ಹಾವೇರಿ: ರಾಣೆಬೆನ್ನೂರಿನಲ್ಲಿ ಮಂಗಳವಾರ (ಮಾ. 14) ರಾತ್ರಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ (IT Raid) ನಡೆಸಿದ್ದರ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿರುವ ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್, ನನ್ನನ್ನು ಎಲ್ಲರೂ ಸೇರಿ ರಾಜಕೀಯವಾಗಿ ಮುಗಿಸಿದ್ದಾರೆ. ಬಿಜೆಪಿ ಮಾನ್ಯತೆ ಕೊಟ್ಟರೆ ಪಕ್ಷದ ಜತೆ ಇರುತ್ತೇನೆ. ಇವರ ಜತೆಗೆ ಹೋಗಿದ್ದಕ್ಕೆ ಅನರ್ಹ ಪಟ್ಟ ಕಟ್ಟಿದರು. ಇನ್ನೊಂದು ತಿಂಗಳು ಕಾಯುತ್ತೇನೆ. ಸೂಕ್ತವಾಗಿ ಸ್ಪಂದಿಸದಿದ್ದರೆ ನನ್ನ ದಾರಿ ನನಗೆ. ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಅಸಮಾಧಾನವನ್ನು ಹೊರಹಾಕಿದ್ದಾರೆ.
ರಾಣೆಬೆನ್ನೂರು ನಿವಾಸದಲ್ಲಿ ಬುಧವಾರ (ಮಾ. 15) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ನಾನು ಸಹಕಾರವನ್ನು ಕೊಟ್ಟಿದ್ದೇನೆ. ಈಗ ಅವರು ಸಹಕಾರ ಕೊಡದೇ ಇದ್ದರೆ ನನ್ನ ದಾರಿ ನನಗೆ. ನಾನು ನೋವುಂಡರೂ ಸಹಕಾರವನ್ನು ಕೊಟ್ಟಿದ್ದೇನೆ ಎಂದು ಬೇಸರ ಹೊರಹಾಕಿದರು.
ಇದನ್ನೂ ಓದಿ: ಅಶ್ವತ್ಥನಾರಾಯಣ ಅಸ್ವಸ್ಥರಾದಾಗ ಉರಿಗೌಡ, ನಂಜೇಗೌಡ ಸಿಕ್ಕಿರಬೇಕು: ಡಿ.ಕೆ. ಸುರೇಶ್ ವ್ಯಂಗ್ಯ
ನನ್ನನ್ನು ನಡು ನೀರಲ್ಲಿ ಕೈ ಬಿಟ್ಟಿರಿ. ರಾಜಕೀಯ ಜೀವನ ಹಾಳು ಮಾಡಿದ್ದೀರಿ ಎಂದು ಶಾಸಕಾಂಗ ಸಭೆಯಲ್ಲಿ ಕೇಳಿದ್ದೆ. ಆಗ ಅವರೇನೂ ಹೇಳಲಿಲ್ಲ. ಇವರಿಬ್ಬರನ್ನೂ ಅಧಿಕಾರಕ್ಕೆ ತಂದೆ. ಬಾಬಾ ಅಂತ ದುಂಬಾಲು ಬಿದ್ದು ಅವರವರ ಬೇಳೆ ಬೇಯಿಸಿಕೊಂಡರು. ಮನೆಯಲ್ಲಿ ಊಟ ಇಲ್ಲ ಅಂದ ಮೇಲೆ ಭಿಕ್ಷೆ ಬೇಡೋದು ಸಹಜ ಅಲ್ವಾ? ಇನ್ನೊಬ್ಬರ ಸಮಾಧಿ ಮೇಲೆ ಬರ್ತೀವಿ ಎಂಬುದನ್ನು ಎಲ್ಲರೂ ತಲೆಯಿಂದ ತೆಗೆಯಲಿ ಎಂದು ಆರ್. ಶಂಕರ್ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ನಾನು ಸೋತಾಗಲೂ ಜನರ ಜತೆ ಇದ್ದೆ. ಇದು ಅವರಿಗೆ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಟಿಕೆಟ್ ವಿಚಾರ ಗಂಡ, ಹೆಂಡತಿ ಜಗಳ ಇದ್ದ ಹಾಗೆ. ಈಗ ಶಾಸಕ ಅರುಣ್ ಕುಮಾರ್ ನನ್ನನ್ನು ಟಾರ್ಗೆಟ್ ಮಾಡುತ್ತಾರೆ. ನಾನಿರದೇ ಇದ್ದರೆ ಈ ಉತ್ತರ ಕುಮಾರ ಶಾಸಕ ಆಗಿ ಬಿಡುತ್ತಿದ್ದನಾ? ಬ್ಯಾನರ್‌ನಲ್ಲಿ ಒಂದು ಫೋಟೊ ಇಲ್ಲ ಎಂದು ಕಿಡಿಕಾರಿದರು.
