Site icon Vistara News

Thanveer Peera : ತನ್ವೀರ್‌ ಪೀರಾ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋದಿಯೇ ಭಾಗವಹಿಸಿದ್ದರು!?

Thanveer Peera

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮುಸ್ಲಿಂ ಸಮುದಾಯ ಆಯೋಜಿಸಿದ್ದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ (Muslim Clerics meet) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಸಯ್ಯದ್‌ ತನ್ವೀರ್‌ ಹಷ್ಮಿ (ತನ್ವೀರ್‌ ಪೀರಾ- Sayed Tanveer Hashmi) ಅವರ ಜತೆ ಭಾಗವಹಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಪೀರಾ ಅವರಿಗೆ ಐಸಿಸ್‌ ಸಂಪರ್ಕವಿದೆ (ISIS Connection). ಇಂಥವರ ಜತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿರುವುದು ಐಸಿಸ್‌ನ್ನು ಬೆಂಬಲಿಸಿದಂತಾಗಿದೆ ಎಂದು ಹೇಳಿದರು. ಈ ನಡುವೆ, ಸಯ್ಯದ್‌ ತನ್ವೀರ್‌ ಹಷ್ಮಿ ಅವರು ಆಯೋಜಕರಾಗಿದ್ದ ಒಂದು ಕಾರ್ಯಕ್ರಮದಲ್ಲಿ ಸ್ವತಃ ನರೇಂದ್ರ ಮೋದಿ ಅವರೇ ಭಾಗವಹಿಸಿದ್ದರು ಎಂಬ ಅಂಶ ಬಯಲಾಗಿದೆ. ಈಗ ಈ ವಿಷಯವನ್ನು ಮುಂದಿಟ್ಟುಕೊಂಡು ಯತ್ನಾಳ್‌ ಅವರನ್ನು ಪ್ರಶ್ನಿಸಲಾಗುತ್ತಿದೆ.

ಹುಬ್ಬಳ್ಳಿಯಲ್ಲಿ ಮುಸ್ಲಿಂ ಧರ್ಮಗುರುಗಳ ಸಮಾವೇಶ ಆಯೋಜಿಸಿದ್ದ ಸಯ್ಯದ್ ತಾಜುದ್ದೀನ್‌ ಖಾದ್ರಿ (Syed Tajuddeen Khadri) ಅವರು ಯತ್ನಾಳ್‌ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ್ದು, ಮೋದಿ ಅವರು ತನ್ವೀರ್‌ ಪೀರಾ ಅವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೋದಿ ಅವರು ಭಾಗವಹಿಸಿದ್ದನ್ನು ನೆನಪಿಸಿದ್ದಾರೆ.

ತನ್ವೀರ್ ಪೀರಾಗೆ ಉಗ್ರರ ನಂಟಿದೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಆರೋಪವನ್ನು ಅಲ್ಲಗಳೆದಿರುವ ತಾಜುದ್ದೀನ್‌ ಅವರು, ತನ್ವೀರ್‌ ಪೀರಾ ಕೇವಲ ಒಬ್ಬ ಮೌಲ್ವಿ ಅಲ್ಲಾ, ಅವರೊಬ್ಬ ಸೂಫಿ ಸಂತ ಎಂದಿದ್ದಾರೆ.

ʻʻ2016ರಲ್ಲಿ ದೆಹಲಿಯಲ್ಲಿ ಸೂಫಿ ಸಮಾವೇಶ ನಡೆದಿತ್ತು. ಆ ಕಾರ್ಯಕ್ರಮದ ಆಯೋಜಕರಲ್ಲಿ ಸೂಫಿ ತನ್ವೀರ್ ಪೀರಾ ಕೂಡಾ ಒಬ್ಬರಾಗಿದ್ದರು. ಆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ದೇಶದ ‌ಪ್ರಧಾನಿ ನರೇಂದ್ರ ‌ಮೋದಿಯವರು ಕೂಡ ಭಾಗಿಯಾಗಿದ್ದರು. ಆವಾಗ ಬಸನಗೌಡ ಪಾಟೀಲ್ ಯತ್ನಾಳ ಏಕೆ ಧ್ವನಿ ಎತ್ತಲಿಲ್ಲ?ʼʼ ಎಂದು ಪ್ರಶ್ನಿಸಿದ್ದಾರೆ.

