:: ಡಾ. ಡಿ.ಸಿ. ರಾಮಚಂದ್ರ
ಮಂಡ್ಯ, ಮೈಸೂರು ಜಿಲ್ಲೆಯ ರೈತರ ಪಾಲಿನ ಮನೆದೇವರು, ಇಂದಿಗೂ ಇಂಜಿನಿಯರ್ ಡೇಯಂದು ನೆನಪಾಗುವವರು ಸರ್ ಎಂ. ವಿಶ್ವೇಶ್ವರಯ್ಯ (sir M Visvesvaraya). ಸರ್ ಎಂ.ವಿ. ಉದ್ಯೋಗ ಪರ್ವದಲ್ಲಿ ದೇಶದ ವಿವಿಧೆಡೆ ಮತ್ತು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲದಲ್ಲಿ ಕರ್ನಾಟಕಕ್ಕೆ ನೀಡಿದ ಕೊಡುಗೆ ಅಪಾರ. ಅವರ ಶಿಸ್ತಿನ ಜೀವನ, ಸಮಯ ಪರಿಪಾಲನೆ, ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಇವೆಲ್ಲಾ ಪ್ರಶ್ನಾತೀತ. ಇಂದು ಅವರು ನೆನಪಿನ ದಿನ, ಇಂಜಿನಿಯರ್‌ಗಳ ದಿನ (Engineers day 2023).
ಬಾಲ್ಯಜೀವನ
ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸಶಾಸ್ತ್ರಿ, ತಾಯಿ ವೆಂಕಟಲಕ್ಷ್ಮಮ್ಮ. ವಿಶ್ವೇಶ್ವರಯ್ಯನವರ ತಂದೆ ಸಂಸ್ಕೃತ ವಿದ್ವಾಂಸರು. ಧರ್ಮಶಾಸ್ತ್ರಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಲ್ಲದೆ ಆಯುರ್ವೇದ ತಜ್ಞರು ಆಗಿದ್ದರು. ಇವರೀರ್ವರ ಸುಪುತ್ರರಾಗಿ 15 ಸೆಪ್ಟಂಬರ್ 1860ರಲ್ಲಿ ವಿಶ್ವೇಶ್ವರಯ್ಯನವರು ಜನಿಸಿದ್ದು, ಬೆಂಗಳೂರಿನಿಂದ 45 ಕಿ.ಮೀ ದೂರದಲ್ಲಿರುವ ಚಿಕ್ಕಬಳ್ಳಾಪುರದಿಂದ 5 ಕಿ.ಮೀ ಅಂತರದಲ್ಲಿರುವ ಮುದ್ದೇನಹಳ್ಳಿಯಲ್ಲಿ. ವಿಶ್ವೇಶ್ವರಯ್ಯನವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢಶಿಕ್ಷಣ ಬೆಂಗಳೂರಿನಲ್ಲಿ ನಡೆಯಿತು. 1881ರಲ್ಲಿ ಬಿ.ಎ. ಪದವಿಯನ್ನು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪಡೆದರು. ನಂತರ ಪುಣೆಯ ಕಾಲೇಜ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದರು.
ಸ್ವಯಂ ಚಾಲಿತ ಗೇಟಿನ ಜನಕ
ವಿಶ್ವೇಶ್ವರಯ್ಯನವರು 1884ರಲ್ಲಿ ಮುಂಬಯಿ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ವೃತ್ತಿ ಜೀವನ ಆರಂಭವಾಯಿತು. ಇದಾದ ನಂತರ ಭಾರತೀಯ ನೀರಾವರಿ ಕಮಿಷನ್‍ನಿಂದ ಅವರಿಗೆ ಆಮಂತ್ರಣ ಬಂದಿತು. ಈ ಕಮಿಷನ್‍ನ್ನು ಸೇರಿದ ನಂತರ ದಖನ್ ಪ್ರಸ್ಥಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ವಿಶ್ವೇಶ್ವರಯ್ಯನವರು ಪರಿಚಯಿಸಿದರು. ಸರ್ ಎಂ. ವಿಶ್ವೇಶ್ವರಯ್ಯನವರು ಅರ್ಥರ್ ಕಾಟನ್‍ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದರು. ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಅವರು ತಿರುಚಿರಾಪಳ್ಳಿಯಲ್ಲಿ ಚೋಳರಾಜರಿಂದ ನಿರ್ಮಿಸಲ್ಪಟ್ಟ ಹಾಗೂ 18ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್‍ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಗ್ರಾಂಡ್ ಅಣೆಕಟ್ಟನ್ನು ನೋಡಿ ಪ್ರಭಾವಿತರಾಗಿದ್ದರು.
ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ “ಸ್ವಯಂ ಚಾಲಿತ ಫ್ಲಡ್‍ಗೇಟ್ ವಿನ್ಯಾಸ”ವೊಂದನ್ನು ಕಂಡು ಹಿಡಿದು ಅದಕ್ಕಾಗಿ “ಪೇಟೆಂಟ್” ಪಡೆದರು. ಮೊದಲ ಬಾರಿಗೆ 1903ರಲ್ಲಿ ಪುಣೆಯ ಬಳಿ ‘ಖಡಕ್‍ವಾಸ್ಲ’ ಜಲಾಶಯದಲ್ಲಿ ಈ ವಿಶಿಷ್ಟ ತಂತ್ರಜ್ಞಾನದ ಸ್ವಯಂ ಚಾಲಿತ ಗೇಟುಗಳನ್ನು ಅಳವಡಿಸಿ, ಜಲಾಶಯದ ಈ ತಂತ್ರಜ್ಞಾನವನ್ನು ವಿಶ್ವದಲ್ಲಿಯೇ ಪ್ರಥಮ ಬಾರಿಗೆ ತೋರಿಸಿಕೊಟ್ಟ ಏಕೈಕ ತಂತ್ರಜ್ಞಾನಿ ಐತಿಹಾಸಿಕ ಸಾಕ್ಷಿಯಾಗಿದ್ದಾರೆ. ವಿಶ್ವೇಶ್ವರಯ್ಯ ಅವರಿಗೆ ಅಂದಿನ ಸರಕಾರವು ಪೂನಾ, ನಾಸಿಕ್, ಹೈದರಾಬಾದ್ ಮೊದಲಾದ ಕಡೆ ಪ್ರಮುಖ ನೀರಾವರಿ ಯೋಜನೆಗಳ ಉಸ್ತುವಾರಿಯನ್ನು ವಹಿಸಿತು.
ದಿವಾನರಾದ ರಾಯರು
ಇವರು ಮೂಲತಃ ಇಂಜಿನಿಯರ್ ಆದರೂ ಇವರಲ್ಲಿದ್ದ ಕಾರ್ಯತತ್ಪರತೆ, ಪ್ರಾಮಾಣಿಕತೆ, ಬುದ್ಧಿಶಕ್ತಿಯನ್ನು ಕಂಡು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಬೇಡವೆಂದರೂ ಬಿಡದೆ ಇವರನ್ನು ಮೈಸೂರಿನ ದಿವಾನರನ್ನಾಗಿ ನೇಮಿಸಿದರು. 28 ವರ್ಷಗಳ ಕಾಲ ಅಭಿಯಂತರರಾಗಿ, 6 ವರ್ಷಗಳ ಕಾಲ ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಿದ್ದು ಅಲ್ಲದೇ ದಿವಾನ್ ಪದವಿಯಿಂದ ನಿವೃತ್ತರಾದ ನಂತರವೂ ಸಾಕಷ್ಟು ಶ್ರಮಿಸಿದರು. ರಾಷ್ಟ್ರ ಹಾಗೂ ಹೊರರಾಷ್ಟ್ರಗಳು ಸರ್ ಎಂ.ವಿಯವರ ಸೇವೆಯನ್ನು ಸಮರ್ಥವಾಗಿ ಬಳಸಿಕೊಂಡವು.
