ಚಾಮರಾಜನಗರ: ವನ್ಯಜೀವಿಧಾಮದಲ್ಲಿ ಸಫಾರಿ ಹೋಗುವಾಗ ಎಚ್ಚರಿಕೆ ವಹಿಸಲೇಬೇಕು. ಈ ವೇಳೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲೇಬೇಕು. ಹೊರಡುವ ಮುನ್ನವೇ ಎಷ್ಟು ಸಮಯ ತಗಲುತ್ತದೆ? ಎಷ್ಟು ದೂರ ಇದೆ ಎಂಬುದನ್ನು ತಿಳಿದುಕೊಂಡಿರುವುದು ಉತ್ತಮ. ಕಾರಣ ಒಮ್ಮೆ ಹೋಗುತ್ತಿದ್ದಾಗ ನೈಸರ್ಗಿಕ ಕ್ರಿಯೆಗೆ ಅವಸರವಾಗಿದೆ, ತುರ್ತಾಗಿ ನಿಲ್ಲಿಸಿ ಎಂದು ಮನವಿ ಮಾಡಿ ನಿಲ್ಲಿಸಿ ಹೋದಿರೋ ಜೋಕೆ! ನಿಮ್ಮ ಜೀವಕ್ಕೆ ನೀವೇ ಜವಾಬ್ದಾರರಾಗುತ್ತೀರಿ! ಇಲ್ಲಾಗಿರುವುದೂ ಅದೇ ಕಥೆ. ಮೂತ್ರ ವಿಸರ್ಜನೆಗೆಂದು ಕಾಡಿಗೆ ಇಳಿದಿದ್ದ ಒಬ್ಬ ಆನೆ ದಾಳಿಗೆ (Elephant Attack) ತುತ್ತಾಗುವವನಿದ್ದ. ಕೊನೆಗೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಈ ವಿಡಿಯೊ ಈಗ ವೈರಲ್ (Viral Video) ಆಗಿದೆ.
ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಿರುವ ಕೇರಳದ ಮುತ್ತಂಗ ವನ್ಯಜೀವಿಧಾಮದಲ್ಲಿ ಸಫಾರಿ ಹೋಗಲಾಗುತ್ತಿತ್ತು. ಎಲ್ಲವೂ ಚೆನ್ನಾಗಿಯೇ ಇತ್ತು. ವನ್ಯ ಮೃಗಗಳು ಎಲ್ಲರ ಕಣ್ಮನ ಸೆಳೆಯುತ್ತಿತ್ತು. ಎಲ್ಲರೂ ತಮ್ಮ ತಮ್ಮ ಕ್ಯಾಮೆರಾ ಮೂಲಕವೋ, ಮೊಬೈಲ್ ಮೂಲಕವೋ ಫೋಟೊ ತೆಗೆದುಕೊಳ್ಳುವುದು, ವಿಡಿಯೊ ಮಾಡಿಕೊಳ್ಳುವುದನ್ನು ಮಾಡುತ್ತಿದ್ದರು. ಈ ವೇಳೆ ಕಾಡಿನೊಳಗೆ ಹೋಗಿದ್ದ ಒಬ್ಬ ವ್ಯಕ್ತಿ ಓಡೋಡಿ ಬರುತ್ತಿರುವ ದೃಶ್ಯವೊಂದು ಸೆರೆಯಾಗಿದೆ. ಕಾರಣ ಆತನನ್ನು ಆನೆಯೊಂದು ಅಟ್ಟಿಸಿಕೊಂಡು ಬರುತ್ತಿತ್ತು!
ಇದನ್ನೂ ಓದಿ: Mercer Survey: ಮುಂಬೈ ಅತಿ ದುಬಾರಿ ನಗರವಾದ್ರೆ, ಚೆನ್ನೈನಲ್ಲಿ ಎಣ್ಣೆ ರೇಟು ಹೆಚ್ಚು! ಬೆಂಗಳೂರು ಯಾವ ಸ್ಥಾನದಲ್ಲಿದೆ?
ಎದ್ದೆನೋ ಬಿದ್ದೆನೋ ಎಂದು ಓಡಿದ ವ್ಯಕ್ತಿ!
