Site icon Vistara News

Emerging Leader: ದೇಶಕ್ಕಾಗಿ 18 ಗಂಟೆ ದುಡಿಯುವ ಮೋದಿಯವರ ಕೈ ಬಲಪಡಿಸಲು ರಾಜಕಾರಣಕ್ಕೆ: ಚನ್ನಬಸವಣ್ಣ ಬಳತೆ ಮನದ ಮಾತು

Channabsava

Channabsava

ಬೆಂಗಳೂರು: ಸರ್ಕಾರಿ ಉದ್ಯೋಗವನ್ನು ತ್ಯಜಿಸಿ, ಬಾಲ್ಯದಲ್ಲಿಯೇ ಕನಸು ಕಂಡ ಸಮಾಜ ಸೇವೆಯ ಉದ್ದೇಶ ಸಾಕಾರಗೊಳಿಸಲು ರಾಜಕಾರಣದತ್ತ ಮುಖ ಮಾಡಿದವರು ಯುವ ಸಾಧಕ, ಭಾಲ್ಕಿಯ ಚನ್ನಬಸವಣ್ಣ ಕೆ ಬಳತೆ. (Channabasavanna Balte). ಎಮರ್ಜಿಂಗ್‌ ಲೀಡರ್‌ (Emerging Leader) ಕಾರ್ಯಕ್ರಮದ ಅಡಿಯಲ್ಲಿ ಅವರೊಂದಿಗೆ ವಿಸ್ತಾರ ನ್ಯೂಸ್‌ನ ಚಂದನ್‌ ಶರ್ಮಾ ನಡೆಸಿರುವ ಮಾತುಕತೆಯ ಸಾರ ಇಲ್ಲಿದೆ.

ʼʼಜೀವನದಲ್ಲಿ ನಾವು ಅಂದುಕೊಂಡಂತೆ ಯಾವುದೂ ನಡೆಯುವುದಿಲ್ಲ. ಹೀಗಾಗಿ ಬಂದದ್ದನ್ನು ಸ್ವೀಕರಿಸಿ, ಇದ್ದುದರಲ್ಲೇ ಖುಷಿ ಪಡಬೇಕು. ಈ ರೀತಿ ಆಗಬೇಕು ಎನ್ನುವ ಗುರಿ ಇರಬೇಕು. ಇದಕ್ಕಾಗಿ ನಮ್ಮ ಕೈಲಾದ ಪ್ರಯತ್ನ ಮಾಡಿ ಸುಮ್ಮನಿರಬೇಕುʼʼ ಎಂದು ಹೇಳುವ ಮೂಲಕ ಚನ್ನಬಸವಣ್ಣ ಅವರು ಮಾತು ಆರಂಭಿಸಿದರು.

ʼʼಯಾವುದೇ ಕೆಲಸ ಮೇಲಲ್ಲ, ಕೀಳಲ್ಲ. ಯಾವುದೇ ಕೆಲಸವನ್ನು ಜಬಾಬ್ದಾರಿಯಿಂದ ನಿರ್ವಹಿಸುವುದು ಮುಖ್ಯ. ಖುಷಿಯಿಂದ ಕೆಲಸ ಮಾಡಿದರೆ ಮುಖದಲ್ಲಿ ನಗು ತನ್ನಿಂದ ತಾನೇ ಹೊಮ್ಮತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