ಕನ್ನಂಬಾಡಿಯ ಕನಸು ನನಸು
ಈಗಿನ ಮಂಡ್ಯ ಜಿಲ್ಲೆಯಲ್ಲಿರುವ ಪ್ರಸಿದ್ಧ ಕೃಷ್ಣರಾಜಸಾಗರ ಅಣೆಕಟ್ಟಿನ ವಾಸ್ತುಶಿಲ್ಪಿ ಸರ್.ಎಂ.ವಿ ಮೈಸೂರಿನ ದಿವಾನರಾಗಿದ್ದ ಕಾಲಾವಧಿಯಲ್ಲಿ, ಕೃಷ್ಣರಾಜಸಾಗರ ಅಣೆಕಟ್ಟು ಕಟ್ಟಿದಾಗ ಅಂದಿನ ಕಾಲಘಟ್ಟದಲ್ಲಿ ಭಾರತದಲ್ಲೇ ಅತ್ಯಂತ ದೊಡ್ಡ ಅಣೆಕಟ್ಟು. ಜೀವನದಿ ಕಾವೇರಿ ನದಿಗೆ ಕಟ್ಟಲಾದ ಅಣೆಕಟ್ಟನ್ನು ಪ್ರಾರಂಭಿಸಿ 4 ವರ್ಷಗಳಲ್ಲಿ ಮುಗಿಸಿ ಸ್ವಯಂಚಾಲಿತ ಗೇಟುಗಳನ್ನು ಅಳವಡಿಸಿ ಜಗತ್ತಿನಲ್ಲಿ ಯಾರೊಬ್ಬರೂ ಮಾಡಿರದಂತಹ ಸಾಧನೆ ಮಾಡಿದರು. ಬೇರೆ ಅಣೆಕಟ್ಟುಗಳು ಸಿಮೆಂಟ್, ಕಾಂಕ್ರೀಟ್‍ನಿಂದ ನಿರ್ಮಾಣವಾಗಿದ್ದರೆ, ಕೆ.ಆರ್.ಎಸ್. ಅಣೆಕಟ್ಟು ಸರ್.ಎಂ.ವಿಶ್ವೇಶ್ವರಯ್ಯನವರ ಜಾಣ್ಮೆಯ ತಂತ್ರಜ್ಞಾನದಿಂದ ಸುಣ್ಣ ಮತ್ತು ಬೆಲ್ಲದ ಮಿಶ್ರಣದಿಂದ ಕಟ್ಟಿದ ಮಾನವ ನಿರ್ಮಿತವಾಗಿದ್ದು, ದಾಖಲೆಯೊಂದಿಗೆ ಶತಮಾನದಿಂದ ಮೈಸೂರು, ಮಂಡ್ಯ, ಬೆಂಗಳೂರು, ತಮಿಳುನಾಡಿಗೆ ಜೀವಜಲವನ್ನು ನೀಡುತ್ತಿರುವ ವಾಸ್ತುಶಿಲ್ಪವಾಗಿದೆ. ಎಲ್ಲಿಯಾದರು ದುರಂತ ಸಂಭವಿಸಿದರೆ ಸ್ವಯಂ ಚಾಲಿತ ಗೇಟ್‍ಗಳು ತನ್ನಷ್ಟಕ್ಕೆ ತಾನೇ ತೆರೆದುಕೊಂಡು ಮುನ್ನುಗ್ಗುವ ಅಪಾರ ಪ್ರಮಾಣದ ನೀರು ಯಾರಿಗೂ ತೊಂದರೆಯಾಗದಂತೆ ಹರಿದು ಮುಂದೆ ಸಾಗಲು ಮುಂದಾಲೋಚನೆಯಿಂದ ಅಣೆಕಟ್ಟು ನಿರ್ಮಿಸುವಾಗಲು ಆಳವಾದ ನಾಲೆ ವ್ಯವಸ್ಥೆ ಮಾಡಲಾಗಿದೆ. ಜಗತ್ತಿನ ಅದ್ಭುತಗಳ ಸಾಲಿನಲ್ಲಿ ಬರುವ ಕೆ.ಆರ್.