2016ರಲ್ಲಿ ನಡೆದ ಸೂಫಿ ಸಮಾವೇಶದಲ್ಲಿ ಮೋದಿ. ಈ ಕಾರ್ಯಕ್ರಮದ ಆಯೋಜಕರಲ್ಲಿ ತನ್ವೀರ್‌ ಪೀರಾ ಒಬ್ಬರು ಎಂದು ತಾಜುದ್ದೀನ್‌ ಖಾದ್ರಿ ಹೇಳಿದ್ದಾರೆ.

ʻಇತ್ತೀಚೆಗೆ ಕಾಗಿನೆಲೆಯಲ್ಲಿ ನಡೆದ ಕನಕ‌ ಜಯಂತಿಯಲ್ಲಿ ತನ್ವೀರ್ ಪೀರಾ ಉಪಸ್ಥಿತರಿದ್ದರು.ತನ್ವೀರ್ ಪೀರಾ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ, ಬಹಳ ಒಳ್ಳೆಯ ಕುಟುಂಬದಿಂದ ಬಂದಿದ್ದಾರೆ. ಇಂತವರ ಮೇಲೆ ಐಸಿಸ್‌ ನಂಟಿನಂಥ ಗಂಭೀರ ಆರೋಪ ಮಾಡೋದು ಸರಿಯಲ್ಲ.ʼʼ ಎಂದು ತಾಜುದ್ದೀನ್‌ ಹೇಳಿದ್ದಾರೆ.

ʻʻತನ್ವೀರ್ ಪೀರಾ ಹುಟ್ಟಿದ್ದು ವಿಜಯಪುರದಲ್ಲಿ, ಬಿಜಾಪುರ ಷರೀಫ್‌ನ ಧಾರ್ಮಿಕ ನಾಐಕರು. ಅವರು ಬಹಳಷ್ಟು ಸಾಮಾಜಿಕ ಕೆಲಸ ಮಾಡಿದ್ದಾರೆ. ಭಯೋತ್ಪಾದಕರ ಸಂಪರ್ಕದ ಬಗ್ಗೆ ನಿಮಗೆ ಮಾಹಿತಿ ಇದ್ದರೆ, ಪೊಲೀಸರಿಗೆ ಮೊದಲೆ ಮಾಹಿತಿ ಕೊಡಬೇಕಿತ್ತು. ತಮ್ಮ ವೈಯಕ್ತಿಕ ಕಾರಣಕ್ಕೆ ಸುಳ್ಳು ಆರೋಪ ಮಾಡೋದು ಸರಿಯಲ್ಲ‌ʼʼ ಎಂದು ಹೇಳಿದ್ದಾರೆ ತಾಜುದ್ದೀನ್‌.

ಯಾರು ಭಾಗವಹಿಸುತ್ತಾರೆಂದು ನೋಡಿಕೊಳ್ಳಬೇಕಿತ್ತು ಎಂದಿದ್ದರು ಯತ್ನಾಳ್‌

ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಅಲ್ಲಿ ಬೇರೆ ಯಾರೆಲ್ಲ ಇರುತ್ತಾರೆ ಎಂಬ ಮಾಹಿತಿ ಇರುತ್ತದೆ. ಸಿದ್ದರಾಮಯ್ಯ ಅವರು ಗೊತ್ತಿದ್ದೇ ಭಾಗವಹಿಸಿದ್ದಾರೆ ಎಂದು ಯತ್ನಾಳ್‌ ಹೇಳಿದ್ದರು. ಜತೆಗೆ ತನ್ವೀರ್‌ ಪೀರಾ ಅವರ ಬಗ್ಗೆ NIA ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಪತ್ರ ಬರೆದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಕಾರ್ಯಕ್ರಮಗಳಲ್ಲೂ ಆಯೋಜಕರು ಯಾರು, ಭಾಗವಹಿಸುವವರು ಯಾರು ಎಂದು ಪರಿಶೀಲನೆ ಮಾಡಲಾಗುತ್ತದೆ.

ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಗಳೇನು?