41 ವರ್ಷದ ಚನ್ನಬಸವಣ್ಣ ಅವರು ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಬಿ.ಇ ಮತ್ತು ಇಂಡಸ್ಟ್ರಿಯಲ್‌ ಸ್ಟ್ರಕ್ಚರ್‌ನಲ್ಲಿ ಎಂ.ಟೆಕ್‌ ಮಾಡಿದ್ದಾರೆ. ʼʼ2007ರಿಂದ 2017ರವರೆಗೆ ಸರ್ಕಾರಿ ಉದ್ಯೋಗ ನಿರ್ವಹಿಸಿದ್ದಾರೆ. ಬಹಳಷ್ಟು ಮಂದಿ ಸರ್ಕಾರಿ ಕೆಲಸ ಸುಲಭ ಮತ್ತು ಆರಾಮ ಎನ್ನುತ್ತಾರೆ. ಆದರೆ ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ. ಯಾರು ಸರ್ಕಾರಿ ಕೆಲಸ ದೇವರ ಕೆಲಸ ಎಂದುಕೊಳ್ಳೊತ್ತಾರೋ ಅವರು ದಿನಕ್ಕೆ 16 ಗಂಟೆ ದುಡಿದರೂ ಕಡಿಮೆಯೇ. ನಾನು ಬೆಳಗ್ಗೆ 6-7 ಗಂಟೆಗೆ ಮನೆ ಬಿಟ್ಟರೆ ಮರಳುತ್ತಿದ್ದುದು ರಾತ್ರಿ 9-10 ಗಂಟೆಗೆ. ಹೀಗಾಗಿ ಮನೆಯವರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಕೆಲಸದಿಂದ ಗುರುತಿಸಬೇಕು ಎನ್ನುವುದೇ ನನ್ನ ಗುರಿಯಾಗಿತ್ತುʼʼ ಎಂದು ಹೇಳಿದರು.

ಸರ್ಕಾರಿ ಕೆಲಸದಿಂದ ಸಮಾಜ ಸೇವೆಯತ್ತ…

ʼʼಸಮಾಜ ಸೇವೆ ಮಾಡಬೇಕು ಎನ್ನುವುದು ಬಾಲ್ಯದಲ್ಲೇ ನನ್ನೊಳಗೆ ಮೊಳೆತ ಕನಸಾಗಿತ್ತು. ನಮ್ಮ ಮನೆ ಹಳ್ಳಿಯಲ್ಲಿತ್ತು. ಸಹಜವಾಗಿ ಅಲ್ಲಿ ಜಾತಿ ವ್ಯವಸ್ಥೆಯ ಪದ್ಧತಿ ಆಚರಣೆಯಲ್ಲಿತ್ತು. ಆದರೆ ನಮ್ಮ ಮನೆಯಲ್ಲಿನ ಪರಿಸ್ಥಿತಿ ಭಿನ್ನವಾಗಿತ್ತು. ಮನೆಯವರು ಎಲ್ಲರಿಗೂ ಸ್ವಾತಂತ್ರ್ಯ ನೀಡಿದ್ದರು. ಅಪ್ಪ-ಅಮ್ಮ ನಮ್ಮ ಓರಗೆಯ ಮಕ್ಕಳನ್ನು ನಮ್ಮಂತೆಯೇ ಪರಿಗಣಿಸಿದ್ದರು. ಹೀಗಾಗಿ ಚಿಕ್ಕಂದಿನಿಂದಲೇ ಇತರರಿಗೆ ಸಹಾಯ ಮಾಡಬೇಕು ಎನ್ನುವ ಮನೋಭಾವ ಮೂಡಿತ್ತು.
ಇದಕ್ಕೊಂದು ಉದಾಹರಣೆ ಕೊಡುತ್ತೇನೆ. ನಾನಾಗ 10ನೇ ತರಗತಿಯಲ್ಲಿದ್ದೆ. ನನ್ನ ಸ್ನೇಹಿತ ಮನೋಹರ ಅಂತಿದ್ದ. ಆತನ ಬಳಿ 10ನೇ ತರಗತಿಯ ಪರೀಕ್ಷೆಯ ಫೀಸ್‌ ಕಟ್ಟಲು ದುಡ್ಡಿರಲಿಲ್ಲ. ಇದನ್ನು ನಾನು ತಂದೆಗೆ ತಿಳಿಸಿ ಫೀಸ್‌ಗೆ ಹಣ ಕೊಡುವಂತೆ ಮನವಿ ಮಾಡಿದ್ದೆ. ಆಗ ತಂದೆ, ಶಿಕ್ಷಣದ ಉದ್ದೇಶಕ್ಕಾದರೆ ಮನೋಹರ್‌ನಂತಹ 10 ಮಂದಿಗೆ ನೆರವು ನೀಡುತ್ತೇನೆ ಎಂದು ಸಹಾಯ ಮಾಡಿದ್ದರು. ಇನ್ನೊಂದು ಪ್ರಸಂಗವನ್ನೂ ಹೇಳಬೇಕು. ಅದು ನಾನು 3ನೇ ತರಗತಿಯಲ್ಲಿದ್ದಾಗ ನಡೆದ ಘಟನೆ. ಆಗ ಪಾರ್ಲೆಜಿ ಬಿಸ್ಕಟ್‌ ಬೆಲೆ 2 ರೂಪಾಯಿ. ತಂದೆ 20 ರೂ. ನೋಟು ನೀಡಿ 2 ಬಿಸ್ಕೆಟ್‌ ಪ್ಯಾಕ್‌ ತರುವಂತೆ ಹೇಳಿದ್ದರು. ಅಂಗಡಿಯವನು ನಾನು 50 ರೂ. ನೋಟು ನೀಡಿದ್ದೆಂದು ತಪ್ಪಾಗಿ ಅರ್ಥೈಸಿ 46 ರೂ. ಚಿಲ್ಲರೆ ನೀಡಿದ್ದ. ನಾನು ಖುಷಿಯಲ್ಲಿ ಮನೆಗೆ ಬಂದೆ. ತಂದೆಗೆ ವಿಷಯ ತಿಳಿಸಿದೆ. ಆಗ ಅವರು, ಇದು ತಪ್ಪು. ಇಂತಹ ಹಣವನ್ನು ನಾವು ತಗೋಬಾರದು. ವಾಪಸ್‌ ಕೊಟ್ಟು ಬಾ ಎಂದು ಅಂಗಡಿಗೆ ಕಳುಹಿಸಿದರು. ಇದು ನನ್ನ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತ್ತುʼʼ.