ಸಾಗರ ಅಣೆಕಟ್ಟು ಒಂದು ಲಕ್ಷ ಇಪ್ಪತ್ತು ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸಿ ದಕ್ಷಿಣ ಭಾರತದ ಕೋಟ್ಯಾಂತರ ಜೀವಿಗಳಿಗೆ ಜೀವಜಲವನ್ನು ನೀಡಿ ಬೃಂದಾವನ ಉದ್ಯಾನವನದಲ್ಲಿ ವೈವಿದ್ಯಮಯ, ನರ್ತಿಸುವ ಕುಣಿದು ಕುಪ್ಪಳಿಸುವ ನೀರಿನ ಕಾರಂಜಿಗಳು ಪುಷ್ಪಕಾಶಿಯೊಂದಿಗೆ ಜಗತ್ತಿನ ನಾನಾ ದೇಶದ ಪ್ರವಾಸಿಗರನ್ನು ತನ್ನಡೆಗೆ ಆಕರ್ಷಿಸುವಂತೆ ಮಾಡಿದ ಭಾರತದ ಭಾಗ್ಯವಿದಾತ ಸರ್.ಎಂ. ವಿಶ್ವೇಶ್ವರಯ್ಯನವರನ್ನು ದಕ್ಷಿಣ ಭಾರತದ ಜನತೆ ಎಂದಿಗೂ ಮರೆಯುವಂತಿಲ್ಲ.
ಆಡಳಿತಕ್ಕೂ ಸೈ
ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿ ಸಾಧಿಸಿದ ಸಾಧನೆಗಳು ಅವರೊಬ್ಬ ಉತ್ತಮ ಆಡಳಿತಗಾರ ಎಂಬುದನ್ನು ಸಾಬೀತು ಪಡಿಸಿವೆ. ಅವರ ಪ್ರತಿಭೆಗೆ, ಸೇವಾ ತತ್ಪರತೆಗೆ ಬ್ರಿಟಿಷ್ ಸರಕಾರವೇ ತಲೆದೂಗಿತ್ತು. ಅವರು ದಿವಾನರಾದಾಗ ಆಗಿನ ಬ್ರಿಟಿಷ್ ವೈಸ್‍ರಾಯ್ ಹಾರ್ಡಿಂಜ್ ರಾಜ್ಯದ ಆಂತರಿಕ ವಿಷಯಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು.
ಇದು ಅವರ ಘನತೆ ಗೌರವಗಳಿಗೆ ಇನ್ನೊಂದು ಗರಿ ಮೂಡಿಸಿತು. ಅವರು ಬೆಂಗಳೂರು, ಮೈಸೂರು ಮಾರುಕಟ್ಟೆ, ಬೀದಿ, ಉದ್ಯಾನವನ, ನಗರ ನೈರ್ಮಲ್ಯ-ಸೌಂದರ್ಯ, ಪೌರಸೌಲಭ್ಯ ಹಾಗೂ ಜನರ ಆರೋಗ್ಯದತ್ತ ಗಮನಹರಿಸಿ ಆಶ್ಚರ್ಯಕಾರಕ ಸಾಧನೆಗಳನ್ನು ಮಾಡಿದರು. ಗ್ರಾಮಗಳ ಸುಧಾರಣೆಗಾಗಿಯೂ ಶ್ರಮಿಸಿದರು.