ಮೂತ್ರ ವಿಸರ್ಜನೆಗೆಂದು ಹೋಗಿದ್ದ ವ್ಯಕ್ತಿಯು ತನ್ನ ಪಾಡಿಗೆ ತಾನು ನಿಸರ್ಗದಲ್ಲಿ ನಿಂತು ನೈಸರ್ಗಿಕ ಕ್ರಿಯೆಯನ್ನು ಮಾಡುತ್ತಿದ್ದನಾದರೂ ತನ್ನ ಬೌಂಡರಿಗೆ ಬಂದು ಹೀಗೆ ಮಾಡುತ್ತಿದ್ದು ಬಹುಶಃ ಅಲ್ಲಿರುವ ಆನೆಗಳ ದಂಡಿನಲ್ಲಿ ಒಂದು ಆನೆಗೆ ಸರಿ ಕಾಣಲಿಲ್ಲ. ಹೀಗಾಗಿ ಏಕಾಏಕಿ ತನ್ನ ಸೊಂಡಿಲನ್ನು ಎತ್ತಿ ದಾಳಿಗೆ ಮುಂದಾಗಿದೆ. ಇದನ್ನು ಕಂಡ ಆ ವ್ಯಕ್ತಿಯು ಹೌಹಾರಿದ್ದು, ಅಲ್ಲಿಂದ ಕಾಲ್ಕಿತ್ತಿದ್ದಾನೆ. ಕಾಡಿನಲ್ಲಿ ಓಡೋಡಿಕೊಂಡು ತನ್ನ ವಾಹನದತ್ತ ಬರಲು ಪ್ರಯತ್ನಿಸಿದ್ದಾನೆ.
ಆನೆ ದಾಳಿಯಿಂದ ಪಾರಾಗಿದ್ದು ಹೇಗೆಂಬ ವಿಡಿಯೊ ಇಲ್ಲಿದೆ!
ಆದರೆ, ಈ ವೇಳೆ ಆತ ತನ್ನ ಪ್ಯಾಂಟನ್ನೂ ಸಹ ಸರಿಯಾಗಿ ಹಾಕಿಕೊಳ್ಳದೇ ಇದ್ದಿದ್ದರಿಂದ ಓಡಲು ಸಹ ತೊಡಕಾಗಿದೆ. ಈ ನಡುವೆಯೂ ತನ್ನ ಎರಡೂ ಕೈಗಳಿಂದ ಪ್ಯಾಂಟನ್ನು ಹಿಡಿದುಕೊಂಡು ಬೆಲ್ಟ್ ಅನ್ನು ಸರಿಪಡಿಸುತ್ತಾ ಹಾಗೂಹೀಗೂ ರಸ್ತೆವರೆಗೆ ಓಡಿ ಬಂದಿದ್ದಾನೆ. ಆನೆ ಸಹ ಆತನನ್ನು ಅಟ್ಟಿಸಿಕೊಂಡು ಬರುತ್ತಲೇ ಇತ್ತು. ಒಂದು ಹಂತದಲ್ಲಿ ಭಯದಿಂದ ನಿತ್ರಾಣಗೊಂಡ ಆತ ಕೆಳಗೆ ಬಿದ್ದಿದ್ದಾನೆ. ಆದರೂ ಸಾವರಿಸಿಕೊಂಡು ಎದ್ದು, ಬಿದ್ದು ಓಡಿ ತನ್ನ ವಾಹನವನ್ನು ಸೇರಿಕೊಂಡಿದ್ದಾನೆ.
ಈ ಎಲ್ಲ ದೃಶ್ಯಾವಳಿಗಳೂ ಪ್ರವಾಸಿಗರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ವೇಳೆ ಎಲ್ಲರೂ ಸಹ ಆ ಆನೆಯು ಆತನ ಮೇಲೆ ದಾಳಿ ಮಾಡಿಯೇ ಬಿಟ್ಟಿತು ಎಂದು ಅಂದುಕೊಂಡಿದ್ದಾರೆ. ಹೇಗಾದರೂ ಸರಿ, ಆತ ಪಾರಾಗಿ ಬರಲಿ ಎಂದು ಮನಸ್ಸಿನಲ್ಲೇ ಪ್ರಾರ್ಥನೆ ಮಾಡಿದ್ದಾರೆ. ಕೊನೆಗೂ ಆತ ಪಾರಾಗಿದ್ದರಿಂದ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಈ ವಿಡಿಯೊ ಈಗ ವೈರಲ್ ಆಗಿದೆ.
ಇದನ್ನೂ ಓದಿ: Lok Sabha Election 2024: ನನಗೆ ರಾಜಕಾರಣ ಸಾಕಾಗಿದೆ; ಮತ್ತೆ ಸ್ಪರ್ಧಿಸೋದು ಡೌಟೆಂದ ಡಿ.ಕೆ. ಸುರೇಶ್
ಮರಿ ಆನೆಗಳೂ ಇದ್ದವು
ಈ ವ್ಯಕ್ತಿಯನ್ನು ಅಟ್ಟಿಸಿಕೊಂಡು ಬಂದ ಆನೆ ಇರುವ ಕಡೆ ಮರಿ ಆನೆಗಳ ಸಹಿತ ಕೆಲವು ಆನೆಗಳು ಇದ್ದವು. ಮರಿಯಾನೆಗಳನ್ನು ರಕ್ಷಣೆ ಮಾಡುವ ಸಂಬಂಧ ಆನೆಗಳು ಹೀಗೆ ಅನಾಮಿಕ ವ್ಯಕ್ತಿಗಳ ಮೇಲೆ ದಾಳಿ ಮಾಡುತ್ತವೆ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.