ಬೆಂಗಳೂರು: ದೇಶದ ಸ್ವಾತಂತ್ರ್ಯಕ್ಕಾಗಿ ಅದೆಷ್ಟೋ ಮಂದಿ ಬಲಿದಾನ ಮಾಡಿದ್ದಾರೆ. ದೇಶಕ್ಕಾಗಿ ಹೋರಾಡಿದ್ದಾರೆ.
ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿ ಎಲ್ಲರೂ ಅವರವರ ಕಾಣಿಕೆಯನ್ನು ಕೊಟ್ಟಿದ್ದಾರೆ. ಇಲ್ಲಿ ಯಾರನ್ನೂ ಮರೆಯವ ಪ್ರಶ್ನೆಯೇ ಇಲ್ಲ. ಎಲ್ಲರೂ ಸ್ವರಣಾರ್ಹರೇ: ಹೀಗೆಂದು ಸ್ಪಷ್ಟ ಶಬ್ದಗಳಲ್ಲಿ ಹೇಳಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ.
ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ನೆನೆದ ಬೊಮ್ಮಾಯಿ ಅವರು ನೆಹರೂ ಸೇರಿದಂತೆ ಹಲವು ನಾಯಕರನ್ನು ನೆನಪು ಮಾಡಿಕೊಂಡರು. ಇತ್ತೀಚೆಗೆ ಸರಕಾರ ಬಿಡುಗಡೆ ಮಾಡಿದ ಜಾಹೀರಾತಿನಲ್ಲಿ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರನ್ನು ಉಲ್ಲೇಖಿಸಿರಲಿಲ್ಲ. ಇದು ಕಾಂಗ್ರೆಸ್‌ನ್ನು ಕೆರಳಿಸಿತ್ತು. ಹಲವು ನಾಯಕರು ಈ ರೀತಿ ನೆಹರೂ ಅವರ ಚಿತ್ರವನ್ನು ಕೈಬಿಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದರು.
ಇದೀಗ ಬೊಮ್ಮಾಯಿ ಅವರು ನೆಹರೂ ಅವರ ಕೊಡುಗೆಯನ್ನು ಉಲ್ಲೇಖಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಂತಾಗಿದೆ. ಕೆಂಪುಕೋಟೆಯ ಆಳುವೇರಿಯಲ್ಲಿ ನಿಂತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ನೆಹರೂ ಅವರನ್ನು ಸ್ಮರಿಸಿದ್ದಾರೆ.
ಮರೆಯದಿರೋಣ ಎಂದ ಸಿಎಂ
ಇಲ್ಲಿ ಯಾರನ್ನೂ ಮರೆಯುವ ಪ್ರಶ್ನೆ ಇಲ್ಲ. ಪ್ರಧಾನಿಗಳು ಮಾತ್ರವಲ್ಲ, ಅನೇಕ ಮಹನೀಯರು ಕೊಡುಗೆ ಕೊಟ್ಟಿದ್ದಾರೆ. ಎಲ್ಲ ಪ್ರಧಾನಿಗಳ ಕಾಣಿಕೆ ಕುರಿತು ಪ್ರಧಾನ ಮಂತ್ರಿಯವರು ದಿಲ್ಲಿಯಲ್ಲಿ ಮ್ಯೂಸಿಯಂ ಮಾಡಿದ್ದಾರೆ ಎಂದು ಬೊಮ್ಮಾಯಿ ಇದೇ ಸಂದರ್ಭದಲ್ಲಿ ಹೇಳಿದರು.
ʻʻಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಕೊಡದಿದ್ದರೆ ಸ್ವಾತಂತ್ರ್ಯ ದಿನದ ಜತೆಗೆ ಜನೋತ್ಸವ ಆಚರಣೆ ಆಗುತ್ತಿರಲಿಲ್ಲ. ಇಂದು ಅಂಬೇಡ್ಕರ್ ಅವರನ್ನು ಮರೆಯಲಾಗುತ್ತದೆ, ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಮರೆಯಲಾಗುತ್ತಿದೆ, ಅಬ್ದುಲ್ ಗಫೂರ್ ಖಾನ್ ಅವರನ್ನು ಮರೆಯಲಾಗುತ್ತಿದೆ. ಅವರನ್ನು ನಾವು ಮರೆಯಬಾರದುʼʼ ಎಂದು ಇದೇ ವೇಳೆ ಬೊಮ್ಮಾಯಿ ಹೇಳಿದರು.
