Site icon Vistara News

Elephant death: ಆಹಾರ ಅರಸಿ ಬಂದ ಬಲಿಷ್ಠ ಆನೆ ಅಸಹಾಯಕವಾಗಿ ಬಿದ್ದು ಸಾವು

Elephant death

ಮೈಸೂರು: ‌ಗುರುವಾರ ಬೆಳಗ್ಗೆ ಎಚ್.ಡಿ.ಕೋಟೆ ತಾಲೂಕಿನ ಡಿ.ಬಿ.ಕುಪ್ಪೆ ಬಳಿ ಮೈಸೂರು- ಮಾನಂದವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆಯೊಂದು ಕುಳಿತುಕೊಂಡಂತೆ ಕಂಡಿತ್ತು. ರಸ್ತೆ ಬದಿಯಲ್ಲಿ ಈ ಆನೆಯನ್ನು ಕಂಡು ಕೆಲವರು ಹಾಗೇ ಮುಂದೆ ಸಾಗಿದ್ದರು. ಕೆಲವರು ಭಯದಿಂದ ದಿಕ್ಕು ಬದಲಿಸಿದರು. ಆದರೆ, ಎಷ್ಟು ಹೊತ್ತಾದರೂ ಆನೆ ಏಳುವ ಸೂಚನೆ ಕಾಣದೆ ಹೋದಾಗ ಹತ್ತಿರ ಹೋಗಿ ಗಮನಿಸಿದರು. ಜತೆಗೆ ಅರಣ್ಯ ಇಲಾಖೆ (Forest department) ಸಿಬ್ಬಂದಿಗೂ ತಿಳಿಸಿದರು. ಅವರೆಲ್ಲರೂ ಬಂದು ನೋಡಿದಾಗ ಆನೆ ಹೆಣವಾಗಿ ಬಿದ್ದಿತ್ತು (Elephant death).

ನೋಡಲು ಬಲಿಷ್ಠವಾಗಿರುವ, ಬೃಹತ್‌ ಗಾತ್ರದ ಈ ಆನೆ ಅತ್ಯಂತ ಅಸಹಾಯಕವಾಗಿ ಬಿದ್ದು ಪ್ರಾಣ ಕಳೆದುಕೊಂಡ ಈ ಘಟನೆಗೆ ಕಾರಣವಾಗಿರುವುದು ಕರೆಂಟ್‌ ಶಾಕ್‌. ಆದರೆ, ಇದರಲ್ಲೂ ಅಕ್ರಮವಿದೆ. ಸಾಮಾನ್ಯವಾಗಿ ಇಲ್ಲಿ ವಿದ್ಯುತ್‌ ಬೇಲಿಗಳಿಗೆ ಸೋಲಾರ್‌ ಪವರ್‌ ಕನೆಕ್ಟ್‌ (Solar power connection) ಮಾಡುತ್ತಾರೆ. ಹೀಗೆ ಮಾಡಿದರೆ ಇದನ್ನು ಸ್ಪರ್ಶಿಸುವ ಪ್ರಾಣಿಗಳಿಗೆ ಸಣ್ಣ ಶಾಕ್‌ ಆಗಿ ಅವು ಅಲ್ಲಿಂದ ಕಾಲ್ಕೀಳುತ್ತವೆ. ಆದರೆ, ಇಲ್ಲಿನ ಜಮೀನು ಮಾಲೀಕ ಮಾತ್ರ ಹೆಸರಿಗೆ ಸೋಲಾರ್‌ ಎಂದಿದ್ದ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್‌ ಸಂಪರ್ಕವನ್ನೇ (Illicit power connection) ಕೊಟ್ಟು ಬಿಟ್ಟಿದ್ದ. ಇದರಿಂದ ಅದನ್ನು ಸ್ಪರ್ಶಿಸಿದ ಆನೆ ಪ್ರಾಣವನ್ನೇ ಕಳೆದುಕೊಂಡಿದೆ.