  1. ತನ್ವೀರ್ ಪೀರಾ ಅನ್ನೋ ಐಸಿಸ್ ಉಗ್ರ ಸಂಘಟನೆಯ ಸಂಪರ್ಕ ಹೊಂದಿರುವ ವ್ಯಕ್ತಿ ಜತೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿರುವ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕು. ಹೀಗಾಗಿ ಈ ಪ್ರಕರಣವನ್ನು ಎನ್‌ಐಗೆ ವಹಿಸುವುದು ಸೂಕ್ತ.
  2. ತನ್ವೀರ್‌ ಪೀರಾ ಎಂಬ ವ್ಯಕ್ತಿ ಐಸಿಸ್ ನಾಯಕರನ್ನು ಭೇಟಿ ಮಾಡಿದ ಉದ್ದೇಶವನ್ನು ಕಂಡುಹಿಡಿಯಲು, ಅವರ ಪ್ರಯಾಣದ ಖರ್ಚು ವೆಚ್ಚಗಳ ಮೂಲಗಳನ್ನು ಕಂಡುಕೊಳ್ಳಲು, ಹಣಕಾಸು ನಿರ್ವಹಣೆಯಲ್ಲಿ ಆ ವ್ಯಕ್ತಿಯ ಪಾತ್ರ ಏನು ಎಂಬ ಬಗ್ಗೆ ತಿಳಿತಬೇಕಿದೆ.
  3. ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹಲವಾರು ಸಭೆಗಳಲ್ಲಿ ಪೀರಾ ಕಾಣಿಸಿಕೊಂಡಿದ್ದು, ಎಲ್ಲ ವಿಷಯಗಳ ಬಗ್ಗೆ ತನಿಖೆ ನಡೆಸಲು ಪ್ರಕರಣವನ್ನು ಎನ್ಐಎಗೆ ವಹಿಸಬೇಕು.
  4. ಪೀರಾ ಈ ಹಿಂದೆ ಮಧ್ಯಪ್ರಾಚ್ಯ ದೇಶಗಳಲ್ಲಿನ ತೀವ್ರಗಾಮಿ ಇಸ್ಲಾಮಿಕ್ ಸಂಘಟನೆಯ ನಾಯಕರನ್ನು ಭೇಟಿಯಾಗಿರುವ ಬಗ್ಗೆ ನನಗೆ ತಿಳಿದಿದೆ.
  5. ನಮ್ಮ ದೇಶದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಉದ್ದೇಶದಿಂದ ಪೀರಾ ಮುಸ್ಲಿಂ ದೇಶಗಳಿಂದ ಹಣವನ್ನು ತರುತ್ತಿದ್ದಾರೆ ಎಂಬ ವಿಶ್ವಾಸಾರ್ಹ ಮಾಹಿತಿಯೊಂದು ನನಗೆ ಸಿಕ್ಕಿದೆ.
  6. ಸಿಎಂ ತಮ್ಮ ವೈಯಕ್ತಿಕ ಭದ್ರತೆ ಮತ್ತು ಗುಪ್ತಚರ ಸಲಹೆಯನ್ನು ನಿರ್ಲಕ್ಷಿಸಿದ್ದಾರೆ. ಇಲ್ಲವೇ, ತಮ್ಮ ರಾಜಕೀಯ ಉದ್ದೇಶಕ್ಕಾಗಿ ಪೀರಾ ಅವರನ್ನು ಉದ್ದೇಶಪೂರ್ವಕವಾಗಿ ಭೇಟಿ ಮಾಡಲು ಅನುವು ‌ಮಾಡಿಕೊಟ್ಟಿದ್ದಾರೆ.
  7. ಭಯೋತ್ಪಾದನೆಯ ಪರವಾಗಿ ಇರುವ ವ್ಯಕ್ತಿಗಳು ಉನ್ನತ ಮಟ್ಟದ ರಾಜಕೀಯ ನಾಯಕರನ್ನು ಭೇಟಿಯಾಗಲು ಸಾಧ್ಯವಾಗುತ್ತದೆ. ಅದರಲ್ಲೂ ವಿಶೇಷವಾಗಿ ಮಾಧ್ಯಮಗಳು ಮತ್ತು ನಾಗರಿಕರ ಸಮ್ಮುಖದಲ್ಲಿ ಈ ಭೇಟಿಗಳು ನಡೆಯುತ್ತವೆ.
  8. ಪೀರಾ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ನಮ್ಮ ಸ್ಥಳೀಯ ಪೊಲೀಸರು ಮುಂದಾಗುವುದಿಲ್ಲ. ಕಾರಣ, ಅವರು ರಾಜ್ಯ ಆಡಳಿತದೊಂದಿಗೆ ಶಾಮೀಲಾಗಿದ್ದಾರೆ ಎಂಬುದು ನನ್ನ ಅನುಮಾನವಾಗಿದೆ. ಹೀಗಾಗಿ ಪೀರಾ ಅವರನ್ನು ಎನ್‌ಐಎ ತನಿಖೆ ಆಗಲಿ.

ಇದನ್ನೂ ಓದಿ: CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Exit mobile version