ಬೆಂಗಳೂರು: ಮಳೆಗೆ ಮುಳುಗುವ ರಾಜಧಾನಿಯ ಸಮಸ್ಯೆ ಪರಿಹಾರಕ್ಕಾಗಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆ ಇಳಿದಿರುವ ಬಿಬಿಎಂಪಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮೂರು ದಿನಗಳ ಬ್ರೇಕ್ ಬಳಿಕ ಸೋಮವಾರ ಮತ್ತೆ ಫೀಲ್ಡಿಗೆ ಇಳಿದಿದ್ದರು. ಆದರೆ, ಎಲ್ಲರ ನಿರೀಕ್ಷೆಯಂತೆ ಬುಲ್ಡೋಜರ್‌ಗಳು ಬಡವರ ಮನೆ ಮುಂದೆ ಗರ್ಜಿಸಿದರೆ, ದೊಡ್ಡವರ ಕಟ್ಟಡಗಳ ಮುಂದೆ ತಲೆ ಬಾಗಿ ನಮಸ್ಕರಿಸಿದವು.
ವಿಪ್ರೋ ಕಟ್ಟಡದ ಮುಂದೆ ನಾಟಕ!
ಬೆಳಗ್ಗೆ 11:30ರ ಹೊತ್ತಿಗೆ ಒತ್ತುವರಿ ತೆರವಿಗೆಂದು ಬಿಬಿಎಂಪಿ ಅಧಿಕಾರಿಗಳು ಸರ್ಜಾಪುರ ಮುಖ್ಯ ರಸ್ತೆಯಲ್ಲಿರುವ ವಿಪ್ರೋ ಕಟ್ಟಡದ ಬಳಿ ಬಂದಿದ್ದರು. ಬಂದವರೇ ಕಳೆದ ದಿನ ಮಾರ್ಕಿಂಗ್ ಮಾಡಲಾದ ಜಾಗವನ್ನು ಮತ್ತೊಮ್ಮೆ ದೃಢೀಕರಿಸಿ, ತೆರವು ಕಾರ್ಯಾಚರಣೆಗೆ ಬುಲ್ಡೋಜರ್ ತರಿಸಿಕೊಂಡರು. ಸರಿಯಾಗಿ 12 ಗಂಟೆಗೆ ಬುಲ್ಡೋಜರ್ ವಿಪ್ರೋ ಒತ್ತುವರಿ ಮಾಡಿ ಕಟ್ಟಿರುವ ತಡೆಗೋಡೆಯನ್ನು ಡ್ರಿಲ್ ಮಾಡಿ ಕೆಲವು ಕಲ್ಲು ಕಿತ್ತು ಹಾಕಿತು. ಅಷ್ಟೊತ್ತಿಗೆ ಬೆಂಗಳೂರು ಪೂರ್ವ ತಾಲೂಕಿನ ತಹಶಿಲ್ದಾರ್ ಅಜಿತ್ ರೈ ಸ್ಥಳಕ್ಕೆ ಆಗಮಿಸಿದರು. ತಹಸೀಲ್ದಾರ್ ಅಜಿತ್ ರೈ ಆಗಮನದೊಂದಿಗೆ ಬಿರುಸಿನಿಂದ ಸಾಗಿದ್ದ ತೆರವು ಕಾರ್ಯಾಚರಣೆ ಸಂಪೂರ್ಣವಾಗಿ ಸ್ಥಗಿತಗೊಂಡಿತು.
