ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಸಾಲು ಸಾಲು ರ‍್ಯಾಲಿ, ಸಮಾವೇಶ, ರೋಡ್ ಶೋ ಮಾಡಿದ ಮೋದಿ, ಅಬ್ಬರದ ಪ್ರಚಾರದ ಮೂಲಕ ಅಲೆ ಸೃಷ್ಟಿಸಿದ್ದಾರೆ. ರಾಜ್ಯದಲ್ಲಿ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ಬೆನ್ನಲ್ಲೇ ಸೋಮವಾರ ತಡರಾತ್ರಿ ನರೇಂದ್ರ ಮೋದಿ ಅವರು ವಿಶೇಷ ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಭಾಷಣದ ಮೋದಿ ಕನ್ನಡಿಗರಿಗೆ ಮೋದಿ ಮನವಿ ಮಾಡಿದ್ದಾರೆ.
“ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿಯು ಸಕಲ ರೀತಿಯಲ್ಲಿ ಶ್ರಮಿಸಿದೆ. ಮುಂದೆಯೂ ರಾಜ್ಯದ ಏಳಿಗೆಗೆ ಬಿಜೆಪಿಯು ಕಟಿಬದ್ಧವಾಗಿದೆ. ಕರುನಾಡಿನ ಉಜ್ವಲ ಭವಿಷ್ಯವೇ ನಮ್ಮ ಗುರಿಯಾಗಿದೆ. ಹೂಡಿಕೆ, ಉದ್ಯಮ, ನಾವೀನ್ಯತೆ, ಶಿಕ್ಷಣ, ಕೃಷಿ ಸೇರಿ ಸಕಲ ಕ್ಷೇತ್ರಗಳಲ್ಲಿ ರಾಜ್ಯವನ್ನು ನಂಬರ್ 1 ಮಾಡುವ ಮಹೋನ್ನತ ಗುರಿ ಹೊಂದಿದೆ. ಹಾಗಾಗಿ, ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಬೆಂಬಲ ನೀಡಿ” ಎಂಬುದಾಗಿ ಮನವಿ ಮಾಡಿದರು.
ಕರ್ನಾಟಕವನ್ನು ಉದ್ದೇಶಿಸಿ ಮೋದಿ ಮಾತು
ಬಸವಣ್ಣ, ಕೆಂಪೇಗೌಡರ ಸ್ಮರಣೆ
ಮೋದಿ ಅವರು ಮಾತಿನ ಮಧ್ಯೆ ಬಸವಣ್ಣ, ಕೆಂಪೇಗೌಡ ಸೇರಿ ಹಲವು ಮಹನೀಯರನ್ನು ಸ್ಮರಿಸಿದರು. “ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಂಪರ್ಕ, ಉದ್ಯಮ ಸರಳೀಕರಣ, ಮೂಲ ಸೌಕರ್ಯ ಸೇರಿ ಸಕಲ ಕ್ಷೇತ್ರಗಳಲ್ಲಿ ನಂಬರ್ 1 ಮಾಡಲು ಶ್ರಮಿಸಲಾಗಿದೆ. ಬಸವಣ್ಣ, ನಾಡಪ್ರಭು ಕೆಂಪೇಗೌಡ, ಕನಕದಾಸರು ಸೇರಿ ಹಲವು ಮಹನೀಯರು ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಅವರ ಆಶಯಗಳನ್ನು ಸಾಕಾರಗೊಳಿಸಲು ಬಿಜೆಪಿಯು ಶ್ರಮಿಸುತ್ತಿದೆ, ಮುಂದೆಯೂ ಶ್ರಮಿಸುತ್ತದೆ” ಎಂದು ಹೇಳಿದರು.
“ಕರ್ನಾಟಕದ ಪ್ರತಿಯೊಂದು ನಗರ, ಪಟ್ಟಣ, ಹಳ್ಳಿಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಶ್ರಮಿಸಲಿದೆ. ಪ್ರತಿಯೊಬ್ಬ ಕನ್ನಡಿಗರ ಕನಸು, ನನ್ನ ಕನಸಾಗಿದೆ. ನಿಮ್ಮ ಸಂಕಲ್ಪವೇ ನನ್ನ ಸಂಕಲ್ಪವಾಗಿದೆ. ಎಲ್ಲರೂ ಒಗ್ಗೂಡಿ ಜೀವನ ಮಟ್ಟ ಸುಧಾರಣೆಗೆ ಶ್ರಮಿಸೋಣ. ಜಗತ್ತಿನ ಯಾವ ಶಕ್ತಿಯೂ ಕರ್ನಾಟಕವನ್ನು ದೇಶದಲ್ಲಿಯೇ ನಂಬರ್ 1 ಆಗುವುದರಿಂದ ತಡೆಯಲು ಆಗುವುದಿಲ್ಲ. ಹಾಗಾಗಿ, ನಾನು ನಿಮ್ಮ ಬೆಂಬಲ ಬಯಸುತ್ತಿದ್ದೇನೆ. ಕರ್ನಾಟಕವನ್ನು ನಂಬರ್ 1 ಮಾಡಲು ಪ್ರತಿಯೊಬ್ಬರೂ ಮೇ 10ರಂದು ಮತದಾನ ಮಾಡಿ” ಎಂದು ಕೋರಿದರು.