ಹಾಸನ: ಕಾಡಿನ ಪಕ್ಕದ ಗದ್ದೆಗಳಿಗೆ ಆನೆಗಳು ದಾಳಿ (Elephant Menace) ಮಾಡುವುದು ಸಾಮಾನ್ಯವಾಗಿದೆ. ಕಾಡಿನ ದಾರಿಯಲ್ಲಿ ಸಾಗುವವರನ್ನು ಅಟ್ಟಾಡಿಸುವುದು, ಕೊಂದೇ ಹಾಕಿದ ಹಲವು ಘಟನೆಗಳು ನಡೆದಿವೆ. ರಸ್ತೆಯಲ್ಲಿ ವಾಹನಗಳಲ್ಲಿ ಸಾಗುವವರನ್ನೂ ಆನೆಗಳು ಬೆನ್ನಟ್ಟಿ ಭಯಗೊಳಿಸುತ್ತಿವೆ. ಕೆಲವೊಮ್ಮೆ ಮನೆ ಮುಂದೆ ಬಂದು ಆಹಾರ ಕೊಡಿ ಎಂದು ಕೇಳುವ ಧಾಟಿಯಲ್ಲಿ ವರ್ತಿಸಿದ್ದೂ ಇದೆ. ಆದರೆ, ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಆನೆಯೊಂದು ಸೊಸೈಟಿಯ ಪಡಿತರ ಅಕ್ಕಿಯನ್ನು ಇಡುವ ಕೋಣೆಗೇ ನುಗ್ಗಿದೆ!
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಅನುಘಟ್ಟ ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನುಗ್ಗಿದ ಆನೆ ಅಲ್ಲಿದ್ದ ಅಕ್ಕಿಯನ್ನು ತಿಂದು ಹೋಗಿದೆ.
ಬುಧವಾರ ಮುಂಜಾನೆ 4.15ರ ಸಮಯದಲ್ಲಿ ಗ್ರಾಮಕ್ಕೆ ಬಂದಿರುವ ಕಾಡಾನೆ ಸಹಕಾರ ಸಂಘದ ಹಿಂದಿನ ಮತ್ತು ಮುಂದಿನ ಎರಡೂ ಬಾಗಿಲನ್ನು ಒಡೆದು ಅಕ್ಕಿ ತಿಂದಿದೆ. ರೆಡಿಯೋ ಕಾಲರ್ ಅಳವಡಿಸಿರುವ ಕಾಡಾನೆ ಹದಿಮೂರು ಚೀಲ ಅಕ್ಕಿಯನ್ನು ಎಳೆದಾಡಿದ್ದು ಸುಮಾರು ನಾಲ್ಕು ಚೀಲ ಅಕ್ಕಿಯನ್ನು ತಿಂದು ಹೋಗಿದೆ.
ಮಂಗಳವಾರವಷ್ಟೇ ಅಕ್ಕಿ ಬಂದಿತ್ತು
ಸೊಸೈಟಿಯಲ್ಲಿ ಪಡಿತರ ವಿತರಣೆಗಾಗಿ ಅಕ್ಕಿ ಸಂಗ್ರಹಿಸಲಾಗಿತ್ತು. ಮಂಗಳವಾರವಷ್ಟೇ ಅಕ್ಕಿ ಲೋಡ್ ಬಂದಿತ್ತು. ಬುಧವಾರ ಬೆಳಗ್ಗೆ ಸೊಸೈಟಿಯ ಕಾರ್ಯದರ್ಶಿ ಸತೀಶ್ ಎಂಬುವವರು ಕಚೇರಿಗೆ ಬಂದಾಗ ಎರಡೂ ಕಡೆಯ ಬಾಗಿಲು ಮುರಿದಿದ್ದು ಕಂಡುಬಂತು. ಕೂಡಲೇ ಸಿಸಿಟಿವಿ ಪರಿಶೀಲಿಸಿದಾಗ ಕಾಡಾನೆ ದಾಂಧಲೆ ಬೆಳಕಿಗೆ ಬಂತು.
ಇದೇನೂ ಮೊದಲಲ್ಲ, ಹಿಂದೆಯೂ ಬಂದಿತ್ತು
ಕಾಡಿನ ಅಂಚಿನಲ್ಲಿರುವ ಅನುಘಟ್ಟ ಗ್ರಾಮದ ಸೊಸೈಟಿಗೆ ಆನೆ ಬರುತ್ತಿರುವುದು ಇದು ಮೊದಲೇನಲ್ಲ. ಹತ್ತು ತಿಂಗಳ ಹಿಂದೆ (22-4-2022) ಆನೆಯೊಂದು ಇದೇ ಸೊಸೈಟಿ ಬಾಗಿಲು ಮುರಿದು ನಾಲ್ಕು ಕ್ವಿಂಟಾಲ್ ಅಕ್ಕಿ ತಿಂದು ಹೋಗಿತ್ತು! ಇದೀಗ ಅದೇ ಸೊಸೈಟಿಗೆ ಬಂದಿರುವ ಕಾಡಾನೆ ಬಾಗಿಲು ಮುರಿದು ಅಕ್ಕಿ ತಿನ್ನುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.