Site icon Vistara News

Kempegowda Jayanti | ವಿಧಾನಸೌಧ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ: ಸಿಎಂ ಬೊಮ್ಮಾಯಿ ಘೋಷಣೆ

ಕೆಂಪೇಗೌಡರ ಪ್ರತಿಮೆ ಸ್ಥಾಪನೆ

ಬೆಂಗಳೂರು: ವಿಧಾನಸೌಧದ ಆವರಣದಲ್ಲಿ ಒಂದು ವರ್ಷದೊಳಗೆ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಘೋಷಿಸಿದರು.

ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ (ಜೂನ್‌ 27) ನಡೆದ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಕೆಂಪೇಗೌಡರು ಕಟ್ಟಿದ ಬೆಂಗಳೂರಿನಲ್ಲಿಯೇ ವಿಧಾನಸೌಧವಿದೆ. ಕೆಂಪೇಗೌಡರ ಪ್ರತಿಮೆ ಇಲ್ಲಿ ಇರಬೇಕಾದ್ದು ಸಹಜ. ಈಗಾಗಲೇ ಇಲ್ಲಿ ಅವರ ಪ್ರತಿಮೆ ಇರಬೇಕಾಗಿತ್ತು. ನಾವು ಅದನ್ನು ಮಾಡುತ್ತೇವೆ ಎಂದು ಅವರು ಹೇಳಿದರು.

ಎಸ್.ಎಂ.ಕೃಷ್ಣಾ ಅವರ ದೂರದೃಷ್ಟಿ ಬೆಂಗಳೂರಿನ ಅಭಿವೃದ್ಧಿಗೆ ಕಾರಣ

ಐಟಿ ಕ್ಷೇತ್ರವನ್ನು ಉತ್ಕಷ್ಟ ಮಟ್ಟಕ್ಕೆ ತಂದವರು ಎಸ್.ಎಂ. ಕೃಷ್ಣ ಅವರು. ಬೆಂಗಳೂರನ್ನು ಸಿಂಗಾಪುರ ಮಾಡುವುದಾಗಿ ಅಂದು ಅವರು ಹೇಳಿದ್ದರು. ಈಗಲಾದರೂ ದೂರದೃಷ್ಟಿಯಿಂದ ಕೆಲಸ ಮಾಡುವ ಅವಶ್ಯಕತೆ ಮತ್ತು ಅನಿವಾರ್ಯತೆ ಇದೆ. ಅವರ ದೂರದೃಷ್ಟಿ, ಕ್ರಿಯಾಶೀಲತೆ, ಬದ್ಧತೆ ಇವೆಲ್ಲವೂ ಬೆಂಗಳೂರಿನ ಅಭಿವೃದ್ಧಿಗೆ ಕಾರಣವಾಗಿವೆ. ಬೆಂಗಳೂರಿನ ಅಭಿವೃದ್ಧಿಯಲ್ಲಿ ಯುವಕರು, ಸಮಾಜಸೇವಕರ ಪಾತ್ರ ದೊಡ್ಡದಿದೆ ಎಂದರು.

ಇದನ್ನೂ ಓದಿ | ಕೆಂಪೇಗೌಡ ಜಯಂತಿ: ಕುಣಿದು ಕುಪ್ಪಳಿಸಿದ ಜನಪ್ರತಿನಿಧಿಗಳು, ತಡವಾಗಿ ಬಂದ HDK ದಂಪತಿ

ದೇಶದಲ್ಲಿಯೇ ಅತ್ಯುತ್ತಮ ವಿಮಾನನಿಲ್ದಾಣ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆಯನ್ನು ಟರ್ಮಿನಲ್ -2 ಉದ್ಘಾಟನೆಯ ಸಂದರ್ಭದಲ್ಲಿ ಅನಾವರಣ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆ ಮಾಡಿಸುವ ಉದ್ದೇಶವಿದೆ. ಪ್ರತಿಮೆ ಕಾರ್ಯಕ್ಕೆ ಈಗಾಗಲೇ ಸುಮಾರು 85 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ 23 ಕೋಟಿ ರೂ. ಅನುದಾನವನ್ನು ಸೌಂದರ್ಯೀಕರಣಕ್ಕೆ ಬಿಡುಗಡೆ ಮಾಡಲಾಗಿದೆ. ಕೆಂಪೇಗೌಡರ ಇತಿಹಾಸವನ್ನು ಬಿಂಬಿಸುವ ಕೆಲಸವನ್ನೂ ಇದು ಒಳಗೊಂಡಿದೆ ಎಂದರು.

