ಚಾಮರಾಜನಗರ: ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ (Animal attack) ವಿಪರೀತವಾಗಿದೆ. ಚಾ.ನಗರದ ಗುಂಡ್ಲುಪೇಟೆ ತಾಲೂಕಿನ ಗೋಪಾಲಪುರದಲ್ಲಿ ಮನೆಯ ಸಮೀಪದ ಕೊಟ್ಟಿಗೆಗೆ ಹಾಲು ಕರೆಯಲು ಹೋಗುತ್ತಿದ್ದ ರೈತರೊಬ್ಬರ ಮೇಲೆ ಆನೆ ದಾಳಿ ಮಾಡಿದೆ. ರೈತ ಮಹದೇವಪ್ಪ ಅವರ ಮೇಲೆ ದಾಳಿ ನಡೆದಿದ್ದು, ಅವರ ಎರಡೂ ಕಾಲುಗಳಿಗೆ ಗಂಭೀರ ಗಾಯವಾಗಿದೆ.
ಅವರು ಬೆಳಗ್ಗೆ ಎದ್ದು ಜಮೀನಿನಲ್ಲಿ ಕಟ್ಟಿದ್ದ ಆಕಳುಗಳ ಹಾಲು ಕರೆಯಲು ಹೋಗುತ್ತಿದ್ದಾಗ ದಾರಿ ಮಧ್ಯೆ ನುಗ್ಗಿ ಬಂದ ಒಂಟಿ ಸಲಗ ಅವರ ಮೇಲೆ ಏಕಾಏಕಿ ದಾಳಿ ಮಾಡಿದೆ. ಆದರೆ, ಅದೃಷ್ಟಕ್ಕೆ ಸಣ್ಣಗೆ ದಾಳಿ ಮಾಡಿ ಅಲ್ಲಿಂದ ಹೋಗಿದೆ. ಮಹದೇವಪ್ಪ ಅವರ ಕಾಲಿನ ಮೇಲೆ ಅದು ಕಾಲು ಇಟ್ಟಿದೆ. ಬೇರೆ ಕಡೆ ಹೆಚ್ಚು ಅಪಾಯ ಮಾಡಿಲ್ಲ.
ಇದು ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಸೇರಿದ ಜಮೀನು ಎಂದು ಹೇಳಲಾಗಿದೆ. ಮಹದೇವಪ್ಪ ಅವರನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ. ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶಾಂತವೇರಿ ಘಾಟಿಯಲ್ಲೂ ಆನೆ ಸಂಚಾರ
ಚಿಕ್ಕಮಗಳೂರು: ಜಿಲ್ಲೆಯ ಶಾಂತವೇರಿ ಘಾಟಿಯಲ್ಲಿ ಕಾಡಾನೆ ಸಂಚಾರದಿಂದ ವಾಹನ ಸವಾರರು ಪರದಾಡುವಂತಾಗಿದೆ. ತರೀಕೆರೆ ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಶಾಂತವೇರಿ ಘಾಟ್‌ನಲ್ಲಿ ಕಳೆದೊಂದು ತಿಂಗಳಿನಿಂದ ರಾತ್ರಿ ಸಂಚಾರ ಮಾಡುತ್ತಿರುವ ಕಾಡಾನೆ ಸವಾರರಿಗೆ ಸಂಚಕಾರ ತರುವ ಅಪಾಯವಿದೆ.
ಚಿಕ್ಕಮಗಳೂರಿನಿಂದ ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಶಾಂತವೇರಿ ಘಾಟಿ ಲಿಂಗದಹಳ್ಳಿ ಅರಣ್ಯ ವಲಯ ವ್ಯಾಪ್ತಿಗೆ ಬರುತ್ತದೆ. ಕಾಡಾನೆಗಳ ಸ್ಥಳಾಂತರ ಮಾಡುವಂತೆ ವಾಹನ ಸವಾರರು ಮತ್ತು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Animal attack | ಬೈಕ್‌ನಲ್ಲಿ ಹೋಗುತ್ತಿದ್ದವರ ಮೇಲೆ ಏಕಾಏಕಿ ಕಾಡುಕೋಣ ದಾಳಿ, ಇಬ್ಬರಿಗೆ ಗಾಯ