ಆಡಳಿತದಲ್ಲೂ ಚುರುಕು ಮೂಡಿಸಿದರು. ವರ್ಷಕ್ಕೊಮ್ಮೆ ಸಮಾವೇಶಗೊಳ್ಳುತ್ತಿದ್ದ ಪ್ರಜಾಪ್ರತಿನಿಧಿ ಸಭೆ ವರ್ಷದಲ್ಲಿ ಎರಡು ಬಾರಿ ಸಮಾವೇಶಗೊಳ್ಳುವಂತೆ ಮಾಡಿದರು. ಸರ್ ಎಂ. ವಿಶ್ವೇಶ್ವರಯ್ಯನವರು ಮಾಡಿದ ಇನ್ನೊಂದು ಗಮನಾರ್ಹ ಸಾಧನೆ ಎಂದರೆ ಆಯ ವ್ಯಯ ಸಂಗ್ರಹ ಪಟ್ಟಿಯನ್ನು ಕನ್ನಡದಲ್ಲಿ ಪ್ರಕಟಿಸಲು ಆರಂಭಿಸಿದರು. ಲೆಜಿಸ್ಲೆಟಿವ್ ಕೌನ್ಸಿಲ್ ಸಭೆಗೆ ಹೆಚ್ಚಿನ ಅಧಿಕಾರವನ್ನು ನೀಡಿ ಪ್ರಜಾಪ್ರಭುತ್ವದ ಉಚ್ಛ ಪರಂಪರೆಗೆ ಚಾಲನೆ ನೀಡಿದರು. ಪ್ರಜಾಪ್ರತಿನಿಧಿ ಸಭೆ ಲೆಜಿಸ್ಲೆಟಿವ್ ಕೌನ್ಸಿಲ್‍ಗಳು ಇಂದಿನ ವಿಧಾನಸಭೆ-ವಿಧಾನ ಪರಿಷತ್ತುಗಳಂತೆಯೇ ಕಾರ್ಯನಿರ್ವಹಿಸುತ್ತಿದ್ದವು. ಅವರ ನೇತೃತ್ವದಲ್ಲಿ ಮೈಸೂರು ರಾಜ್ಯ ಪ್ರಗತಿಯ ಪಥವನ್ನೇರಿ ಮಾದರಿಯ ರಾಜ್ಯವಾಗಿ ಮಾರ್ಪಟ್ಟಿತು.
ಶಿಕ್ಷಣ ಕ್ರಾಂತಿ
ಶಿಕ್ಷಣದಿಂದಲೇ ದೇಶೋದ್ಧಾರ ಎಂಬುದನ್ನು ಮನಗಂಡಿದ್ದ ಸರ್.ಎಂ. ವಿಶ್ವೇಶ್ವರಯ್ಯನವರು ಮಕ್ಕಳ ಶಿಕ್ಷಣಕ್ಕೆ ತುಂಬ ಮಹತ್ವ ನೀಡಿದರು. ಅವರು ಅಲ್ಪಸಂಖ್ಯಾತರು, ಪರಿಶಿಷ್ಟ ಪಂಗಡಗಳು ಹಾಗೂ ಹಿಂದುಳಿದ ವರ್ಗಗಳಿಗೆ ಶಿಕ್ಷಣದ ಮಹತ್ವವನ್ನು ಮನನ ಮಾಡಿ ಅವರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಪ್ರೋತ್ಸಾಹಿಸಿದರು. ಅದಕ್ಕಾಗಿ ಅವರಿಗೆ ಶಾಲೆಗಳಲ್ಲಿ ಮುಕ್ತ ಪ್ರವೇಶ ದೊರೆಕಿಸಿಕೊಟ್ಟರು. ವ್ಯಾಸಂಗ ಮುಂದುವರೆಸಲು ಅಗತ್ಯ ಸೌಕರ್ಯಗಳನ್ನು ಒದಗಿಸಿದರು. ಉದ್ಯೋಗದಲ್ಲೂ ಅವರಿಗೆ ಪಾಲು ನೀಡಿ ಅವರು ಸಾಮಾಜಿಕವಾಗಿ ತಲೆಯೆತ್ತಿ ಬದುಕಲು ಅವಕಾಶ ಕಲ್ಪಿಸಿದರು. ವಿದ್ಯಾರ್ಥಿಗಳೆಂದರೆ ಅವರಿಗೆ ತುಂಬಾ ಅಚ್ಚುಮೆಚ್ಚು. ಅವರು ದಿವಾನರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಮೈಸೂರು ರಾಜ್ಯದಲ್ಲಿ 4568 ಶಾಲೆಗಳಿದ್ದರೆ, ಅವರು ದಿವಾನಗಿರಿಯಿಂದ ನಿವೃತ್ತರಾಗುವಾಗ ಅಂದರೆ 1918 ರಲ್ಲಿ ಅವುಗಳ ಸಂಖ್ಯೆ 11294 ಕ್ಕೇರಿತು. ಸರ್.ಎಂ.ವಿಶ್ವೇಶ್ವರಯ್ಯನವರು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜನ್ನು ಅಭಿವೃದ್ಧಿಪಡಿಸಿದರು.