ʼʼಇನ್ನು ಆಗೆಲ್ಲ ಯಾವುದೇ ವಸ್ತು ಕೊಂಡುಕೊಳ್ಳಬೇಕಿದ್ದರೆ‍ ತಂದೆ ನೇರವಾಗಿ ನನ್ನ ಕೈಗೆ ಹಣ ಕೊಡುತ್ತಿರಲಿಲ್ಲ. ಬೇರೆಯವರಿಗೆ ಹಣ ಕೊಟ್ಟು ತರಿಸಿಕೊಡುತ್ತಿದ್ದರು. ಹೀಗೆ ಚಿಕ್ಕಂದಿನಿಂದಲೇ ತಂದೆ ಶಿಸ್ತು ಬೆಳೆಸಿದ್ದರು. ಕೃಷಿಕರಾಗಿದ್ದ ಅವರಿಗೆ ಎಪಿಎಂಸಿಯಲ್ಲಿ ಅಂಗಡಿಯೂ ಇತ್ತು. ಕಾಶೆಪ್ಪ ಬಳತೆ ಅವರ ಹೆಸರು. ಕೊಟ್ಟ ಮಾತನ್ನು ಯಾವ ಕಾರಣಕ್ಕೂ ಅವರು ತಪ್ಪಿಸುವುದಿಲ್ಲ ಎಂದೇ ಜನರು ಮಾತನಾಡಿಕೊಳ್ಳುತ್ತಿದ್ದರು. ಅಷ್ಟು ಶಿಸ್ತುಬದ್ಧ ಜೀವನ ಅವರದ್ದಾಗಿತ್ತು. ಈಗಲೂ ಅದನ್ನು ಹಲವು ಮಂದಿ ನೆನಪಿಸಿಕೊಳ್ಳುತ್ತಾರೆ. ಜತೆಗೆ ನಾನು ತಂದೆಯ ಹಾದಿಯಲ್ಲೇ ನಡೆಯುತ್ತಿದ್ದೇನೆ. ನೀನೂ ಕೊಟ್ಟ ಮಾತನ್ನು ಎಂದಿಗೂ ತಪ್ಪುವುದಿಲ್ಲ ಎಂದು ಸ್ನೇಹಿತರು ಹೇಳುತ್ತಾರೆʼʼ ಎಂದು ಚನ್ನಬಸವಣ್ಣ ಹೆಮ್ಮೆಯಿಂದ ಹೇಳಿದರು. ʼʼತಂದೆ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದರು. ಆತ ಎಷ್ಟೇ ಕೆಳ ಹಂತದಲ್ಲಿರಲಿ ಆತನ ಜತೆಗೆ ಕುಳಿತು ಊಟ ಮಾಡುತ್ತಿದ್ದರುʼʼ ಎಂದರು.

