Site icon Vistara News

ಎಸ್‌ಸಿ, ಎಸ್‌ಟಿ ಕುಟುಂಬಗಳ ಉಚಿತ ವಿದ್ಯುತ್‍ ಯೋಜನೆ ಹಿಂಪಡೆದಿಲ್ಲ: ಇಂಧನ ಇಲಾಖೆ ಸ್ಪಷ್ಟನೆ

ಇಂಧನ ಇಲಾಖೆ

ಬೆಂಗಳೂರು: ರಾಜ್ಯದ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರ ಚೀಟಿ ಹೊಂದಿರುವ) ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ʼಅಮೃತ ಜ್ಯೋತಿʼ ಕಾರ್ಯಕ್ರಮದಡಿ 75 ಯೂನಿಟ್‌ವರೆಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಹಿಂಪಡೆದಿಲ್ಲ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ.

ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ನೀಡಿರುವ ಉಚಿತ ವಿದ್ಯುತ್‌ ಯೋಜನೆಯನ್ನು ಹಿಂಪಡೆಯಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣ, ಕೆಲ ಮಾಧ್ಯಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಇಲಾಖೆ, ಎಸ್‌ಸಿ, ಎಸ್‌ಟಿ ಬಿಪಿಎಲ್‌ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ (ಭಾಗ್ಯಜ್ಯೋತಿ, ಕುಟೀರಜ್ಯೋತಿ ಬಳಕೆದಾರರನ್ನು ಒಳಗೊಂಡಂತೆ) ಮಾಸಿಕ 75 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2022 ಆಗಸ್ಟ್ 24 ರಂದು ಹೊರಡಿಸಿದ್ದ ಮಾರ್ಗಸೂಚಿ ಸುತ್ತೋಲೆಯನ್ನು ಇ-ಆಡಳಿತ ಇಲಾಖೆಯು ಭಾಗಶ: ಪರಿಷ್ಕರಿಸಿದ್ದರಿಂದ ಸುತ್ತೋಲೆಯನ್ನು ಸೆಪ್ಟೆಂಬರ್ 3ರಂದು ಹಿಂಪಡೆಯಲಾಗಿದೆಯೇ ಹೊರತು, ಯೋಜನೆಯನ್ನು ರದ್ದು ಪಡಿಸಿಲ್ಲ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ | RSS Baithak | ಸೆಪ್ಟೆಂಬರ್‌ 10ರಿಂದ ಚತ್ತೀಸ್‌ಗಢದ ರಾಯ್‌ಪುರದಲ್ಲಿ ಅಖಿಲ ಭಾರತೀಯ ಸಮನ್ವಯ್‌ ಬೈಠಕ್‌

ಬಿಪಿಎಲ್ ಕುಟುಂಬದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗ್ರಾಹಕರಿಗೆ 75 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಅಮೃತ ಜ್ಯೋತಿ ವಿದ್ಯುತ್ ಯೋಜನೆಯನ್ನು ರಾಜ್ಯ ಸರ್ಕಾರ 2022ರ ಮೇ 18 ರಂದು ರಾಜ್ಯಾದ್ಯಂತ ಜಾರಿಗೆ ತಂದಿತ್ತು. ಈ ಯೋಜನೆಯ ಪ್ರಯೋಜನ ಸುಮಾರು 39 ಲಕ್ಷ ಬಿಪಿಎಲ್ ಕುಟುಂಬಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗ್ರಾಹಕರಿಗೆ ಸಿಗಲಿದ್ದು, ಈಗಾಗಲೇ 4 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ. ಮೇ ಮತ್ತು ಜೂನ್ ತಿಂಗಳ ವಿದ್ಯುತ್ ಬಿಲ್ ಮೊತ್ತವನ್ನು ಸುಮಾರು 15000 ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಮರುಪಾವತಿಸಲಾಗಿದೆ ಎಂದು ಇಂಧನ ಇಲಾಖೆಯು ತಿಳಿಸಿದೆ.

ಈ ಯೋಜನೆಯನ್ನು ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ಡಿಬಿಟಿ ವ್ಯವಸ್ಥೆಯಡಿ ಜಾರಿಗೊಳಿಸಲಾಗಿದೆ. ಫಲಾನುಭವಿ ಗ್ರಾಹಕರಿಗೆ ತಾವು ಪಾವತಿಸಿದ ಒಟ್ಟು ವಿದ್ಯುತ್ ಬಿಲ್ಲಿನ ಮೊತ್ತದಲ್ಲಿ 75 ಯೂನಿಟ್‍ಗಳ ವರೆಗಿನ ವಿದ್ಯುತ್ ಶುಲ್ಕದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ | ಅಪ್ರಾಪ್ತರ ನಡುವಿನ ಲೈಂಗಿಕ ದೌರ್ಜನ್ಯ ಪ್ರಕರಣ ರಾಜಿಯಲ್ಲಿ ಇತ್ಯರ್ಥ, ಬಾಲಕನ ಬಿಡುಗಡೆ, ರಾಜ್ಯದಲ್ಲೇ ಮೊದಲ ಪ್ರಕರಣ

Exit mobile version