Site icon Vistara News

EV Charging: ಕರ್ನಾಟಕವೇ ಕಿಂಗ್;‌ ಅತಿ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ರಾಜ್ಯ!

EV charging

ಬೆಂಗಳೂರು: ಸುಸ್ಥಿರ ಇಂಧನ (Sustainable Fuel) ಬಳಕೆಯಲ್ಲಿ ಕರ್ನಾಟಕ (Karnataka) ದೇಶಕ್ಕೇ ಮತ್ತೆ ಮಾದರಿಯಾಗಿದೆ. ದೇಶದಲ್ಲೇ ಅತಿ ಹೆಚ್ಚು ವಿದ್ಯುಚ್ಚಾಲಿತ ವಾಹನ (Electric Vehicle) ಚಾರ್ಜಿಂಗ್‌ ಸ್ಟೇಶನ್‌ಗಳನ್ನು (EV Charging Station) ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕಕ್ಕೆ ದೊರೆತಿದೆ.

ಕೇಂದ್ರದ ಬ್ಯೂರೋ ಆಫ್ ಎನರ್ಜಿ ಎಫಿಶಿಯನ್ಸಿ ಈ ಬಗ್ಗೆ ಒಂದು ವರದಿ ಪ್ರಕಟಿಸಿದೆ. ಅದರ ಪ್ರಕಾರ, ರಾಜ್ಯದಲ್ಲಿ 5,765 ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳಿವೆ. ಇದು ಇತರೆಲ್ಲ ರಾಜ್ಯಗಳಿಗಿಂತ ಹೆಚ್ಚು. ಈ ಮೂಲಕ ದೇಶದಲ್ಲಿ ಕರ್ನಾಟಕ ಅತಿ ಹೆಚ್ಚು ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ‘ನಂಬರ್ ಒನ್’ ಸ್ಥಾನ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಇಂಧನ ಸಚಿವ ಕೆ.ಜೆ. ಜಾರ್ಜ್, ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯದ ಬದ್ಧತೆಯನ್ನು ಈ ಸಾಧನೆ ಎತ್ತಿ ತೋರಿಸುತ್ತದೆ. ಜೊತೆಗೆ ರಾಜ್ಯದ ಇವಿ ನೀತಿಯು ಇವಿ ಬಳಕೆದಾರರು, ವಾಹನ ಉತ್ಪಾದಕರಿಗೆ ಪೂರಕವಾಗಿದೆ ಎಂದು ತಿಳಿಸಿದ್ದಾರೆ.

ಪೆಟ್ರೋಲ್ ಹಾಗೂ ಡೀಸೆಲ್ ದುಬಾರಿಯಾಗಿರುವ ಇಂದಿನ ದಿನಮಾನಗಳಲ್ಲಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ಒಂದೊಮ್ಮೆ ಚಾರ್ಜ್ ಖಾಲಿಯಾದರೆ ಚಾರ್ಜಿಂಗ್ ಪಾಯಿಂಟ್ ಹುಡುಕೋದೇ ದೊಡ್ಡ ಸಮಸ್ಯೆ ಎಂಬುದು ಇವಿ ಹೊಂದಿರುವವರ ಚಿಂತೆ. ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚಿನ ಚಾರ್ಜಿಂಗ್‌ ಸ್ಟೇಶನ್‌ಗಳಿವೆ. ರಾಜ್ಯಾದ್ಯಂತ ಇನ್ನಷ್ಟು ಹೆಚ್ಚಬೇಕಿವೆ ಎಂಬುದು ಇವಿ ಹೊಂದಿರುವವರ ಆಗ್ರಹ.