ಸಾಧನೆಗಳ ವಿವರ

ʼʼಸಮಾಜ ಸೇವೆಯನ್ನು ಇನ್ನೊಬ್ಬರ ಕಣ್ಣಿನಲ್ಲಿ ಹೀರೋ ಆಗಬೇಕೆಂಬ ಉದ್ದೇಶದಿಂದ ಮಾಡಬಾರದು. ನಮ್ಮ ಮನಸ್ಸಿನ ಸಮಾಧಾನಕ್ಕಾಗಿ ಮಾಡಬೇಕು. ಇವತ್ತಿನ ಸಮಾಜ ಕೇವಲ ಆರ್ಥಿಕ ಭದ್ರತೆಯತ್ತಲೇ ಗಮನ ಕೇಂದ್ರೀಕರಿಸುತ್ತಿದೆ. ಧರ್ಮ, ಪ್ರೀತಿ, ನಂಬಿಕೆ ಯಾರಿಗೂ ಬೇಕಾಗಿಲ್ಲ. ಹೀಗಾಗಿ ಜನರ ಮನಸ್ಥಿತಿಯನ್ನ ಬದಲಾಯಿಸಲು ನಿಯಮಿತವಾಗಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಗುರುಗಳಾದ ಸಿದ್ದೇಶ್ವರ ಅಪ್ಪುಗೋಳ ಅವರ ಬಳಿ ಚರ್ಚೆ ನಡೆಸಿದ್ದೆ. ಅದಕ್ಕೆ ಅವರು, ʼನೀವು ಯಾವುದೇ ಕಾರ್ಯಕ್ರಮ ಮಾಡಿ. ಆದರೆ ಸಮಾಜ ಪರಿವರ್ತನೆಯಾಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡು ಮಾಡಬೇಡಿ. ನಿಮ್ಮ ಮನಸ್ಸಿಗೆ ಆನಂದ ಸಿಗುವಂತಿದ್ದರೆ ಮಾಡಿʼ ಎಂದರು. ಇದು ಸತ್ಯ ಎನಿಸಿತು ನನಗೆ. ಹೀಗಾಗಿ ಸಮಾಜ ಸೇವೆಯ ಚಿಂತನೆ ಮನಸ್ಸಿನ ಒಳಗಿನಿಂದ ಬರಬೇಕುʼʼ ಎಂದು ಹೇಳಿದರು.

ಚನ್ನಬಸವಣ್ಣ ಸುಮಾರು ಹನ್ನೆರಡು ಸಾವಿರ ವಿದ್ಯಾರ್ಥಿಗಳಿರುವ ಭಾಲ್ಕಿಯ ಹಿರೇಮಠ ಸಂಸ್ಥಾನ ವಿದ್ಯಾಪೀಠದ ಟ್ರಸ್ಟಿ, ಬಸವ ಕಲ್ಯಾಣದ ಗುರುದೇವ ಆಶ್ರಮದ ಟ್ರಸ್ಟಿ, ವಿಜಯಪುರರ ಜ್ಞಾನಯೋಗ ಆಶ್ರಮದ ಆಜೀವ ಸದಸ್ಯ, ಭಾಲ್ಕಿಯ ಜನಸೇವಾ ಟ್ರಸ್ಟ್‌ನ ಅಧ್ಯಕ್ಷ, ಬಸವ ಕಲ್ಯಾಣ ಅನುಭವ ಮಂಟಪ ಕ್ಷೇತ್ರ ಅಭಿವೃದ್ಧಿ ಸಮಿತಿಯ ಸದಸ್ಯ, ಕಾಖಂಡಕಿಯ ಸತ್ಕಾಯಕ ಫೌಂಡೇಷನ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ವಿವಿಧ ಕಡೆಗಳಲ್ಲಿ ಸಕ್ರಿಯರಾಗಿರುವ ಅವರು ಆರೋಗ್ಯ, ಯೋಗ ಶಿಬಿರ ಆಯೋಜಿಸುತ್ತಿದ್ದಾರೆ.