ವಿಶೇಷ ತಾಂತ್ರಿಕ ಶಿಕ್ಷಣ ಹಾಗೂ ತರಬೇತಿಗಾಗಿ ವಿದೇಶಗಳಿಗೆ ಹೋಗಲಿಚ್ಛಿಸುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಸೌಕರ್ಯ ನೀಡಿದರು. ಕೃಷಿಕರಿಗಾಗಿ ಅವರು ಅಂದು ಆರಂಭಿಸಿದ ಕೃಷಿಶಾಲೆ ಇಂದು ಕೃಷಿ ವಿಶ್ವವಿದ್ಯಾಲಯವಾಗಿ ಬೆಳೆದು ನಿಂತಿದೆ. ಬೆಂಗಳೂರಿನ ಇಂದಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ಮತ್ತು ಮೈಸೂರಿನ ಚಾಮರಾಜೇಂದ್ರ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಅವರ ಶೈಕ್ಷಣಿಕ ಸಾಧನೆಯ ಅನುಪಮ ಕೊಡುಗೆಗಳಾಗಿವೆ. ಸಾಮಾಜಿಕವಾಗಿ ಶೋಷಣೆಗೊಳಗಾಗುತ್ತಿದ್ದ ಮಹಿಳೆಯರನ್ನು ಪ್ರಜ್ಞಾವಂತರನ್ನಾಗಿಸಲು ಮಹಿಳಾ ಶಿಕ್ಷಣಕ್ಕೆ ಪ್ರೇರಣೆ ನೀಡಿದರು. ರಾಜ್ಯಾದ್ಯಂತ ಹೆಣ್ಣು ಮಕ್ಕಳ ಶಾಲೆಗಳನ್ನು ಆರಂಭಿಸಿ ದಾಖಲೆ ಬರೆದರು.
ಅರಸಿ ಬಂದ ಭಾರತ ರತ್ನ
ಸರ್.ಎಂ.ವಿ.ರವರ ಬುದ್ಧಿಶಕ್ತಿಗೆ ತಲೆದೂಗಿದ ಬ್ರಿಟೀಷರು 1915 ರಲ್ಲಿ ‘ಸರ್’ ಪ್ರಶಸ್ತಿಯನ್ನು ನೀಡಿದರೆ, ಸ್ವತಂತ್ರ ಭಾರತವು 1955ರಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ.ಬಾಬುರಾಜೇಂದ್ರ ಪ್ರಸಾದÀರು ‘ಭಾರತರತ್ನ’ ಪ್ರಶಸ್ತಿ ನೀಡಿ ಗೌರವಿಸಿದರು. ಸ್ವತಂತ್ರ ಭಾರತ ಸರ್ಕಾರವು ಸರ್.ಎಂ.ವಿ.ರವರ ಭಾವಚಿತ್ರವಿರುವ ಅಂಚೆ ಚೀಟಿಯನ್ನು ಹೊರತಂದಿತು. ದೇಶದ ನಾನಾ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದವು.
