Site icon Vistara News

ಹಾಸನ ಶಾಸಕರು ಲೂಟಿ ಮಾಡಲು ಅವಕಾಶ: ಸಂಪುಟ ನಿರ್ಧಾರದ ಕುರಿತು ಹೆಚ್.ಡಿ. ಕುಮಾರಸ್ವಾಮಿ ಟೀಕೆ

devegowda not interested in president candidature says kumaraswamy

ಬೆಂಗಳೂರು: ಡಿಸೆಂಬರ್ ಹೊತ್ತಿಗೆ ಚುನಾವಣೆಗೆ ಹೋಗುವುದಕ್ಕೆ ಬಿಜೆಪಿ ಸಿದ್ಧತೆ ನಡೆಸಿದ್ದು,ಅದಕ್ಕೆ ಪೂರಕ ಸಂಪುಟ ಸಭೆ ಇದು ಎಂದು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಶುಕ್ರವಾರ ಜನತಾ ಮಿತ್ರ ಸಮಾವೇಶದ ಸಿದ್ಧತೆಗೆ ಸಂಬಂಧಿಸಿ ಬೆಂಗಳೂರು ನಗರ ಜೆಡಿಎಸ್ ಮುಖಂಡರ ಸಭೆಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹಾಸನದಲ್ಲಿ ಒಂದು ಬಡಾವಣೆ ನಿರ್ಮಾಣಕ್ಕೆ ಸುಮಾರು ಒಂದೂವರೆ ಸಾವಿರ ಕೋಟಿ ರೂ. ಹಣ ಇಡಲು ಕ್ಯಾಬಿನೆಟ್‌ ತೀರ್ಮಾನ ಮಾಡಿದೆ. ಮುಂದೆ ಇದೇ ಒಂದು ದೊಡ್ಡ ಹಗರಣ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆ ನಗರದ ಶಾಸಕರು ಚುನಾವಣೆಗೆ ಮೊದಲು ಹಣ ಲೂಟಿ ಮಾಡಲು ಅವಕಾಶ ಕೊಟ್ಟಂತೆಯೇ ಇದೆ. ಇದು ಅಭಿವೃದ್ಧಿ ವಿಚಾರವಾಗಿ ಅಥವಾ ಹಾಸನಕ್ಕೆ ಒಳ್ಳೆಯದಾಗುವ ರೀತಿಯಲ್ಲಿ ಇಲ್ಲ. ಬದಲಾಗಿ ಚುನಾವಣೆ ವಿಚಾರವಾಗಿ ಮಾಡಲಾಗುತ್ತಿದೆ ಅಷ್ಟೆ. ಕೆಲವು ವರ್ಗ, ಸಮಾಜವನ್ನು ಓಲೈಸುವುದು ಆಗುತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರದ ಕಾಲದಲ್ಲಿಯೂ ಇದೇ ರೀತಿ ಆಗಿತ್ತು. ಈಗಲೂ ಆಗುತ್ತಿದೆ ಎಂದು ಕಿಡಿಕಾರಿದರು.

ಮಕ್ಕಳಿಗೆ ಸೈಕಲ್ ನಮ್ಮ ಕಾಲದ ಯೋಜನೆ

ಮಕ್ಕಳಿಗೆ ಶರ್ಟ್ ಹಾಗೂ ಶೂ ಕೊಡಲು ಸಚಿವ ಸಂಪುಟ ಒಪ್ಪಿಗೆ ಕೊಡಲಾಗಿದೆ. ಆದರೆ ಗುಣಾತ್ಮಕ ಶೂ ಕೊಡುತ್ತಾರೊ ಗೊತ್ತಿಲ್ಲ. ಸೈಕಲ್ ಕಥೆ ಏನಾಯಿತು? ಸೈಕಲ್ ವಿಚಾರ ನಮ್ಮ ಕಾಲದ್ದು. ಆಗ ನಮ್ಮ ಹೆಸರೇ ಬರಲಿಲ್ಲ, ಯಡಿಯೂರಪ್ಪ ಕೊಟ್ಟಿದ್ದು ಅಂತಿರಾ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಸ್‌ಗಳ ವ್ಯವಸ್ಥೆ ಕೂಡ ಆಗಿಲ್ಲ ಇತ್ತ ಸೈಕಲ್ ಕೂಡ ಕೊಡುತ್ತಾ ಇಲ್ಲ. ಮಕ್ಕಳು ಹೇಗೆ ಶಾಲೆಗೆ ಬರುತ್ತಾರೆ? ಮಕ್ಕಳಿಗೆ ಸೈಕಲ್ ಕೊಡಬೇಕೆಂದು ಕುಮಾರಸ್ವಾಮಿ ಒತ್ತಾಯಿಸಿದರು.

ಇನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಗನಿಗೆ ಕ್ಷೇತ್ರ ಬಿಟ್ಟು ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಿಜೆಪಿ ಪಕ್ಷದಲ್ಲಿ ಬಿಎಸ್‌ವೈ ಪುತ್ರರಿಗೆ ಚುನಾವಣೆಗೆ ನಿಲ್ಲಲು ಒತ್ತಡ ಹಾಕಿದ್ದಾರೆ ಕಾರ್ಯಕರ್ತರು. ಅವರಿಗೆ ಚುನಾವಣೆ ಎದುರಿಸುವ ಶಕ್ತಿ ಇದೆ. ಅವರ ಪಕ್ಷದ ಕಾರ್ಯಕರ್ತರಿಗೆ ಸಮಸ್ಯೆ ಆಗಬಾರದೆಂದು ಹೀಗೆ ಹೇಳಿರಬೇಕು ಎಂದರು.

ಜಾತಿ ಅಸ್ತ್ರ ಬಳಸುವುದು ಸಹಜ

ಎಲ್ಲಾ ಪಕ್ಷದಲ್ಲೂ ಅವರದ್ದೇ ಆದ ಜಾತಿ ಅಸ್ತ್ರ ಬಳಸುತ್ತಿರುವುದು ಸಹಜ. ಇದಕ್ಕೆ ಮಹತ್ವ ಕೊಡಬೇಕಿಲ್ಲ. ಒಕ್ಕಲಿಗ ಸಮಾಜ ಎಂದೂ ವ್ಯಾಮೋಹಕ್ಕೆ ಒಳಗಾಗದೇ ಪ್ರಾಮಾಣಿಕರಿಗೆ ಬೆಂಬಲಿಸಲಿದ್ದಾರೆ. ಜಾತಿ ಅಸ್ತ್ರ ಉಪಯೋಗ ಮಾಡಿದರು ಕೂಡ ಎಲ್ಲರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಮಹತ್ವ ಕೊಡಬೇಕಿಲ್ಲ ಎಂದು ಅವರು ಹೇಳಿದರು.

ಪ್ರತಿಭಟನೆಯಿಂದ ಅನುಕಂಪ ಗಿಟ್ಟಿಸಲಾಗದು

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಇಡಿ ವಿಚಾರಣೆಗೆ ಕರೆದ ವಿಚಾರಕ್ಕೆ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಹೆಚ್ .ಡಿ.ಕುಮಾರಸ್ವಾಮಿ, ಪ್ರತಿಭಟನೆಯಿಂದ ಜನರ ಅನುಕಂಪ ಗಿಟ್ಟಿಸಲು ಸಾಧ್ಯವಿಲ್ಲ ಎಂದರು.

‘ಎ ಫೀಸ್ಟ್ ಆಫ್ ವಲ್ಚರ್ಸ್’ ಪುಸ್ತಕದ ಕೆಲ ಮಾಹಿತಿಯನ್ನು ಈ ಸಂದರ್ಭದಲ್ಲಿ ಹಂಚಿಕೊಂಡ ಕುಮಾರಸ್ವಾಮಿ, ಈ ಪುಸ್ತಕದಲ್ಲಿ ಕೆಲ ಆಘಾತಕಾರಿ ಸಂಗತಿಗಳನ್ನು ಬರೆಯಲಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಧಿಕಾರದಲ್ಲಿ ಇದ್ದಾಗ, ಒಂದು ಪ್ರಭಾವೀ ಖಾಸಗಿ ಕಂಪನಿ 15 ಸಾವಿರ ಕೋಟಿ ರೂಪಾಯಿ ಹಣ ದಂಡ ಕಟ್ಟಬೇಕಿತ್ತು. ಆದರೆ, ಅದೇ ಕಂಪನಿಗೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ಮನ್ನಾ ಮಾಡಲಾಯಿತು.

