ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕರ್ನಾಟಕದ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ (91) (S M Krishna) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಏರ್‌ಪೋರ್ಟ್ ರೋಡ್‌ನಲ್ಲಿರುವ (Airport Road) ಮಣಿಪಾಲ್ ಆಸ್ಪತ್ರೆಗೆ (Manipal Hospital) ಎಸ್.ಎಂ.ಕೃಷ್ಣ ಅವರನ್ನು ದಾಖಲಿಸಲಾಗಿದ್ದು, ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಎಸ್.ಎಂ.ಕೃಷ್ಣ ಅವರು ಕಳೆದ 12 ದಿನಗಳ ಹಿಂದೆಯೇ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯದಲ್ಲಿ ತೀವ್ರ ಏರುಪೇರಾದ ಕಾರಣ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ಅವರ ಆರೋಗ್ಯ ಸ್ಥಿತಿಯು ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ವೈದೇಹಿ ಆಸ್ಪತ್ರೆಗೆ ದಾಖಲಾದಾಗ ಎರಡು ದಿನಗಳಲ್ಲೇ ಅವರನ್ನು ಡಿಸ್‌ಚಾರ್ಜ್ ಮಾಡಲಾಗುತ್ತದೆ ಎಂಬುದಾಗಿ ವೈದ್ಯರು ತಿಳಿಸಿದ್ದರು. ಆದರೆ, ಚೇತರಿಸಿಕೊಳ್ಳದ ಕಾರಣ ಚಿಕಿತ್ಸೆ ಮುಂದುವರಿಸಲಾಗಿತ್ತು ಎಂದು ತಿಳಿದುಬಂದಿದೆ.
91 ವರ್ಷ ವಯಸ್ಸಿನ ಎಸ್.ಎಂ.ಕೃಷ್ಣ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದಾರೆ. ಮೊದಲು ಕಾಂಗ್ರೆಸ್ನಲ್ಲಿದ್ದು ಕೇಂದ್ರ ಸಚಿವರು, ಕರ್ನಾಟಕ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ, ನಂತರ ಪಕ್ಷ ತನ್ನನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿ 2017ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಎರಡು ವರ್ಷದ ಹಿಂದೆ ಅವರು ನಾಡಪ್ರಭು ಕೆಂಪೇಗೌಡ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿರುವ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಳೆದ ವರ್ಷ ಎಸ್.ಎಂ. ಕೃಷ್ಣ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆದಿದ್ದಾರೆ. “ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದ ಮಾತ್ರಕ್ಕೆ ನಾನು ಸಂಪೂರ್ಣವಾಗಿ ಸನ್ಯಾಸಿಯಾಗುತ್ತೇನೆ ಎಂದಲ್ಲ, ಪಕ್ಷ ಇಲ್ಲವೇ ನಾಯಕರು ಸಲಹೆ ಕೇಳಿದರೆ ಕೊಡುವುದಾಗಿಯೂ ಅವರು ತಿಳಿಸಿದ್ದರು. ʻʻಮೀಸಲಾತಿ ವಿಚಾರವಾಗಿ ಕೇಳಿದ್ರೆ ಸಲಹೆ ಕೊಡುತ್ತೇನೆ. ನಾನು ಮೇಲೆ ಬಿದ್ದು ಸಲಹೆ ಕೊಡುವುದಿಲ್ಲ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ವಿಚಾರದಲ್ಲಿ ಅವರು ಬಂದು ಸಲಹೆ ಕೇಳಿದರೆ ಕೊಡುತ್ತೇನೆ” ಎಂದಿದ್ದರು.
ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂಬ ಆರೋಪದ ವಿಚಾರವಾಗಿ ಸುದ್ದಿಗಾರರು ಪ್ರಶ್ನಿಸಿದಾಗ ʻʻನಾನೇ ರಿಟೈಡ್ ಆಗುತ್ತಿರುವಾಗ ಕಡೆಗಣಿಸುವ ಪ್ರಶ್ನೆ ಬರುವುದಿಲ್ಲ. ನಾನೇ ನಿವೃತ್ತಿ ಪಡೆಯುತ್ತಿದ್ದೇನೆʼʼ ಎಂದಿದ್ದರು. ರಾಜಕೀಯದಲ್ಲಿ ಯಾರೂ ಪೆನ್ಶನ್ ಕೊಡುವುದಿಲ್ಲ. ಹೀಗಾಗಿ ನನ್ನ ನಿವೃತ್ತಿ ನಿರ್ಧಾರವನ್ನು ಹೈಕಮಾಂಡ್ ಗಮನಕ್ಕೆ ತರುವ ಅವಶ್ಯಕತೆ ಇಲ್ಲ” ಎಂದಿದ್ದರು.