ ಪ್ರಾಣ ಕಳೆದುಕೊಂಡವರು.

ಕೇರಳ ಮೂಲದ ಬಾಲನ್ ಎತ್ತಿಗೆ ಗ್ರಾಮದ ಬಳಿ ಜಮೀನು ಗುತ್ತಿಗೆ ಪಡೆದು ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಗುರುವಾರ ರಾತ್ರಿ ಅವರು ಎಂದಿನ ಹವ್ಯಾಸದಂತೆ ರಾತ್ರಿ ಹೊತ್ತು ತಮ್ಮ ಹೊಲಕ್ಕೆ ಒಂದು ಸುತ್ತು ಬರಲೆಂದು ಹೊರಟಿದ್ದರು. ಆಗ ಅಲ್ಲಿ ಕಾಡಾನೆಯೊಂದು ಅಲ್ಲಿದ್ದದ್ದು ಅವರಿಗೆ ಗೊತ್ತಾಗಲಿಲ್ಲ. ಹೊಲದಲ್ಲಿ ಸಾಗುತ್ತಿದ್ದಾಗ ಒಮ್ಮೆಗೇ ದಾಳಿ ನಡೆಸಿದ ಅದು ಬಾಲನ್‌ ಅವರನ್ನು ಕೊಂದು ಹಾಕಿದೆ.

ಬಾಲನ್‌ ಅವರನ್ನು ಕೊಂದು ಹಾಕಿದ ಆನೆ ಬೆಳಗಾದರೂ ಹೊಲ ಬಿಟ್ಟು ಹೋಗಿರಲಿಲ್ಲ. ಬಾಲನ್‌ ಅವರನ್ನು ಹುಡುಕಿ ಬಂದ ಗ್ರಾಮಸ್ಥರಿಗೆ ಆನೆ ಕಾಣಿಸಿದೆ. ಈ ಹಂತದಲ್ಲಿ ಅವರು ಆನೆಯನ್ನು ಓಡಿಸಲು ಸಾಕಷ್ಟು ಶ್ರಮಪಟ್ಟರು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಪೊಲೀಸರ ದೌಡಾಯಿಸಿದ್ದು ಕೊನೆಗೆ ಹೇಗೋ ಆನೆಯನ್ನು ಓಡಿಸಲಾಯಿತು.

ಈ ನಡುವೆ, ಕಾಡಾನೆಗಳ ಉಪಟಳದಿಂದ ಬೆಳೆ ಹಾನಿಯಲ್ಲದೇ ಜೀವಹಾನಿ ಆಗುತ್ತಿರುವ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದಲ್ಲಿ ಪ್ರತಿಭಟನೆ ನಡೆಸಿದ ಅವರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು.

ನಿರಂತರ ಆನೆ ದಾಳಿ, ಸಾವು
ಹಾಸನ, ಮೈಸೂರು ಮತ್ತು ಕೊಡಗು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ ದಾಳಿ ವಿಪರೀತವಾಗಿದೆ. ಹಾಸನದಲ್ಲಿ ಕೆಲವೇ ದಿನಗಳ ಹಿಂದೆ ಆನೆ ದಾಳಿಯಿಂದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಕೊಡಗಿನಲ್ಲಿ ಆನೆಗಳ ಹಿಂಡೇ ಕೃಷಿ ಪ್ರದೇಶಕ್ಕೆ ಬರುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಅಧಿಕಾರಿಗಳು ಮತ್ತು ಸರಕಾರ ಸೇರಿ ಆನೆ-ಮಾನವ ಸಂಘರ್ಷಕ್ಕೆ ಏನಾದರೂ ಪರಿಹಾರ ಹೇಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇದನ್ನೂ ಓದಿ| Elephant Attack | ಕಾಡಾನೆ ದಾಳಿಗೆ ಸಕಲೇಶಪುರದಲ್ಲಿ ಮತ್ತೊಬ್ಬ ರೈತ ಬಲಿ!

Exit mobile version