ನಾನು ತ್ರಿಕಾಲ ಜ್ಞಾನಿ ಅಲ್ಲ. ಸರ್ಕಾರ ತಂದವರನ್ನೇ ಅಡಿಪಾಯ ಮಾಡಿಕೊಂಡರು. ಎಲ್ಲರ ಪರವಾಗಿ ಮಾತನಾಡಿದ್ದೇ ಮುಳುವಾಯ್ತು. ನ್ಯಾಯಕ್ಕೆ ಜಯ ಇರುತ್ತೆ. ಲಕ್ಷ್ಮಣ ಸವದಿ ಯಾವುದರಲ್ಲೂ ಸಿಕ್ಕಿಹಾಕಿಕೊಂಡಿರಲಿಲ್ಲವಾ? ರಮೇಶ್ ಜಾರಕಿಹೊಳಿ ಅವರನ್ನು ಏನು ಮಾಡಿದರು? ಸೋತ ಎಂಟಿಬಿ ನಾಗರಾಜ್‌ಗೆ ಮಂತ್ರಿ ಮಾಡಲಿಲ್ಲವೇ? ಕುರುಬರು ಬೇಡ ಅಂತ ಆಗಲೇ ಹೇಳಬೇಕಿತ್ತು ಎಂದು ಹೇಳಿದರು.
ಇವರ ಲೆಟರ್ ಹೆಡ್‌ಗೂ ಕಿಮ್ಮತ್ತಿರಲಿಲ್ಲ. ಚೆನ್ನಾಗಿ ಕಾಲು ಕಸ ಮಾಡಿಕೊಂಡು ತುಳಿದರು. ದೆಹಲಿಗೆ ಹೋದೆ, ಬಂದೆ ಅಂತ ಹೇಳಿದರು. ಗೂಟ ಹೊಡೆದುಕೊಂಡು ಇಲ್ಲೇ ಇರ್ತಾರಾ? ಮುಖ್ಯಮಂತ್ರಿ ಆದವನು ಮಾಜಿ ಆಗಲೇ ಬೇಕು. ಮೇಲಿದ್ದವನು ಕೆಳಗೆ ಬರಬೇಕು, ಕೆಳಗಿದ್ದವನು ಮೇಲೆ ಬರಬೇಕು. ರಾಜಕೀಯ ಕಾಲ ಚಕ್ರ ಇದು ಎಂದು ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲರಿಗೂ ನಾನೇ ಟಾರ್ಗೆಟ್
ಕಾನೂನಿನ ಅಡಿ ಪರಿಶೀಲನೆ ಮಾಡಲು ನನ್ನ ಅಭ್ಯಂತರವಿಲ್ಲ. ರಾಣೆಬೆನ್ನೂರಿಗೆ ಕಾಲಿಟ್ಟಾಗಿನಿಂದಲು ದಾನ, ಧರ್ಮ ಮಾಡುತ್ತಾ ಬಂದಿದ್ದೇನೆ. ಇಲ್ಲಿ ಹಗಲು, ರಾತ್ರಿ ದರೋಡೆ ನಡೆಯುತ್ತಿದೆ. ಆರ್. ಶಂಕರ್ ಎಲ್ಲರಿಗೂ ಟಾರ್ಗೆಟ್ ಆಗಿದ್ದಾನೆ. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಂದರೂ ನಾನೇ ಟಾರ್ಗೆಟ್. ಶಂಕರ್ ಬೆಳೆಯಬಾರದು ಎನ್ನುವ ಉದ್ದೇಶ ಇರಬಹುದು ಎಂದು ಶಂಕರ್ ಬೇಸರ ಹೊರಹಾಕಿದರು.
