ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಹಲವು ಭಾಗಗಳಲ್ಲಿ ಆನೆಗಳ ಓಡಾಟ (Elephant attack) ವಿಪರೀತವಾಗಿದೆ. ಹಿಂದೆಲ್ಲ ಒಂದು ಆನೆ ಬಂತು ಎಂದರೆ ಜನ ಭಯಗೊಂಡು ಎಲ್ಲೆಲ್ಲಾ ಓಡಿ ಹೋಗುತ್ತಿದ್ದರು. ಆದರೆ, ಈಗ ಜನರೇ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡಂತೆ ಕಾಣಿಸುತ್ತಿದೆ. ಆನೆ ಬರುತ್ತಿದೆ ಎಂದರೆ ತಾವೇ ಬದಿಗೆ ಸರಿದು ನಿಲ್ಲುತ್ತಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದರೆ ವಾಹನಗಳನ್ನು ಅದರ ಹಿಂದೆಯೇ ನಿಧಾನವಾಗಿ ಚಲಾಯಿಸುತ್ತಿದ್ದಾರೆ. ಆನೆಗಳು ಕೂಡಾ ತಮ್ಮ ಪಾಡಿಗೆ ತಾವು ತೋಟಗಳ ಗೇಟ್ ತೆಗೆದುಕೊಂಡು ಯಾವುದೇ ಅಬ್ಬರವಿಲ್ಲದೆ, ಗಲಾಟೆ ಇಲ್ಲದೆ ತಣ್ಣಗೆ ಸಾಗುತ್ತಿರುತ್ತದೆ!
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ನಡೆದ ಘಟನೆಯೊಂದರ ವಿಡಿಯೊ ಈಗ ಗಮನ ಸೆಳೆದಿದೆ. ಇಲ್ಲಿ ಒಂಟಿ ಸಲಗವೊಂದು ರಸ್ತೆಯಲ್ಲಿ ರಾಜಾರೋಷದಿಂದ ಸಾಗುತ್ತಿದೆ. ಇದು ಬರುತ್ತಿದ್ದಂತೆ ಸವಾರರು ವಾಹನಗಳನ್ನು ಬದಿಗೆ ನಿಲ್ಲಿಸಿ ದಾರಿ ಮಾಡಿಕೊಡುತ್ತಿದ್ದಾರೆ.
ಇದೇನೂ ಹೊಸ ಘಟನೆಯಲ್ಲ. ಆಗಾಗ ಇಂಥದ್ದು ನಡೆಯುತ್ತಾ ಇರುತ್ತದೆ. ಈ ಭಾಗದಲ್ಲಿ ಆಗಾಗ ಸಂಚಾರ ಹೊರಡುವ ಈ ಆನೆಗೆ ಜನರೇ ಭೀಮ ಎಂದು ಹೆಸರಿಟ್ಟಿದ್ದಾರೆ. ಒಂಟಿ ಸಲಗನೇ ಆದರೂ ಸ್ವಲ್ಪ ಮಟ್ಟಿಗೆ ಎಲ್ಲರ ಜತೆ ಹೊಂದಿಕೊಳ್ಳುವ ಸ್ವಭಾವ ಇರುವ ಈ ಆನೆ ಜನರನ್ನು ಹೆದರಿಸಿದ ಉದಾಹರಣೆ ಕಡಿಮೆ ಅನಿಸುತ್ತದೆ.
ಕಾಫಿ ತೋಟ, ಮನೆಗಳ ಗೇಟ್ ಮೂಲಕವೇ ಸಂಚರಿಸುವ ಭೀಮ ಕಾಫಿ ತೋಟದ ಗೇಟನ್ನು ತಾನೇ ತೆರೆದು ರಸ್ತೆ ಪ್ರವೇಶಿಸುವ ದೃಶ್ಯ ಗಮನ ಸೆಳೆದಿದೆ. ಜನನಿಬಿಡ ಪ್ರದೇಶ, ರಸ್ತೆಗಳಲ್ಲೇ ಹೆಚ್ಚಾಗಿ ಕಾಣಸಿಕೊಳ್ಳುವ ಭೀಮ ಇದುವರೆಗೂ ಯಾವುದೇ ರೀತಿಯಲ್ಲೂ ಪ್ರಾಣ ಹಾನಿ ಮಾಡಿಲ್ಲ.
ಹಾಗಂತ ಈ ಆನೆಗಳು ಯಾವಾಗ ಹೇಗೆ ಇರುತ್ತವೆ, ಒಂಟಿಯಾಗಿ ಎದುರಾದರೆ ದಾಳಿ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ. ಯಾವುದೋ ಕಾರಣಕ್ಕೆ ಕೆರಳಿದ್ದರೆ, ಮನೆಗಳ ಮೇಲೆ, ಅಂಗಡಿಗಳ ಮೇಲೆ ದಾಳಿ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ ಎಂದೆಲ್ಲ ಜನರು ಚಿಂತೆ ಮಾಡುತ್ತಿದ್ದಾರೆ.
ಇದನ್ನೂ ಓದಿ | Elephant trapped | ಗುಂಡ್ಲುಪೇಟೆ ಭಾಗದಲ್ಲಿ ಉಪಟಳ ನೀಡಿ ಜನರ ನಿದ್ದೆಗೆಡಿಸುತ್ತಿದ್ದ ಕಾಡಾನೆ ಸೆರೆ