ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಕುಟುಂಬಗಳಿಗೆ ಅನುಕೂಲವಾಗಲಿ ಎಂದು ಆರಂಭಿಸಿದ ಉಚಿತ ವಿದ್ಯುತ್ ಯೋಜನೆಯನ್ನು ವಾಪಸ್ ಪಡೆಯಲಾಗಿಲ್ಲ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಬಿಪಿಎಲ್ ಬಡತನ ರೇಖೆಗಿಂತ ಕೆಳಗಿರುವ ಎಸ್‌ಸಿ, ಎಸ್‌ಟಿ ಹಾಗೂ ರೈತ ಕುಟುಂಬಗಳಿಗೆ ಮಾಸಿಕ 75 ಯೂನಿಟ್‌ಗಳವರೆಗೆ ನೀಡಲಾಗುತ್ತಿದ್ದ ಉಚಿತ ವಿದ್ಯುತ್ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪದ ಹಿನ್ನೆಲೆಯಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂಧನ ಇಲಾಖೆ ದಿವಾಳಿಯಾಗುವಲ್ಲಿ ಕಾಂಗ್ರೆಸ್ ಪಾತ್ರವಿದೆ. ಸಬ್ಸಿಡಿ ರೂಪದ ಹಣ ಕಾಲಕಾಲಕ್ಕೆ ಕೊಟ್ಟಿಲ್ಲ, ಇಂಧನ ಇಲಾಖೆಗೆ ಕೊಡಬೇಕಾದ ಹಣ ಕೊಟ್ಟಿಲ್ಲ. 3470 ಕೋಟಿ ರೂಪಾಯಿ ಸಬ್ಸಿಡಿ ಹಣ ಬಾಕಿ ಇಟ್ಟರು. ಅವರ ಪಾಪದ ಕೂಸನ್ನು ಬಿಜೆಪಿ ಸರ್ಕಾರ ಹೊತ್ತಿದೆ ಎಂದರು.
ಇದನ್ನೂ ಓದಿ | Ramya Politics | ರಾಜಕೀಯ ಅಖಾಡಕ್ಕೆ ನಟಿ ರಮ್ಯಾ ರೀ ಎಂಟ್ರಿ?
ಇಂಧನ ಇಲಾಖೆಯ 3500 ಕೋಟಿ ರೂಪಾಯಿ ಹೆಸ್ಕಾಂಗೆ ಕೊಡಲಿಲ್ಲ. ಮತ್ತೆ 3500 ಕೋಟಿ ರೂಪಾಯಿ ಸಾಲ ಮಾಡಿ ಇಂಧನ ಇಲಾಖೆಯನ್ನು ನಷ್ಟದಲ್ಲಿ ಮುಳುಗಿಸಿ, ಹಣಕಾಸು ಮುಗ್ಗಟ್ಟು ಎದುರಿಸುವಂತೆ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು, ರೈತರ ಐಪಿ ಸೆಟ್‌ಗೆ ಮೀಟರ್ ಅಳವಡಿಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿತ್ತು. ಆ ಕಾರಣಕ್ಕೆ ಸಾಲದ ಹೊರೆ ಹೆಸ್ಕಾಂಗೆ ಹಾಕಿದರು. ಆರ್‌ಡಿಪಿಆರ್‌ನಿಂದ ಬರಬೇಕಾದ ಸಾಲವನ್ನೂ ನೀಡಲಿಲ್ಲ. ನಮ್ಮ ಸರ್ಕಾರ ಈ ಸಾಲ ತೀರಿಸಿದೆ. ಸಿಎಂ 8500 ಕೋಟಿ ರೂಪಾಯಿ ನಮಗೆ ಕೊಟ್ಟಿದ್ದಾರೆ. ಇದರಲ್ಲಿ ನಾವು ಇಲಾಖೆ ಸಾಲ ಸರಿದೂಗಿಸಿದ್ದೇವೆ. ರೈತರ ಪಂಪ್‌ಸೆಟ್‌ಗೆ ಮೀಟರ್ ಅಳವಡಿಸಲ್ಲ, ಹೆಚ್ಚುವರಿ ರೈತರಿಗೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ ಆದೇಶದ ಗೊಂದಲಗಳ ಬಗ್ಗೆ ಸ್ಪಷ್ಟನೆ ನೀಡಿದರು.
ಹೆಚ್ಚುವರಿ ವಿದ್ಯುತ್ ಬೇಡಿಕೆ ಪೂರೈಸುತ್ತೇವೆ, ಹಾಗೆಯೇ ರೈತರಿಗೆ ನಿರಂತರ ವಿದ್ಯುತ್ ಪೂರೈಸುತ್ತೇವೆ ಎಂದು ರೈತರಿಗೆ ಅಭಯ ನೀಡಿದ ಅವರು, ಕಾಂಗ್ರೆಸ್ ಕಾಲದ ಇಂಧನ ಇಲಾಖೆ ಹಗರಣಗಳನ್ನು ಬಯಲಿಗಳೆಯಲಿ ಎಂಬ ಡಿಕೆಶಿ ಸವಾಲ್ ನಾನು ಸ್ವೀಕರಿಸುತ್ತೇನೆ. ಅಧಿವೇಶನ ಮುಗಿದ ನಂತರ ಮಾಹಿತಿ ಮುಂದಿಡುತ್ತೇನೆ ಎಂದರು.
ʻʻಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ನಡೆದ ಸೋಲಾರ್ ಹಗರಣದ ಬಗ್ಗೆ ಬಹಿರಂಗ ಮಾಡುತ್ತೇನೆ. ಸರ್ಕಾರಕ್ಕೆ ಕೆಲವು ಒಪ್ಪಂದದಿಂದ ನಷ್ಟವಾಗಿದೆ. ಈ ಒಪ್ಪಂದಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತದೆ. ಸೋಲಾರ್ ಹಗರಣದ ಬಗ್ಗೆ ತನಿಖೆ ಮಾಡುವ ವಿಚಾರ ಸಮಯ ಬಂದಾಗ ಹೇಳುತ್ತೇನೆʼʼ ಎಂದರು ಸುನಿಲ್ ಕುಮಾರ್.
ಇದನ್ನೂ ಓದಿ | Bangalore Rain | ರಾಜಧಾನಿಗೆ ಇನ್ನೂ 4 ದಿನ ಮಳೆ ಕಂಟಕ, ರಾಜ್ಯದೆಲ್ಲೆಡೆಯೂ ಇದೆ ವರುಣಾರ್ಭಟ