ʻʻಒಬ್ಬ ವ್ಯಕ್ತಿಯ ಜೀವನದಲ್ಲಿ ೭೫ ವರ್ಷ ಹಿರಿಯ ವಯಸ್ಸು, ಆದರೆ ದೇಶದ ವಿಷಯದಲ್ಲಿ ಅದು ಅನುಭವವಿರುವ ಯೌವನದ ವಯಸ್ಸು. ಈ ಸುದೀರ್ಘಅನುಭವದ ಹಿನ್ನೆಲೆಯಲ್ಲಿ ಆತ್ಮಾವಲೋಕನ, ಸಿಂಹಾವಲೋಕನ ಮಾಡಬೇಕಿರುವ ಅಮೃತ ಕಾಲʼʼ ಎಂದರು ಬೊಮ್ಮಾಯಿ.
ಹೋರಾಟ ಶುರು ಮಾಡಿದ್ದೇ ನಾವು
ʻʻಈ ಸ್ವಾತಂತ್ರ್ಯದ ಇತಿಹಾಸದ ಪುಟಗಳನ್ನು ತೆಗೆದು ನೋಡಿದಾಗ, ಸ್ವಾತಂತ್ರ್ಯ ಲಭಿಸಲು ಅನೇಕ ಮುಖ್ಯ ಕಾರಣಗಳಿವೆ.
ಬ್ರಿಟಿಷರು ದೇಶಕ್ಕೆ ಆಗಮಿಸಿದ ಕೇವಲ ಐವತ್ತು ವರ್ಷದಲ್ಲೇ ಅವರನ್ನು ಹೊರದೂಡುವ ಹೋರಾಟಗಳು ಆರಂಭವಾದವು. ರೈತ ಹೋರಾಟದ ಜತೆಗೆ ಸಿಪಾಯಿ ದಂಗೆ, ಜಲಿಯನ್ ವಾಲಾಬಾಗ್, ಲೋಕಮಾನ್ಯ ತಿಲಕ್, ವೀರ ಸಾವರ್ಕರ್, ಜಾನ್ಸಿ ರಾಣಿಯರ ಹೋರಾಡ ತೀವ್ರ ಪರಿಣಾಮ ಬೀರಿತು. ಸಿಪಾಯಿದಂಗೆಯನ್ನು ಮೊದಲ ಸ್ವಾತಂತ್ರ್ಯ ಹೋರಾಟ ಎಂದು ಕರೆಯುತ್ತೇವೆ, ಅದಕ್ಕೂ ಮುನ್ನ 1920ರಲ್ಲೇ ನಮ್ಮ ಕಿತ್ತೂರು ಚೆನ್ನಮ್ಮ ಬ್ರಿಟಿಷರಿಗೆ ಸೆಡ್ಡು ಹೊಡೆದಿದ್ದರು. ಒಂದು ಸಣ್ಣ ಸಂಸ್ಥಾನ ಸಹ ಬೃಹತ್ ಬ್ರಿಟಿಷ್ ಸೈನ್ಯವನ್ನು ಸೋಲಿಸಬಹುದು ಎಂದು ತೋರಿಸಿಕೊಟ್ಟರುʼʼ ಎಂದು ಕೊಂಡಾಡಿದರು ಬೊಮ್ಮಾಯಿ.
