ಚನ್ನಪಟ್ಟಣ: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಿನ್ನಗನ ಹೊಸಳ್ಳಿ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಆನೆಗಳ ದಾಳಿಯಿಂದ (Elephant Attack) ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಆಕ್ರೋಶದ ಕಟ್ಟೆ ಒಡೆದಿದ್ದು, ಮಹಿಳೆ ಶವವಿಟ್ಟು ಪ್ರತಿಭಟನೆಯನ್ನು ಆರಂಭಿಸಿದ್ದಾರೆ.
೫೫ ವರ್ಷದ ಚೆನ್ನಮ್ಮ ಎಂಬುವರು ಆನೆಗಳ ದಾಳಿಗೆ ಸಿಲುಕಿ ಮೃತಪಟ್ಟಿದ್ದು, ಇವರು ತೋಟದ ಮನೆಯಲ್ಲಿ ವಾಸವಿದ್ದಾರೆ. ಬೆಳಗ್ಗೆ ಹಾಲು ಕರೆಯಲೆಂದು ಕೊಟ್ಟಿಗೆಯ ಕಡೆಗೆ ಹೋಗಿದ್ದ ವೇಳೆ ಆನೆಗಳು ಲಗ್ಗೆ ಇಟ್ಟಿವೆ. ಈ ವೇಳೆ ಮಹಿಳೆಯನ್ನು ಕಂಡ ಆನೆಗಳು ಓಡಿಸಿಕೊಂಡು ಬಂದಿವೆ. ಆದರೆ, ಚೆನ್ನಮ್ಮ ಅವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಆನೆಗಳು ಚೆನ್ನಮ್ಮ ಅವರ ಮೇಲೆ ದಾಳಿ ನಡೆಸಿ ಕೊಂದು ಹಾಕಿವೆ. ಚನ್ನಮ್ಮ ಅವರ ಕೂಗು ಕೇಳಿ ಮನೆಯವರು ಓಡಿ ಬಂದರೂ ಆನೆಗಳು ಬಿಡದೆ ಬೆನ್ನಟ್ಟಿ ಸಾಯಿಸಿವೆ ಎನ್ನಲಾಗಿದೆ.
ಕುಟುಂಬಸ್ಥರು, ಗ್ರಾಮಸ್ಥರ ಪ್ರತಿಭಟನೆ
ಸತತವಾಗಿ ಆನೆಗಳ ದಾಳಿ ಆಗುತ್ತಿದ್ದರೂ ಅರಣ್ಯ ಇಲಾಖೆಯಾಗಲಿ, ಸರ್ಕಾರವಾಗಲೀ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೀವ್ರವಾಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಸಚಿವರು ಹಾಗೂ ಅಧಿಕಾರಿಗಳು ಬರುವವರೆಗೂ ಶವವನ್ನು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದ್ದಾರೆ. ಇದಕ್ಕೆ ರೈತ ಸಂಘಟನೆಗಳು ಸಹ ಸಾಥ್ ಕೊಟ್ಟಿವೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚನ್ನಪಟ್ಟಣ ಡಿವೈಎಸ್‌ಪಿ ಹಾಗೂ ಹಕ್ಕೂರು ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ಪ್ರಯತ್ನಿಸಿದ್ದಾರೆ. ಶವ ಸಂಸ್ಕಾರ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ, ಇದಕ್ಕೆ ಸಾರ್ವಜನಿಕರು ಒಪ್ಪದೇ, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಸಚಿವರು ಭೇಟಿ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಒಂಬತ್ತು ಕಾಡಾನೆಗಳಿದ್ದವು
ಮಹಿಳೆಯ ಮೇಲೆ ದಾಳಿ ಮಾಡಿದ ಆನೆಗಳ ಹಿಂಡಿನಲ್ಲಿ ಒಟ್ಟು ೯ ಕಾಡಾನೆಗಳಿದ್ದವು ಎಂದು ಹೇಳಲಾಗಿದೆ. ಈ ಆನೆಗಳು ಇದಕ್ಕೆ ಮೊದಲು ಬಿ.ವಿ. ಹಳ್ಳಿಯಲ್ಲಿ ಸಾಕಷ್ಟು ನಾಶ-ನಷ್ಟ ಮಾಡಿಯೇ ಇತ್ತ ಬಂದಿದ್ದವು. ಬಿ.ವಿ. ಹಳ್ಳಿಯ ಹಲವು ರೈತರ ಜಮೀನಿನಲ್ಲಿನ ಬೆಳೆ ನಾಶಪಡಿಸಿರುವುದು ಕಂಡುಬಂದಿವೆ. ಅಲ್ಲೆಲ್ಲ ನಾಶ ಮಾಡಿ ಈ ತೋಟದ ಮನೆಯತ್ತ ಬಂದಿದ್ದವು. ಆದರೆ, ಮಹಿಳೆಗೆ ಕತ್ತಲೆಯಲ್ಲಿ ಆನೆ ಹಿಂಡು ಕಾಣಿಸಲಿಲ್ಲ ಎಂದು ಭಾವಿಸಲಾಗಿದೆ.
ಸೋಮವಾರ ಸಕಲೇಶಪುರದಲ್ಲಿ
ಸೋಮವಾರ ಬೆಳಗ್ಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಳ್ಳಕ್ಕಿ ಮೇಲಕೆರೆ ಗ್ರಾಮದಲ್ಲಿ ಆನೆಯೊಂದು ರೈತರೊಬ್ಬರ ಮೇಲೆ ದಾಳಿ ಮಾಡಿತ್ತು. ಬೆಳಗ್ಗೆ ಗದ್ದೆ ಕೆಲಸಕ್ಕೆ ಹೋಗಿದ್ದಾಗ ಮಂಜುನಾಥ್ (50) ಎಂಬುವವರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿತ್ತು.