Site icon Vistara News

Escape Drama : ಮಕ್ಕಳನ್ನು ಬಿಟ್ಟು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ನಾಟಕ ಆಡಿದ ಮಹಿಳೆ!

Suicide attempt in Kumata

ಕಾರವಾರ: ಮಹಿಳೆಯೊಬ್ಬರು ಮಕ್ಕಳನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟು ತಾನು ಸಮುದ್ರಕ್ಕೆ ಹಾರಿದಂತೆ (Jumping into sea) ನಾಟಕವಾಡಿ ಸಿಕ್ಕಿಬಿದ್ದಿದ್ದಾರೆ (Escape Drama). ಆದರೆ, ಅವರ ಈ ನಾಟಕ ಒಮ್ಮೆಗೆ ಎಲ್ಲರನ್ನೂ ಆತಂಕದ ಮಡುವಿಗೆ ತಳ್ಳಿತ್ತು.

ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ (Uttara kannada News) ಕುಮಟಾದ ವನ್ನಳ್ಳಿ ಹೆಡ್‌ಬಂದರ್ ಬಳಿ. ನಿವೇದಿತಾ ಭಂಡಾರಿ ಎಂಬ ಮಹಿಳೆ ಈ ರೀತಿ ನಾಟಕ ಮಾಡಲು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

ನಿವೇದಿತಾ ಅವರು ಹೊನ್ನಾವರದ ತೋರಗೋಡ ಗ್ರಾಮದ ನಿವಾಸಿ. ಅವರು ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಸ್ಕೂಟಿಯಲ್ಲಿ ಮನೆ ಬಿಟ್ಟಿದ್ದರು. ಇವರು ನವೆಂಬರ್ 25ರಂದು ಒಮ್ಮಿಂದೊಮ್ಮೆಗೆ ನಾಪತ್ತೆಯಾಗಿದ್ದರು.

ಅವರು ತಮ್ಮ ಇಬ್ಬರು ಮಕ್ಕಳನ್ನು ಕುಮಟಾದ ಪಿಕ್‌ಅಪ್ ಬಸ್‌ ನಿಲ್ದಾಣದಲ್ಲಿ ಬಿಟ್ಟು ತೆರಳಿದ್ದರು. ಅವರ ಸ್ಕೂಟಿ ಸಮುದ್ರದ ಬಳಿ ಪತ್ತೆಯಾಗಿತ್ತು. ಮಾಂಗಲ್ಯ, ಮೊಬೈಲ್ ಕೂಡಾ ಸಮುದ್ರದ ಪಕ್ಕದಲ್ಲೇ ಇತ್ತು. ಅವರ ವೇಲ್‌ ಸಮುದ್ರದ ಕಲ್ಲುಗಳ ಬಳಿ ಪತ್ತೆಯಾಗಿತ್ತು.

ಇದನ್ನೆಲ್ಲ ಗಮನಿಸಿದಾಗ ನಿವೇದಿತಾ ಭಂಡಾರಿ ಅವರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಸಹಜವಾದ ಸಂಶಯವಾಗಿತ್ತು. ಈ ನಡುವೆ, ಕಳೆದ ನಾಲ್ಕು ದಿನಗಳಿಂದ ಅವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಪೊಲೀಸರು ಮತ್ತು ಸ್ಥಳೀಯ ಜೀವರಕ್ಷಕರು ಹುಡುಕಾಡಿದ್ದರು. ಹೆಣ ಮೇಲೆ ಬರಬಹುದು ಎಂಬ ಕಾರಣದಿಂದ ಸಮುದ್ರ ತೀರದ ಉದ್ದಕ್ಕೂ ಹುಡುಕಾಟ ನಡೆದಿತ್ತು. ಆದರೆ, ಎಲ್ಲೂ ಶವ ಕೂಡಾ ಸಿಗದೆ ಇದ್ದಾಗ ಪೊಲೀಸರಿಗೆ ಸಂಶಯ ಬಂದಿದೆ.

ಕುಮಟಾ ಸಮೀಪದ ಕಡಲ ತೀರದಲ್ಲಿ ಹುಡುಕಾಟ

ಅವರು ಮನೆಯವರನ್ನು ವಿಚಾರಿಸಿದರು. ಮನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ, ವೈಮನಸ್ಸು ಇದ್ದಿದ್ದು ಗೊತ್ತಾಗಿದೆ. ಹೀಗಾಗಿ ಗಂಡ ಮತ್ತು ಮನೆಯವರನ್ನು ಹೆದರಿಸುವ ಉದ್ದೇಶದಿಂದ ಅವರು ಆತ್ಮಹತ್ಯೆ ನಾಟಕವಾಡಿರಬಹುದು ಎಂಬ ಸಂಶಯ ಬಂದಿದೆ.

ಸಮುದ್ರಕ್ಕೆ ಹಾರಿಲ್ಲ ಎಂದರೆ ಎಲ್ಲಿ ಹೋಗಿರಬಹುದು ಎಂಬ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿದಾಗ ಹಲವು ಕಡೆ ಹುಡುಕಲಾಯಿತು. ಕೊನೆಗೂ ಆಕೆ ಎಲ್ಲಾದರೂ ಇರಬಹುದು ಎನ್ನುವ ಪೊಲೀಸ್‌ ಸಂಶಯ ನಿಜವಾಯಿತು. ಆಕೆ ಹೊನ್ನಾವರದ ಬಾಡಿಗೆ ಮನೆಯೊಂದರಲ್ಲಿ ಅವಿತು ಕುಳಿತಿದ್ದರು.

ಮನೆಯವರಿಗೆ ಪಾಠ ಕಲಿಸುವ ಉದ್ದೇಶದಿಂದ ನಿವೇದಿತಾ ಈ ರೀತಿ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ, ಪುಟ್ಟ ಮಕ್ಕಳನ್ನು ರಸ್ತೆಯಲ್ಲಿ ಬಿಟ್ಟು ಹೋದ ಉದ್ದೇಶವೇನು ಎನ್ನುವುದು ಸ್ಪಷ್ಟವಿಲ್ಲ. ಕುಮಟಾ ಸಿಪಿಐ ತಿಮ್ಮಪ್ಪ ನೇತೃತ್ವದ ಪೊಲೀಸ್ ತಂಡದಿಂದ ಮಹಿಳೆಯನ್ನು ಬಂಧಿಸಲಾಗಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Self Harming: ಒಂದೇ ಕುಟುಂಬದ ಐವರ ಆತ್ಮಹತ್ಯೆಗೆ ಬಿಗ್‌ ಟ್ವಿಸ್ಟ್;‌ ಬಡ್ಡಿ ದಂಧೆ ಕರಾಳತೆ ಬಯಲು

ಇದೇ ವೇಳೆ ಆಕೆ ತನಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಕೂಡಾ ಈ ರೀತಿ ಮಾಡಿರಬಹುದು ಎಂಬ ಸಂಶಯವಿದೆ. ಸಾಮಾನ್ಯವಾಗಿ ತಮ್ಮ ಸಮಸ್ಯೆಗೆ, ತಾವು ಎದುರಿಸುತ್ತಿರುವ ಸಂಕಟಕ್ಕೆ ಯಾವ ಪರಿಹಾರವೂ ಇಲ್ಲದೆ ಹೋದಾಗ ಕೆಲವು ಹೆಣ್ಣುಮಕ್ಕಳು ಈ ರೀತಿಯ ನಾಟಕವಾಡುತ್ತಾರೆ.

Exit mobile version