ನನಗೆ ದಾನ, ಧರ್ಮ ಮಾಡುವ ಚಟ ಇದೆ. ಆಸ್ತಿ ಮಾರಿ ದಾನ ಧರ್ಮ ಮಾಡುತ್ತಿದ್ದೇನೆ. ದಾಖಲೆ ಇದೆ, ಬಿಲ್ ಇದೆ. ಬಿಲ್ ಇರುವುದನ್ನು ನೋಡಿ ಬಿಡಬೇಕು. ಎರಡು ಮೂರು ದಿನದಲ್ಲಿ ದಾಖಲೆ ಕೊಡಬೇಕು ಎಂದು ಹೇಳಿದ್ದಾರೆ. ಕ್ಷೇತ್ರದ ಜನರಿಗಾಗಿ 19ಕ್ಕೆ ಔತಣಕೂಟ ಇಟ್ಟುಕೊಂಡಿದ್ದೇನೆ. ದಾಖಲೆ ಕೊಡಲು ಒಂದು ವಾರದ ಗಡುವು ಕೇಳಿದ್ದೇನೆ ಎಂದು ಹೇಳಿದರು.
ಶಂಕರ್ ದುಡ್ಡು ತೆಗೆದುಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದಾರೆ. ದುಡ್ಡು ಕೊಟ್ಟವರು ಮತ್ತು ಆರೋಪ ಮಾಡಿದವರಿಬ್ಬರೂ ಧರ್ಮಸ್ಥಳಕ್ಕೆ ಬರಲಿ, ಆಣೆ ಮಾಡೋಣ. ನನ್ನ ಮೇಲಿನ ಆರೋಪ ಸಾಬಿತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ರಾಜಕೀಯ ಸನ್ಯಾಸತ್ವವನ್ನು ತಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: BJP Animated Video: ವಿರೋಧಿಗಳ ತೆಗಳಿಕೆಯೂ ಗೆಲುವಿನ ಹೆಜ್ಜೆಗಳೇ; ಮೋದಿ ಸಾಧನೆ ವಿಡಿಯೊ ವೈರಲ್
ಬೆಂಗಳೂರು, ರಾಣೆಬೆನ್ನೂರಲ್ಲಿ ದಾಳಿ
ಮಾಜಿ ಸಚಿವ ಆರ್. ಶಂಕರ್ ಅವರ ರಾಣೆಬೆನ್ನೂರು ನಗರದ ಬೀರಲಿಂಗೇಶ್ವರ ನಗರದ ನಿವಾಸ ಹಾಗೂ ಬೆಂಗಳೂರಿನ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿರುವ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯವರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು, ತಹಸೀಲ್ದಾರ್ ಹಾಗೂ ಎಸಿ ನೇತೃತ್ವದ ಅಧಿಕಾರಿಗಳ ತಂಡದಿಂದಲೂ ಪರಿಶೀಲನೆ ನಡೆದಿದೆ. ಈ ವೇಳೆ ಸಾರ್ವಜನಿಕರಿಗೆ ಹಂಚಲು ತಂದಿದ್ದ ವಸ್ತುಗಳು ಪತ್ತೆಯಾಗಿವೆ. ಆರ್.ಶಂಕರ್ ಭಾವಚಿತ್ರ ಇರುವ ಸೀರೆ ಬಾಕ್ಸ್, ಸ್ಕೂಲ್ ಬ್ಯಾಗ್, ವ್ಯಾನಿಟಿ ಬ್ಯಾಗ್ ಪತ್ತೆಯಾಗಿದೆ.
ಕೆಂಗೆಟ್ಟರೇ ಶಂಕರ್?