ರಾಜಕಾರಣದತ್ತ…

ಇನ್ನಷ್ಟು ಸಮಾಜ ಸೇವೆ ಮಾಡುವ ಉದ್ದೇಶದಿಂದ ರಾಜಕಾರಣದತ್ತ ಹೆಜ್ಜೆ ಹಾಕಲು ಚನ್ನಬಸವಣ್ಣ ಮನಸ್ಸು ಮಾಡಿದ್ದಾರೆ. ಈ ಬಗ್ಗೆ ಅವರು ಹೇಳುವುದು ಹೀಗೆ: ʼʼಪ್ರಧಾನಮಂತ್ರಿ ನರೇಂದ್ರ ಮೋದಿ ಈ ವಯಸ್ಸಿನಲ್ಲಿಯೂ ಸುಮಾರು 18 ಗಂಟೆ ಕೆಲಸ ಮಾಡುತ್ತಾರೆ. ಮುಖ್ಯವಾಗಿ ಈ ವಿಚಾರದಿಂದ ನಾನು ಪ್ರಭಾವಿತನಾಗಿದ್ದೇನೆ. ನಮ್ಮ ದೇಶವನ್ನು ಹಂತಹಂತವಾಗಿ ಅಭಿವೃದ್ಧಿಪಡಿಸುವತ್ತ ಅವರು ಗಮನ ಹರಿಸಿದ್ದಾರೆ. ಪ್ರತಿಯೊಬ್ಬ ಭಾರತೀಯನಿಗೆ ಯೋಜನೆ ತಲುಪಲು ಶ್ರಮಿಸುತ್ತಿದ್ದಾರೆ. ಪ್ರತಿಯೊಬ್ಬ ನಾಯಕನೂ ತಮ್ಮ ತಮ್ಮ ಜಿಲ್ಲೆಯನ್ನು ಅಭಿವೃದ್ಧಿಪಡಿಬೇಕು ಎನ್ನುವ ಯೋಜನೆ ಹಾಕಿಕೊಳ್ಳಬೇಕು. ಆಗ ದೇಶವೇ ಉದ್ಧಾರವಾಗುತ್ತದೆ. ನಮ್ಮ ಕಾಯಕಯೋಗಿ ಬಸವಣ್ಣನ ಬಗ್ಗೆ ಸೀಮಿತ ಜನಕ್ಕೆ ಮಾತ್ರ ತಿಳಿದಿದೆ. ನನ್ನ ದೃಷ್ಟಿಕೋನದಲ್ಲಿ ಬಸವ ಕಲ್ಯಾಣದಂತಹ ಸಂಸ್ಕೃತಿಯನ್ನು ಎಲ್ಲೆಡೆಗೆ ತಲುಪಿಸುವ ಕೆಲಸ ಆಗಬೇಕು. ಜಗತ್ತಿನ ಮೊದಲ ಪಾರ್ಲಿಮೆಂಟ್‌ ಎಂದು ಕರೆಸಿಕೊಳ್ಳುವ ಇದು ಎಲ್ಲರಿಗೂ ತಿಳಿಯಬೇಕು. ಇಂತಹ ಸಾಕಷ್ಟು ಕಾರ್ಯ ನಡೆಸಬೇಕು. ಉದಾಹರಣೆಗೆ ನಮ್ಮ ಬೀದರ್‌ನಲ್ಲಿರುವ ಬಿದರಿ ಕಲೆಯನ್ನು ಎಲ್ಲೆಡೆ ಪಸರಿಸಬೇಕುʼʼ.