ಅಸಲಿಗೆ ವಿಪ್ರೋ, ಸಲಾರ್‌ಪುರಿಯಾ ಕಂಪೆನಿಗಳು ಸರ್ಜಾಪುರ ಮುಖ್ಯ ರಸ್ತೆಯಲ್ಲಿ, ಹಾಲನಾಯಕನಹಳ್ಳಿ ಕೆರೆಯಿಂದ ಸಾವಳಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದೆ. ಈ ಎರಡೂ ಸಂಸ್ಥೆಗಳು ಒಟ್ಟಾರೆ 300 ಮೀಟರ್ ಯದ್ದ ಹಾಗೂ 8 1/2 ಅಡಿ ಅಗಲ ರಾಜಕಾಲುವೆ ನುಂಗಿ ನೀರು ಕುಡಿದಿದೆ. ಈ ವಿಚಾರ 2016ರಲ್ಲಿ ಪಾಲಿಕೆ ನಡೆಸಿದ SWD ಸರ್ವೇಯಲ್ಲೇ ಬಹಿರಂಗಗೊಂಡಿತ್ತು. ಇದೀಗ ವಿಪ್ರೋದ ಕಂಪೌಂಡ್ ವಾಲ್ ತೆರವುಗೊಳಿಸುತ್ತಿದ್ದಂತೆ ಅಧಿಕಾರಿಗಳ ಮೊಬೈಲ್ ಗೆ ಬಂದ ಕರೆಯೊಂದರ ಕಾರಣದಿಂದಾಗಿ ಇಡೀ ಕಾರ್ಯಾಚರಣೆಯೇ ಸ್ಥಗಿತಗೊಂಡಿದೆ. ಅಲ್ಲದೆ ಗ್ರಿಲ್ ಇರುವ ಕಾರಣಕ್ಕೆ ಗ್ಯಾಸ್ ಕಟರ್ ತರುವುದು ಮರೆತುಹೋಗಿದೆ. ಕಾರ್ಯಾಚರಣೆ ನಾಳೆ ಮುಂದುವರಿಸುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಮಹಾದೇವಪುರದಲ್ಲಿ ಏನಾಯಿತು?
ಮಹಾದೇವಪುರ ಕ್ಷೇತ್ರದ ಪೂರ್ವ ಪಾರ್ಕ್ ರಿಡ್ಜ್ ವಿಲ್ಲಾ ಹಾಗೂ ಅದರ ಹಿಂಭಾಗದ ರಸ್ತೆಯ ಒತ್ತುವರಿಯನ್ನು ತೆರವು ಮಾಡಬೇಕಿತ್ತು. ಆದರೆ, ಕೋಟಿ ಕುಬೇರರಾದ ವಿಲ್ಲಾ ಮಾಲೀಕರ ಮನೆಗಳನ್ನು ಮುಟ್ಟದೆ ಖಾಲಿ ಜಾಗದಲ್ಲಿ ತಾತ್ಕಾಲಿಕ ಶೆಡ್ ಹಾಕಿದ್ದ ಬಡವರ ಜಾಗಕ್ಕೆ ಜೆಸಿಬಿ ನುಗ್ಗಿಸಿ, ಎರಡು ಶೆಡ್ ಗಳನ್ನ ತೆರವು ಮಾಡಿದರು. ರಾಜಕಾಲುವೆಯ ಮೇಲೆ, ರಸ್ತೆಯನ್ನು ಬಂದ್ ಮಾಡಿ, ಅಪಾರ್ಟ್ಮೆಂಟ್ ಕಾಂಪೌಂಡ್ ಕಟ್ಟಿದ್ದರೂ ಅದನ್ನು ತೆರವು ಮಾಡಲಿಲ್ಲ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು, ನಮ್ಮ ಜಾಗವನ್ನು ತೆರವು ಮಾಡ್ತೀರಾ?, ದೊಡ್ಡವರದ್ದು ಯಾಕೆ ಮುಟ್ಟಲ್ಲ ಅಂತ ಜೆಸಿಬಿಯನ್ನು ತಡೆ ಹಿಡಿದರು. ಆದರೂ ಕಾರ್ಯಾಚರಣೆ ಮುಂದುವರಿಯಿತು.
ಇದನ್ನೂ ಓದಿ | Encroachment | ಅರೆಬರೆ ಒತ್ತುವರಿ ತೆರವಿಗೆ ಹೈಕೋರ್ಟ್ ಅಸಮಾಧಾನ, ಸಮಿತಿ ರಚನೆಗೆ ಸೂಚನೆ