ರಾಣೆಬೆನ್ನೂರಿನ ಬೀರಲಿಂಗೇಶ್ವರ ನಗರದ ತಮ್ಮ ನಿವಾಸದಲ್ಲಿ ಆರ್. ಶಂಕರ್ ಬುಧವಾರ ಬೆಳಗ್ಗೆ ಮೌನವಾಗಿ ಕುಳಿತಿದ್ದರು. ಐಟಿ ದಾಳಿಯಿಂದ ಕಂಗೆಟ್ಟಿದ್ದಾರೆ ಎಂದು ಹೇಳಲಾಗಿದೆ. ಬೆಂಬಲಿಗರನ್ನೂ ಭೇಟಿಯಾಗದೆ, ಕ್ಷೇತ್ರದಲ್ಲೂ ಸಂಚರಿಸದೇ ಮನೆಯಲ್ಲೇ ಕುಳಿತುಕೊಂಡಿದ್ದರು. ಮನೆ ಮುಂದೆ ಬೆಂಬಲಿಗರು ಜಮಾಯಿಸಿದ್ದರೂ ಹೊರಗೆ ಕಾಣಿಸಿಕೊಳ್ಳಲಿಲ್ಲ.
ಇದನ್ನೂ ಓದಿ: US Drone: ಅಮೆರಿಕದ ಡ್ರೋನ್ನ್ನು ಹೊಡೆದುರುಳಿಸಿದ ರಷ್ಯಾ ಯುದ್ಧ ವಿಮಾನ
ಬಿಜೆಪಿ ಟಿಕೆಟ್ ಸಿಗೋದು ಡೌಟ್
ಆರ್. ಶಂಕರ್‌ಗೆ ಬಿಜೆಪಿ ಟಿಕೆಟ್ ಸಿಗುವುದು ಬಹುತೇಕ ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿದೆ.. ಇದೇ ಕಾರಣಕ್ಕಾಗಿ ಅವರು ಕಾಂಗ್ರೆಸ್ ಬಾಗಿಲು ಬಡಿದಿದ್ದಾರಾದರೂ ಅಲ್ಲಿಯೂ ಸೂಕ್ತ ಸ್ಪಂದನೆ ದೊರಕಿಲ್ಲ ಎಂದು ಹೇಳಲಾಗುತ್ತಿದ್ದು, ಪಕ್ಷೇತರ ಅಭ್ಯರ್ಥಿಯಾಗಿಯೇ ಕಣಕ್ಕಿಳಿಯಲು ಸಿದ್ಧತೆ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ.
ದಾಳಿ ಹಿಂದೆ ಬಿಜೆಪಿ ಪಾತ್ರವಿಲ್ಲ: ಸಿಎಂ ಬೊಮ್ಮಾಯಿ
ಮಾಜಿ ಸಚಿವ ಆರ್.ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿರುವ ವಿಚಾರದಲ್ಲಿ ಬಿಜೆಪಿ ಪಾತ್ರವಿಲ್ಲ, ಇದು ಬಿಜೆಪಿ ಪ್ರೇರಿತ ದಾಳಿ ಎಂಬುದು ಸುಳ್ಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟೀಕರಣ ನೀಡಿದ್ದಾರೆ.
ಇದನ್ನೂ ಓದಿ: Mahadeshwara Statue : ಮಾ. 18ಕ್ಕೆ ಮಹದೇಶ್ವರ ಪ್ರತಿಮೆ ಅನಾವರಣ; ಅದಕ್ಕೂ ಮುನ್ನವೇ ಮುಂಭಾಗದ ತಡೆಗೋಡೆ ಕುಸಿತ
ತನಿಖಾ ಸಂಸ್ಥೆಗಳಿಗೆ ಎಷ್ಟು ಮುಕ್ತ ವಾತಾವರಣ ನೀಡಿದ್ದೇವೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ. ಯಾರೇ ತಪ್ಪು ಮಾಡಿದರೂ ಅವರನ್ನು ಶಿಕ್ಷಿಸುವ ಕಾರ್ಯವನ್ನು ನಮ್ಮ ಸರ್ಕಾರ ಮಾಡುತ್ತಿದೆ. ಶಂಕರ್ ಪ್ರಕರಣದಲ್ಲಿಯೂ ತನಿಖಾ ಸಂಸ್ಥೆಗಳು ತಮ್ಮದೇ ಆದ ಕ್ರಮವನ್ನು ಕೈಗೊಳ್ಳುತ್ತದೆ.