ಮೋದಿಯವರ ಕೈ ಬಲಪಡಿಸಬೇಕು…

ʼʼಒಂದು ದಿನವೂ ರಜೆ ಪಡೆಯದೆ ದೇಶಕ್ಕಾಗಿ ದುಡಿಯುವ ಮೋದಿ ಅವರ ಕೈ ಬಲಪಡಿಸಲು ನಾನೇನು ಮಾಡಬೇಕು ಎನ್ನುವುದರ ಬಗ್ಗೆ ಚಿಂತಿಸುತ್ತಿದ್ದೇನೆ. ನನ್ನನ್ನು ಜನರೇ ರಾಜಕಾರಣಿಯಾಗಿಸುತ್ತಿದ್ದಾರೆ. ಜನರ ಸಮಸ್ಯೆಯನ್ನು ಹೊರ ಜಗತ್ತಿಗೆ ತಿಳಿಸಲು ರಾಜಕಾರಣಕ್ಕೆ ಬರಬೇಕು ಎನ್ನುತ್ತಿದ್ದಾರೆ. ಕ್ಯಾಶ್‌ಲೆಸ್‌ ಮತ್ತು ಕಾಸ್ಟ್‌ಲೆಸ್‌ ರಾಜಕಾರಣ ನನ್ನ ಉದ್ದೇಶ. ಶಿಕ್ಷಣದಿಂದಲೇ ಇದು ಸಾಧ್ಯ ಎನ್ನುವುದು ನನ್ನ ಅಭಿಮತ. ದುಡ್ಡು ಇರುವವರು ಮೆರೆಯುತ್ತಾರೆ ಎನ್ನುವ ಮನಸ್ಥಿತಿ ಬದಲಾಗಬೇಕು. ರಾಜಕಾರಣ ಕಟ್ಟೊಗಿದೆ ಎಂದು ದೂರುವ ಬದಲು ನಮ್ಮಂತಹ ಯುವ ಜನತೆ ಇದನ್ನು ಸರಿಪಡಿಸಲು ಮುಂದಾಗಬೇಕುʼʼ ಎನ್ನುವುದು ಚನ್ನಬಸವಣ್ಣ ಅವರ ದೃಢ ನಿಲುವು.

ಗುರುಗಳೇ ಸ್ಫೂರ್ತಿ…

ʼʼನಮ್ಮ ಗುರುಗಳಾದ ಚೆನ್ನಬಸವ ಪಟ್ಟದೇವರು ಬದುಕಿದ್ದು 109 ವರ್ಷ. 107 ವರ್ಷದವರೆಗೂ ಅವರು ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದರು. ನಿಜಾಮನ ಕಾಲದಲ್ಲಿ ಅವರು ಹೊರಗೆ ಉರ್ದು ಬೋರ್ಡ್‌ ಹಾಕಿ ಒಳಗೆ ಕನ್ನಡ ಕಲಿಸುತ್ತಿದ್ದರು. ಅವರ ಕ್ರಾಂತಿಯ ಕಾಯಕವೇ ನನಗೆ ಸ್ಫೂರ್ತಿ. ಹಿಂದೆ ನಾನು ಸರ್ಕಾರಿ ಉದ್ಯೋಗ ತೊರೆಯುವಾಗ ಕೆಲವರು ಆಡಿಕೊಂಡು ನಕ್ಕಿದ್ದರು. ಈಗ ಅಂತಹವರೇ ಬೆನ್ನು ತಟ್ಟುತ್ತಿದ್ದಾರೆ. ಸಮಾಜ ಸಾಕಷ್ಟು ಟೀಕೆ ಮಾಡುತ್ತದೆ. ಅದನ್ನು ಮೀರಿ ಮುಂದೆ ಸಾಗಬೇಕು. ಜೀವನವನ್ನು ದುಡ್ಡಿನಲ್ಲಿ ಅಳೆಯಬಾರದು. ಇದ್ದುದರಲ್ಲೇ ಸಮಾಧಾನ ಹೊಂದಬೇಕುʼʼ ಎಂದು ಚನ್ನಬಸವಣ್ಣ ಬಳತೆ ಮನದಾಳದ ಮಾತನ್ನು ಹಂಚಿಕೊಂಡರು.

ಇದನ್ನೂ ಓದಿ: 20 ಯುವ ನಾಯಕರಿಗೆ ವಿಸ್ತಾರ ಎಮರ್ಜಿಂಗ್ ಲೀಡರ್ ಅವಾರ್ಡ್; ಡಿಕೆ ಶಿವಕುಮಾರ್‌, ಬಿವೈ ವಿಜಯೇಂದ್ರರಿಂದ ನಾಯಕತ್ವ ಪಾಠ

Exit mobile version