ಅಸಹಾಯಕವಾಗಿ ಬಿದ್ದಿರುವ ಆನೆ

ಹುಣಸೂರು ವನ್ಯಜೀವಿ ವಿಭಾಗ ವ್ಯಾಪ್ತಿಯ ಎಚ್‌ಡಿಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ವಿಭಾಗದಲ್ಲಿ ಈ ಆನೆ ಕೆಲವು ದಿನಗಳಿಂದ ಓಡಾಡುತ್ತಿತ್ತು. ಆಹಾರವನ್ನು ಅರಸಿಕೊಂಡು ಅದು ಮಚ್ಚೂರು ಹಾಗೂ ಆನೆಮಾಳ ಗ್ರಾಮದಲ್ಲಿರುವ ತೋಟವೊಂದರ ಬಳಿ ಆಗಾಗ ಕಾಣಿಸಿಕೊಂಡಿದ್ದನ್ನು ಅರಣ್ಯ ಇಲಾಖೆಯವರಿಗೂ ತಿಳಿಸಲಾಗಿತ್ತು.

ಬಹುಶಃ ಗುರುವಾರ ಅದು ಮತ್ತೆ ಆ ದಾರಿಯಾಗಿ ಬಂದು ಆಹಾರಕ್ಕಾಗಿ ಬೇಲಿ ದಾಟಲು ಮುಂದಾಗಿದೆ ಅನಿಸುತ್ತದೆ. ಆಗ ವಿದ್ಯುತ್‌ ಶಾಕ್‌ ಬಡಿದು ಅಲ್ಲೇ ಕುಕ್ಕರುಗಾಲಿನಲ್ಲಿ ಬಿದ್ದಿದೆ. ಕುಳಿತಂತಿದ್ದ ಸ್ಥಿತಿಯಲ್ಲೇ ಕಣ್ಮುಚ್ಚಿದೆ.

ಅಂದ ಹಾಗೆ, ಈ ಆನೆ ದಾಟಲು ಹೊರಟಿದ್ದು ಉದಯ್‌ ಥಾಮಸ್‌ ಎನ್ನುವವರ ತೋಟವನ್ನು. ಆಗ ಅಲ್ಲಿ ಅಳವಡಿಸಿದ್ದ ಸೋಲಾರ್‌ ತಂತಿಯ ಶಾಕ್‌ ಆನೆಯನ್ನು ಕೊಂದು ಹಾಕಿದೆ. ಸುಮಾರು 30 ವರ್ಷದ ಈ ಆನೆ ಸತ್ತಿರುವುದು ತಿಳಿದು ಸ್ಥಳಕ್ಕೆ ಸಿಎಫ್​, ಎಸಿಎಫ್​, ಆರ್​ಎಫ್​ಒ, ಪಶು ವೈದ್ಯಾಧಿಕಾರಿಗಳು, ಸೆಸ್ಕ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಉದಯ್ ಬಿನ್ ಥಾಮಸ್ ಎಂಬಾತ ತನ್ನ ಜಮೀನಿಗೆ ಅಳವಡಿಸಿದ್ದ ಸೋಲಾರ್ ತಂತಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ. ವಿದ್ಯುತ್ ಸ್ಪರ್ಶದಿಂದ ಕಾಡಾನೆ ಮೃತಪಟ್ಟಿರುವುದು ಸ್ಥಳ ಪರಿಶೀಲನೆ ವೇಳೆ ತಿಳಿದು ಬಂದಿದೆ. ಕಾಡಾನೆಯ ಮರಣೋತ್ತರ ಪರೀಕ್ಷೆಯಲ್ಲೂ ಇದೇ ವರದಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಉದಯ್ ಮತ್ತು ಕುಟುಂಬಸ್ಥರು ತಲೆಮರೆಸಿಕೊಂಡಿದ್ದು, ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Elephant death : ಲಾರಿ ಡಿಕ್ಕಿ ಹೊಡೆದು ಮೂರು ಕಾಡಾನೆಗಳ ದಾರುಣ ಸಾವು

Exit mobile version