ಬೆಂಗಳೂರಿನಲ್ಲಿ ನಾಲೆಜ್‌-ಹೆಲ್ತ್‌ ಸಿಟಿ ಮೊದಲ ಹಂತದ ಯೋಜನೆಗೆ ಸದ್ಯದಲ್ಲೇ ಚಾಲನೆ: ಎಂ.ಬಿ. ಪಾಟೀಲ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕೆಎಚ್ಐಆರ್‌ಸಿಟಿ ಯೋಜನೆಯ (KHIR City Project) ಸಲಹಾ ಮಂಡಳಿಯ ಪ್ರಥಮ ಸಭೆ ಮಂಗಳವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ನೇತೃತ್ವದಲ್ಲಿ ಇಲ್ಲಿನ ಖನಿಜ ಭವನದಲ್ಲಿ ನಡೆಯಿತು.

ಸಲಹಾ ಮಂಡಳಿ ಸದಸ್ಯರಾದ ನಾರಾಯಣ ಹೃದ್ರೋಗ ಸಂಸ್ಥೆ ಅಧ್ಯಕ್ಷ ಡಾ. ದೇವಿಶೆಟ್ಟಿ, ಬಯೊಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಇನ್ಫೋಸಿಸ್ ಆಡಳಿತ ಮಂಡಳಿ ಸದಸ್ಯ ಮೋಹನದಾಸ್ ಪೈ, ಹ್ರದ್ರೋಗ ತಜ್ಞ ಡಾ.ವಿವೇಕ್ ಜವಳಿ, ಆ್ಯಕ್ಸಲ್ ಪಾಲುದಾರ ಪ್ರಶಾಂತ್ ಪ್ರಕಾಶ್, ಅಮೆರಿಕಾದ ಬೋಸ್ಟನ್ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಟ್ರಸ್ಟಿ ರಾಂಚ್ ಕಿಂಬಾಲ್, ವೆಕ್ಸ್ ಫೋರ್ಡ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆ ಕಾರ್ಯನಿರ್ವಾಹಕ ಉಪಾಧ್ಯಕ್ಷ ಥಾಮಸ್ ಓಶ ಮತ್ತು ಆಸ್ಟೀನ್‌ನ ನಾವೀನ್ಯತೆ ಮತ್ತು ಉದ್ಯಮಶೀಲತೆ ವಿಭಾಗದ ಡೀನ್ ಸ್ಟೀಫನ್ ಎಕ್ಕರ್ ಅವರು ವರ್ಚುಯಲ್ ಆಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಸಲಹಾ ಮಂಡಳಿಯ ಸದಸ್ಯರಿಗೆ ಭೂಮಿಪುತ್ರ ಸಂಸ್ಥೆಯು ನಿರ್ಮಿಸಿರುವ ಯೋಜನೆಯ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು. ಜತೆಗೆ ಯೋಜನೆಗೆ ಸಂಬಂಧಿಸಿದಂತೆ ಸಲಹಾ ಮಂಡಳಿಯ ಸದಸ್ಯರಿಂದ ಸಲಹೆ ಸೂಚನೆಗಳನ್ನು ಆಲಿಸಲಾಯಿತು. ಸಭೆಯಲ್ಲಿ ವರ್ಚುಯಲ್ ಆಗಿ ಭಾಗವಹಿಸಿದ್ದ ಸಮಿತಿಯ ಸದಸ್ಯರು, ದೊಡ್ಡಬಳ್ಳಾಪುರ- ದಾಬಸ್‌ಪೇಟೆ ಮಧ್ಯದಲ್ಲಿ ಬರುವ ಕೆಎಚ್ಐಆರ್ ಸಿಟಿಯ ಪರಿಕಲ್ಪನೆ ಅತ್ಯದ್ಭುತವಾಗಿದ್ದು, ಬೆಂಗಳೂರಿನ ಬೆಳವಣಿಗೆಗೆ ಅತ್ಯಗತ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: PM Narendra Modi : ಆಗಸ್ಟ್​ 23ರಂದು ಉಕ್ರೇನ್​ ಪ್ರವಾಸಕ್ಕೆ ತೆರಳಲಿದ್ದಾರೆ ಪ್ರಧಾನಿ ಮೋದಿ

Exit mobile version