ಯುವಕರ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಹತ್ವ
ಮಾಗಡಿಯಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಾಡಪ್ರಭುಗಳ ಇತಿಹಾಸ ಬಿಂಬಿಸುವ ಕೆಲಸವಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕೆಂಪೇಗೌಡರ ಅಧ್ಯಯನ ಕೇಂದ್ರವನ್ನು ಸ್ಥಾಪಿಸಬೇಕೆಂದು 50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಒಟ್ಟು 100 ಕೋಟಿ ರೂ. ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣ ಮಾಡುತ್ತೇವೆ. ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ 150 ಕೋಟಿ ರೂ. ಅನುದಾನ ನೀಡಲಾಗಿದೆ. ಸಮುದಾಯವನ್ನು ಕಟ್ಟಲೆಂದು ಯುವಕರ ಶಿಕ್ಷಣ ಮತ್ತು ಉದ್ಯೋಗಕ್ಕೆ ಮಹತ್ವ ನೀಡಲಾಗುತ್ತಿದೆ. ಇದರ ರೂಪುರೇಷೆಗಳನ್ನು ಸಿದ್ಧಪಡಿಸಿ ಜುಲೈ ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದರು.

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, “ಇದೇ ಮೊದಲ ಬಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಕೊಡಲು ನಿರ್ಧರಿಸಲಾಯಿತು. ಬೆಂಗಳೂರು ಬೆಳವಣಿಗೆ ಕಾರಣರಾದವರನ್ನು ಗುರುತಿಸಬೇಕು ಎಂದು ನಿರ್ಧರಿಸಲಾಗಿತ್ತು. ಪ್ರಶಸ್ತಿಗೆ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಲು ಸಮಿತಿಯೊಂದನ್ನು ರಚಿಸಲಾಗಿತ್ತು. ಆ ಸಮಿತಿ ಮಾಡಿದ ಆಯ್ಕೆಯಂತೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಇನ್ಫೋಸಿಸ್ ಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಹಾಗೂ ಅಂತರರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರು ಈ ಪ್ರಶಸ್ತಿಗೆ ಪಾತ್ರವಾಗಿದ್ದಾರೆ” ಎಂದರು.

ಇದನ್ನೂ ಓದಿ | Kempegowda Jayanti | ಬೆಂಗಳೂರನ್ನು ದೇಗುಲಗಳ ನಗರವನ್ನಾಗಿಸಿದ ಕೆಂಪೇಗೌಡ

ಡಾ. ನಿರ್ಮಲಾನಂದ ಮಹಾಸ್ವಾಮಿಗಳು

ಕೆಂಪೇಗೌಡರ ಹುಟ್ಟುಸ್ಥಳ ಕೆಂಪಾಪುರವನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಬೆಂಗಳೂರು ವಿವಿಯಲ್ಲಿ ಕೆಂಪೇಗೌಡ ಅಧ್ಯಯನ ಪೀಠ ಸ್ಥಾಪಿಸಲಾಗುವುದು. ಮೂರು ದಿನಗಳ ಬೆಂಗಳೂರು ಹಬ್ಬವನ್ನು ಆಚರಿಸುವ ಜತೆಗೆ ಕೆಂಪೇಗೌಡರ ಗೌರವಾರ್ಥ ಕಾಫಿ ಟೇಬಲ್ ಪುಸ್ತಕ ಹೊರತರಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮಾತನಾಡಿ, ಬೆಂಗಳೂರಿನ ಪ್ರತಿಷ್ಠೆಯನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಬೇಕಾಗಿದೆ. ಇದರ ಜತೆಗೆ, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಕೂಡ ಬೆಳೆಯಬೇಕಿದೆ ಎಂದರು. ಪುರಸ್ಕಾರದ ಜತೆ ಕೊಟ್ಟಿರುವ ನಗದನ್ನು, ತಮ್ಮನ್ನು ಬೆಳೆಸಿದ ರಾಮಕೃಷ್ಣ ಆಶ್ರಮಕ್ಕೆ ನೀಡಲಿದ್ದೇನೆ ಎಂದು ಅವರು ಘೋಷಿಸಿದರು.

ನಾರಾಯಣಮೂರ್ತಿ ಅವರ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಸುಧಾಮೂರ್ತಿ ಮಾತನಾಡಿ, ಕೆಂಪೇಗೌಡರು ಭದ್ರಬುನಾದಿಯೊಂದಿಗೆ ಈ ಊರು ಕಟ್ಟದಿದ್ದರೆ ಇಲ್ಲಿಗೆ ಐಟಿ , ಬಿಟಿ ಬರುತ್ತಿರಲಿಲ್ಲ. ಬೆಂಗಳೂರಿನ ಜತೆಗೆ ಹುಬ್ಬಳ್ಳಿ, ಧಾರವಾಡದಂತಹ ನಗರಗಳಲ್ಲಿಯೂ ಉದ್ಯೋಗ ಸಿಗುವಂತೆ ಮಾಡಿ ವೇಳೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದರು.

ಸಮಾರಂಭದಲ್ಲಿ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ, ಸಚಿವರಾದ ಡಾ. ಸಿ ಎನ್ ಅಶ್ವತ್ಥ ನಾರಾಯಣ, ಆರ್ ಅಶೋಕ, ಕೆ. ಗೋಪಾಲಯ್ಯ, ಸುನಿಲ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಮುನಿರತ್ನ ಮತ್ತು ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ | ಎಸ್‌ ಎಂ ಕೃಷ್ಣ, ನಾರಾಯಣ ಮೂರ್ತಿ, ಪ್ರಕಾಶ್‌ ಪಡುಕೋಣೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ

Exit mobile version