ʻʻಸುಭಾಷ್ ಚಂದ್ರ ಬೋಸ್ ನಾಡಿನ ಹೆಮ್ಮೆಯ ಪುತ್ರ. ಇದೆಲ್ಲದರ ನಡುವೆ, ಅಹಿಂಸಾ ಮಾರ್ಗದ ಮೂಲಕವೂ ಸ್ವಾತಂತ್ರ್ಯ ಗಳಿಸಬಹುದು ಎಂದು ತೋರಿಸಿಕೊಟ್ಟವರು ಮಹಾತ್ಮಾ ಗಾಂಧೀಜಿ. ಅವರ ನೇತೃತ್ವದಲ್ಲಿ ರೈತರು, ಕೂಲಿಕಾರ್ಮಿಕರು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಇದರ ಜತೆಗೆ ನಾವು ದೇಶದಲ್ಲೇ ಬಟ್ಟೆ, ಉಕ್ಕು ತಯಾರಿಕೆಯನ್ನು ಆರಂಭಿಸಿದೆವು. ಇದರಿಂದ, ತಾವು ಭಾರತವನ್ನು ಆಳಲು ಸಾಧ್ಯವಿಲ್ಲ ಎಂದು ಅರಿವಾಗಿತ್ತು. ಇದೇ ವೇಳೆ ವಿಶ್ವ ಯುದ್ಧದಲ್ಲಿ ಸೋಲುಂಡು ಎಲ್ಲ ಕಡೆಗಳಿಂದ ಕಾಲನಿಗಳನ್ನು ತೆರವುಗೊಳಿಸಿದರುʼʼ ಎಂದು ಹೇಳಿದರು ಬೊಮ್ಮಾಯಿ.
ರೈತನಿಗೆ ಮೊದಲ ನಮನ
ʻʻಸ್ವತಂತ್ರ ಭಾರತವನ್ನು ರಕ್ಷಣೆ ಮಾಡುತ್ತಿರುವ ರೈತನಿಗೆ ಮೊದಲ ನಮನ, ಗಡಿಯಲ್ಲಿ ನಮ್ಮನ್ನು ರಕ್ಷಣೆ ಮಾಡುತ್ತಿರುವ ಸೈನಿಕರಿಗೆ ನಮನಗಳು, ಆಂತರಿಕ ಸುರಕ್ಷತೆಯನ್ನು ಕಾಪಾಡುತ್ತಿರುವ ಪೊಲೀಸರಿಗೆ ಸಲಾಂ, ದೇಶವನ್ನು ಕಟ್ಟಲು ಶ್ರಮಿಸುತ್ತಿರುವ ಶಿಕ್ಷಕರಿಗೆ, ವಿಜ್ಞಾನಿಗಳಿಗೆ, ಎಂಜಿನಿಯರ್‌ಗಳಿಗೆ, ಕೈಗಾರಿಕೆ ಸ್ಥಾಪಿಸಿದವರು, ಕೂಲಿಕಾರ್ಮಿಕರೂ, ದೀನ ದಲಿತರೂ ದೇಶ ಕಟ್ಟಲು ಕೊಡುಗೆ ನೀಡಿದ್ದಾರೆ, ಅವರೆಲ್ಲರಿಗೂ ನಮನಗಳುʼʼ ಎಂದರು ಸಿಎಂ.
ಪ್ರಾಣ ಬೇಡ, ಬೆವರ ಹನಿ ಸಾಕು
ʻʻಇಂದು ದೇಶಕ್ಕಾಗಿ ಪ್ರಾಣ ಕೊಡುವ ಅಗತ್ಯ ಇಲ್ಲ, ಯುವಕರ ಕಾರ್ಯ, ಬೆವರಿನಹನಿಗಳು ದೇಶಕ್ಕೆ ಬೇಕಾಗಿವೆ. ನಮ್ಮ ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಿದಾಗ ದೇಶ ಅಭಿವೃದ್ಧಿ ಆಗುತ್ತದೆ. ನಮ್ಮ ದೇಶದಲ್ಲಿ ಬುದ್ಧಿವಂತರು, ಶ್ರಮಜೀವಿಗಳು ಇದ್ದಾರೆ, ಅದಕ್ಕೊಂದು ದಿಕ್ಕುಬೇಕಿದೆ. ಸುದೈವದಿಂದ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವ ಸಿಕ್ಕಿದೆʼʼ ಎಂದು ಖುಷಿಯಾದರು ಸಿಎಂ ಬೊಮ್ಮಾಯಿ.
ಇದನ್ನೂ ಓದಿ| ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ನೆಹರೂರನ್ನು ಸ್ಮರಿಸಿದ ಪ್ರಧಾನಿ ಮೋದಿ; ಕರ್ನಾಟಕ ಬಿಜೆಪಿ ಎಡವಿತಾ?