ನಾನಾ ರಾಜ್ಯಗಳಲ್ಲೂ ಸೇವೆ
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತ್ ಸೇರಿದಂತೆ ಭಾರತದ ನಾನಾ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದರು. ಸ್ವಾತಂತ್ರ್ಯಪೂರ್ವದಲ್ಲಿ ಹಾಗು ಸ್ವಾತಂತ್ರ್ಯ ನಂತರದಲ್ಲಿ ದೇಶವು ವ್ಯಾಪಾರ, ವಾಣಿಜ್ಯ, ಕೃಷಿ, ನೀರಾವರಿ ಹಾಗೂ ಕೈಗಾರಿಕಾ ಕ್ಷೇತ್ರ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾದರು. ಕರ್ನಾಟಕದಲ್ಲಿ ಕೈಗಾರಿಕಾ ಕ್ರಾಂತಿಯನ್ನು ಮಾಡಿದ ಮಹಾನ್ ವ್ಯಕ್ತಿ, ಬರಡು ಭೂಮಿಯಾಗಿದ್ದ ಮಂಡ್ಯ ಜಿಲ್ಲೆಯ ಲಕ್ಷಾಂತರ ಎಕರೆ ಭೂಮಿಗೆ ಕಾವೇರಿ ನೀರುಣಿಸುವ ಮೂಲಕ ಮಂಡ್ಯ ಜಿಲ್ಲೆಯ ರೈತರ ಪಾಲಿಗೆ ಪ್ರಾತಃಸ್ಮರಣೀಯರಾಗಿದ್ದಾರೆ.
ಅವರ ಮುಂದಾಳುತನದಲ್ಲಿ ಸ್ಥಾಪಿಸಲ್ಪಟ್ಟಿರುವ ಕೈಗಾರಿಕೆಗಳಲ್ಲಿ ಭದ್ರಾವತಿಯ ಉಕ್ಕು ಕಾರ್ಖಾನೆ, ಜೋಗದ ಜಲವಿದ್ಯುತ್ ಯೋಜನೆ, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ, ಮೈಸೂರು ಸಕ್ಕರೆ ಕಾರ್ಖಾನೆ ಇತ್ಯಾದಿ ಪ್ರಮುಖವಾದುವು . ಇವಲ್ಲದೆ, ಮೈಸೂರು, ಬೆಂಗಳೂರಿನಲ್ಲಿ ಇಂದಿಗೂ ಕಾರ್ಯನಿರ್ವಹಿಸುತ್ತಿರುವ ವಿವಿಧ ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಗ್ರಂಥಾಲಯಗಳು, ನೀರಾವರಿ ಯೋಜನೆಗಳು, ಕನ್ನಡ ಸಾಹಿತ್ಯ ಪರಿಷತ್, ಬ್ಯಾಂಕ್‍ಗಳು ಇತ್ಯಾದಿ ಸಮಾಜಮುಖಿ ವ್ಯವಸ್ಥೆಗಳನ್ನು ರೂಪಿಸಿದ ಕೀರ್ತಿ ಸರ್. ಎಂ.ವಿ.ಗೆ ಸಲ್ಲುತ್ತದೆ. ತಮ್ಮ ಅಪ್ರತಿಮ ಸಾಧನೆಗಾಗಿ ಬ್ರಿಟಿಷ್ ಸರಕಾರವು ಕೊಡುವ ‘ನೈಟ್‍ಹುಡ್’ ಪದವಿಯನ್ನು 1915ರಲ್ಲಿಯೂ, ಸ್ವತಂತ್ರ ಭಾರತ ಸರಕಾರದ ಅತ್ಯುನ್ನತ ಪದವಿಯಾದ ʼಭಾರತರತ್ನʼವನ್ನು ೧೯೫೫ರಲ್ಲಿಯೂ ಪಡೆದುಕೊಂಡರು.
ಇದನ್ನೂ ಓದಿ: Modi in Karnataka: ಸರ್. ಎಂ. ವಿಶ್ವೇಶ್ವರಯ್ಯ ಅವರ ಕುರಿತು ಹೊಸ ಮ್ಯೂಸಿಯಂ ನಿರ್ಮಾಣ: ಪ್ರಧಾನಿ ನರೇಂದ್ರ ಮೋದಿ ಭರವಸೆ