ಇಂತಹ ವಿಷಯಗಳ ಬಗ್ಗೆ ಪ್ರತಿಭಟನೆ ಮಾಡಬೇಕು. ಆದರೆ, ಇವರು ಈಗ ಇಲ್ಲಿ ಕಾರು ಸುಟ್ಟು ಹೋರಾಟ ಮಾಡುತ್ತಿದ್ದಾರೆ. ಈ ಪುಸ್ತಕವನ್ನು ಒಮ್ಮೆ ಓದಿದರೆ ಈ ದೇಶ ಎತ್ತ ಸಾಗುತ್ತಿದೆ ಎನ್ನುವುದು ಗೊತ್ತಾಗುತ್ತದೆ. ದೇಶದ ಸಂಪತ್ತು ಲೂಟಿ ಮಾಡಿದವರಿಗೆ ರಕ್ಷಣೆ ಮಾಡಿದ್ದರ ಬಗ್ಗೆಯೂ ಈ ಪುಸ್ತಕದಲ್ಲಿ ಆಘಾತಕಾರಿ ಮಾಹಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ತಿಳಿಸಿದರು.

ಚುನಾವಣೆಗೆ ತಯಾರಿ

ಚುನಾವಣೆಗೆ ತಾವು ಕೂಡ ತಯಾರಿ ಮಾಡುತ್ತಿದ್ದೇವೆ. ಪಂಚರತ್ನ ಯೋಜನೆ ರಥಯಾತ್ರೆ ಸಿದ್ಧತೆ ಮಾಡುತ್ತಿದ್ದು, ಆ ಕಾರ್ಯಕ್ರಮವೇ ನಮ್ಮ ಜೀವಾಳ. ಈ ಕಾರ್ಯಕ್ರಮದ ಮೂಲಕ ಸ್ವತಂತ್ರ ಸರ್ಕಾರ ರಚನೆಗೆ ಅವಕಾಶ ಕೊಡಿ ಎಂದು ಜನರ ಬಳಿ ಹೋಗುತ್ತೇನೆ. ಪ್ರತಿ ಮನೆಗೂ ತಲುಪಿಸುತ್ತೇನೆ ಎಂದು ಹೇಳಿದರು. ನಗರದಲ್ಲಿ ಜನತಾ ಮಿತ್ರ ಕಾರ್ಯಕ್ರಮ ನಡೆಯುತ್ತಿದೆ. ಈ ತಿಂಗಳು ಸಮಾವೇಶ ಮಾಡಬೇಕಿತ್ತು. ನನಗೆ ಆರೋಗ್ಯ ಸರಿಯಿಲ್ಲದ ಕಾರಣ ಸಮಾವೇಶವನ್ನು ಮುಂದೂಡಲಾಗಿದೆ. ಇನ್ನು ಕೆಲವೇ ದಿನದಲ್ಲಿ ಜನತಾ ಮಿತ್ರ ಸಮಾರೋಪ ಸಮಾರಂಭ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಅದಕ್ಕಾಗಿಯೇ ಸಭೆ ಕರೆಯಲಾಗಿದೆ ಎಂದು ಹೆಚ್ ಡಿಕೆ ತಿಳಿಸಿದರು.

ಶ್ರೀಗಳು ಗೌಡರ ಆರೋಗ್ಯ ವಿಚಾರಿಸಲು ಬಂದಿದ್ದರು

ಹೆಚ್.ಡಿ.ದೇವೇಗೌಡರ ಆರೋಗ್ಯ ವಿಚಾರಿಸಲು ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರು ಮನೆಗೆ ಭೇಟಿ ನೀಡಿದ್ದರು. ಮಾಜಿ ಪ್ರಧಾನಿಗಳಿಗೆ ಆಶೀರ್ವಾದ ಮಾಡಿದ್ದು, ಇದು ರಾಜಕೀಯ ಭೇಟಿಯಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

Exit mobile version